ರೋಣ: ಸಮೀಪದ ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2013ರಿಂದ 2023ರ ವರೆಗೆ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಎಸ್.ಪಿ. ಅಡಗತ್ತಿ ಲಕ್ಷಾಂತರ ರು. ಶಾಲಾ ಹಣ ದುರ್ಬಳಕೆ ಮಾಡಿಕೊಂಡಿದ್ದು, ಈ ಕುರಿತು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನ ಕ್ರಮ ಜರುಗಿಸಬೇಕು ಎಂದು ಎಸ್‌ಡಿಎಂಸಿ ಸದಸ್ಯರು ಡಿಡಿಪಿಐ ಎಂ.ಎ. ರಡ್ಡೇರ ಅವರಿಗೆ ಆಗ್ರಹಿಸಿದರು.
ಶನಿವಾರ ಇಟಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದಿಯಾಗಿ ಸದಸ್ಯರು ಈ ಆಗ್ರಹ ಮಾಡಿದರು.ಈ ಕುರಿತು ಮಾಹಿತಿ ಹಕ್ಕಿನಡಿ ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿಗೆ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದಾಗ ಶಾಲೆಯಲ್ಲಿ ನಡೆದ ಅವ್ಯವಹಾರ ಆಡಳಿತಾತ್ಮಕವಾಗಿಲ್ಲ, ಅದು ವೈಯಕ್ತಿಕವಾಗಿದ್ದು ಎಂದು ದಾರಿ ತಪ್ಪಿಸುತ್ತಿದ್ದಾರೆ. ಈ ಕುರಿತು ಶಾಲೆಯಲ್ಲಿನ ಲೆಕ್ಕಪತ್ರ ಪರಿಶೀಲನೆಗೆ ತಂಡವೊಂದು ಬಂದಿದ್ದು, ತಂಡ ಸಮಗ್ರವಾಗಿ ಪರಿಶೀಲಿಸಿ, ಸಮವಸ್ತ್ರ, ಪುಸ್ತಕ, ಪಾಠೋಪಕರಣ, ಕಚ್ಚಾ ವಸ್ತು ಖರೀದಿ, ಪ್ರಯೋಗಾಲಯದ ಗೋಡೆಗೆ ಬಣ್ಣ ಖರೀದಿ, ಪ್ಲೈವುಡ್, ವಿದ್ಯುತ್ ಬಿಲ್ ಪಾವತಿಯಲ್ಲಿ ವ್ಯತ್ಯಾಸ, ಇಟ್ಟಿಗೆ ಖರೀದಿ ಸೇರಿದಂತೆ ಒಟ್ಟು 69 ಅಂಶಗಳಲ್ಲಿ ವ್ಯವಹಾರ ನಡೆದಿದ್ದು, ಈ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತು ಅಲ್ಲಿನ ಲೆಕ್ಕಪತ್ರ ಒಂದಕ್ಕೊಂದು ತಾಳೆ ಆಗದ ಇರುವ ಕುರಿತು ತಂಡ ಸಮಗ್ರ ವರದಿ ತಯಾರಿಸಿ ಬಿಇಒ ಅವರಿಗ ದಾಖಲೆ ಸಮೇತ ನೀಡಿದೆ. ಆದರೆ ಬಿಇಒ ರುದ್ರಪ್ಪ ಹುರಳಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. 2013ರಿಂದ 2023ರ ವರೆಗೆ ಮುಖ್ಯ ಶಿಕ್ಷಕರಾಗಿದ್ದ ಎಸ್.ಪಿ. ಅಡಗತ್ತಿ ಲಕ್ಷಾಂತರ ದುರ್ಬಳಕೆ ಮಾಡಿಕೊಂಡಿದ್ದು ಸಾಬೀತಾದರೂ ಇದು ನಮ್ಮ ಇಲಾಖೆಗೂ, ಶಾಲೆಯಲ್ಲಿನ ವ್ಯವಹಾರಕ್ಕೆ ಸಂಬಂಧವಿಲ್ಲ, ಅವರ ವೈಯಕ್ತಿಕವಾಗಿದ್ದು ಎಂದು ಬಿಇಒ ಅವರು ಶಾಲಾ ಆಡಳಿತ ಮಂಡಳಿಗೆ ಹಾರಿಕೆ ಉತ್ತರ ನೀಡಿದ್ದಾರೆ. ಇದನ್ನು ಗಮನಿಸಿದ್ದಲ್ಲಿ ಮುಖ್ಯ ಶಿಕ್ಷಕ ಎಸ್.ಪಿ. ಅಡಗತ್ತಿ ಅವರನ್ನು ರಕ್ಷಿಸುವಲ್ಲಿ ಬಿಇಒ ಪಾತ್ರ ಎದ್ದು ಕಾಣುತ್ತಿದೆ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ ಹಾದಿಮನಿ, ಸದಸ್ಯರಾದ ಮಲ್ಲಿಕಾರ್ಜುನ ಮಾವಿನಕಾಯಿ, ಬಸವರಾಜ ತೆಗ್ಗಿನಕೇರಿ, ಮುತ್ತಪ್ಪ ಅವಾರಿ ಆರೋಪಿಸಿದರು.
150 ಹಳೆಯ ತಗಡು ಮಾರಿದ ಹಣ ಗುಳಂ ಶಾಲೆಯ ಮೇಲ್ಚಾವಣಿಯ ತಗಡಿನ ಸೀಟಗಳು ತೆರವುಗೊಳಿಸಿ ಹೊಸ ತಗಡಿನ ಶೀಟ್ ಅಳವಡಿಸಲಾಗಿದೆ. ಆದರೆ ತೆರವುಗೊಳಿಸಿದ ಹಳೆಯ 150 ಶೀಟ್‌ಗಳನ್ನು ಬೇರೆಡೆ ಮಾರಾಟ ಮಾಡಿದ ಹಣವನ್ನು ಮುಖ್ಯ ಶಿಕ್ಷಕರಾಗಿದ್ದ ಎಸ್.ಪಿ. ಅಡಗತ್ತಿ ಮಾರಾಟ ಮಾಡಿರುವ ಕುರಿತು, ಮಾರಾಟ ಮಾಡಿ ಬಂದ ಹಣವನ್ನು ಶಾಲಾ ಖಾತೆಗೆ ತುಂಬುವದಾಗಲಿ ಮಾಡದೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಂತೆ ಅನೇಕ ಅವ್ಯವಹಾರ ಮಾಡಿದ್ದು, ಶಾಲೆಯ ಲಕ್ಷಾಂತರ ಹಣ ಲೆಕ್ಕಕ್ಕೆ ತಾಳೆಯಾಗುತ್ತಿಲ್ಲ. ಹಣ ದುರ್ಬಳಕೆ ಆರೋಪ ತಮ್ಮ ಮೇಲೆ ಬರುತ್ತಿದ್ದಂತೆ ಮುಖ್ಯ ಶಿಕ್ಷಕ ಎಸ್.ಪಿ. ಅಡಗತ್ತಿ ಬೇರೆ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಶಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ಅನುದಾನ ಮತ್ತು ಹಣ ದುರ್ಬಳಕೆ ಮಾಡಿಕೊಂಡ ಮುಖ್ಯ ಶಿಕ್ಷಕ ಎಸ್.ಪಿ. ಅಡಗತ್ತಿ ಅವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದಿರುವುದು ನಾನಾ ರೀತಿಯ ಸಂಶಯಕ್ಕೆ ಕಾರಣವಾಗಿದೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಡಿಡಿಪಿಐ ಅವರಿಗೆ ಒತ್ತಾಯಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯರು, ಈ ಕುರಿತು ಶಿಕ್ಷಣ ಇಲಾಖೆ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ, ಶಿಕ್ಷಣ ಇಲಾಖೆ ಕಮೀಶನರ್‌ಗೆ ಲಿಖಿತ ದೂರು ನೀಡಿದ್ದಾರೆ.ಡಿಡಿಪಿಐ ಎಂ.ಎ. ರಡ್ಡೇರ್ ಮಾತನಾಡಿ, ಈಗಾಗಲೇ ನೀವು ಬಿಇಒಗೆ ನೀಡಿದ ದೂರು ಮತ್ತು ಮಾಹಿತಿ ಒಳಗೊಂಡ ಸವಿವರವನ್ನು ನಮ್ಮ ಕಚೇರಿಗೆ ಸಲ್ಲಿಸಿ, ಅದನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು. ಜತೆಗೆ 2013ರಿಂದ 2023ರ ವರೆಗೆ ಶಾಲೆಯಲ್ಲಿ ಹಣಕಾಸಿನ ವ್ಯವಹಾರ, ಲೆಕ್ಕಪತ್ರ, ಅನುದಾನ ಬಳಕೆ ಏನಾಗಿದೆ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಈ ಅವಧಿಯಲ್ಲಿದ್ದ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರೊಂದಿಗೆ ಚರ್ಚಿಸಿ ಸಮಗ್ರ ವರದಿ ತಯಾರಿಸಲಾಗುವುದು. ಇದರಲ್ಲಿ ಲೋಪದೋಷಗಳು, ಹಣ ದುರ್ಬಳಕೆಯಾಗಿದ್ದು ಕಂಡು ಬಂದಲ್ಲಿ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಅಧ್ಯಕ್ಷ ಬಸವರಾಜ ಹಾದಿಮನಿ, ಉಪಾಧ್ಯಕ್ಷ ಶಾಂತಾ ಕಂಬಳಿ, ಸದಸ್ಯರಾದ ಮಲ್ಲಿಕಾರ್ಜುನ ಮಾವಿನಕಾಯಿ, ಬಸವರಾಜ ತೆಗ್ಗಿನಕೇರಿ, ಮುತ್ತಪ್ಪ ಅವಾರಿ, ಸಿದ್ದಪ್ಪ ಕರಡಿ, ಮಾಬುಸಾಬ್ ದೊಡ್ಡಮನಿ, ಜಯಶ್ರೀ ಉಮಚಗಿ, ಮಹಾಂತೇಶ ತೆಗ್ಗಿನಕೇರಿ ಉಪಸ್ಥಿತರಿದ್ದರು.