ಅರ್ಧನಾರೀಪುರ ತಪಾಸಣಾ ಠಾಣೆಯಲ್ಲಿ ಭಯದಿಂದ ಆರಕ್ಷರ ಕಾರ್ಯ । ಕ್ರೂರ ಪ್ರಾಣಿಗಳ ಭಯ । ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ತಮಿಳುನಾಡಿನ ಗಡಿ ಭಾಗದಲ್ಲಿರುವ ಅರ್ಧನಾರೀಪುರ ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ತಡೆಯುವ ಪೊಲೀಸರಿಗೆ ರಕ್ಷಣೆ ಇಲ್ಲದೆ ಭಯದಲ್ಲೇ ಕರ್ತವ್ಯ ನಿರ್ವಹಣೆ ಮಾಡುವ ಅನಿವಾರ್ಯ ಎದುರಾಗಿದೆ.
ಅರ್ಧನಾರೀಪುರ ಚೆಕ್ ಪೋಸ್ಟ್‌ನಲ್ಲಿ ಪೊಲೀಸರಿಗೆ ಯಾವುದೇ ಮೂಲ ಸೌಲಭ್ಯಗಳಿಲ್ಲದ ಕೊಠಡಿಯಿದ್ದು, ಕಾಡು ಪ್ರಾಣಿಗಳ ಹಾವಳಿಯ ನಡುವೆ ಗಡಿಭಾಗದಲ್ಲಿ ಹೋಗಿ ಬರುವ ವಾಹನಗಳ ನಿಗಾ ಇಡಲು ಮತ್ತು ಅಕ್ರಮ ತಡೆಗಟ್ಟಲು ನೇಮಕ ಮಾಡಲಾಗಿದೆ.ಅರ್ಧನಾರೀಪುರ ಚೆಕ್‌ಪೋಸ್ಟ್‌ನಲ್ಲಿ ಒಂದು ಕೊಠಡಿ ಪೊಲೀಸರಿಗೆ ನಿರ್ಮಾಣ ಮಾಡಿರುವುದು ಬಿಟ್ಟರೆ ಇಲ್ಲಿ ಶೌಚಾಲಯ ವ್ಯವಸ್ಥೆ, ಸ್ಥಾನದ ವ್ಯವಸ್ಥೆ ಇಲ್ಲದೆ ಶೌಚಾಲಯದ ವ್ಯವಸ್ಥೆಗೆ ಬಯಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗಡಿ ಚೆಕ್‌ಪೋಸ್ಟ್‌ನಲ್ಲಿರುವ ಒಂದು ಕೊಠಡಿ ಮತ್ತು ಸಿಸಿ ಕ್ಯಾಮೆರಾ ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳು ಇಲ್ಲವಾಗಿದೆ.
ತಮಿಳುನಾಡು ಮತ್ತು ಕರ್ನಾಟಕ ಎರಡು ಭಾಗದ ಅರಣ್ಯ ಪ್ರದೇಶ ಇರುವುದರಿಂದ ಇಲ್ಲಿಗೆ ಕಾಡಾನೆಗಳು ಮತ್ತು ಕರಡಿ ಸಹ ಬಂದು ಹೋಗಿರುವ ಪ್ರಕರಣಗಳು ಸಹ ಜರಗಿದೆ. ಅಲ್ಲದೇ, ಕೊಠಡಿಯಲ್ಲೂ ಸಹ ಈ ಹಿಂದೆ ವಿಷ ಜಂತು ಹಾವು ಸಹ ಸೇರಿಕೊಂಡು ಪ್ರಾಣಾಪಾಯದಿಂದ ಪೊಲೀಸರು ಪಾರಾಗಿರುವ ಘಟನೆ ಜರಗಿದ್ದರೂ ಪೊಲೀಸ್ ಇಲಾಖೆ ಸಿಬ್ಬಂದಿ ಇಲ್ಲಿ ಹಗಲು ರಾತ್ರಿ ಎನ್ನದೆ ಎರಡು ಪಾಳಿಯದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ.ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅರ್ಧನಾರೀಪುರ ಗಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಶೌಚಾಲಯಕ್ಕೆ ರಾತ್ರಿ ವೇಳೆ ಹೊರಗಡೆ ಬರಬೇಕಾಗಿದೆ. ಕಾಡು ಪ್ರಾಣಿಗಳು, ಈ ಭಾಗದಲ್ಲಿ ಹೆಚ್ಚಾಗಿ ಸಂಚರಿಸುವ ಕ್ರೂರ ಪ್ರಾಣಿಗಳು ಬರುವ ಸಾಧ್ಯತೆ ಇರುವುದರಿಂದ ಪೊಲೀಸರ ಕೊಠಡಿಗೆ ರಕ್ಷಣೆ ನೀಡುವ ಮೂಲಕ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅಂತರ್ ರಾಜ್ಯ ಗಡಿ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕಾಗಿದೆ.
ಅಂತರ್ ರಾಜ್ಯ ಗಡಿ ಚೆಕ್‌ಪೋಸ್ಟ್‌ನಲ್ಲಿ ಕಣ್ಗಾವಲಿನಲ್ಲಿ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕಾಗಿದ್ದು, ಹೆಚ್ಚಿನ ಸಿಬ್ಬಂದಿ ಜೊತೆಗೆ ಸೂಕ್ತ ಮೂಲಭೂತ ಸೌಲಭ್ಯಗಳ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.