ಎಸ್ಸಿ-ಎಸ್ಟಿ ಹಣ ದುರ್ಬಳಕೆ; ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Mar 4, 2025 12:33 AM

ಸಾರಾಂಶ

ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಐದು ಗ್ಯಾರಂಟಿ ಘೋಷಿಸಿ ಈಗ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ.ಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್.ಸಿ., ಎಸ್.ಟಿ.ಗಳಿಗೆ ಅನ್ಯಾಯ ಮಾಡಿದೆ ಆರೋಪಿಸಿ ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವತಿಯಿಂದ ಸೋಮವಾರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಐದು ಗ್ಯಾರಂಟಿ ಘೋಷಿಸಿ ಈಗ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ.ಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್.ಸಿ., ಎಸ್.ಟಿ.ಗಳಿಗೆ ಅನ್ಯಾಯ ಮಾಡಿದೆ ಆರೋಪಿಸಿ ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವತಿಯಿಂದ ಸೋಮವಾರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, 2023 ಮತ್ತು 2024ನೇ ಸಾಲಿನಲ್ಲಿ ಒಟ್ಟು ಸುಮಾರು 25 ಸಾವಿರ ಕೋಟಿಯಷ್ಟು ಹಣವನ್ನು ಕಾಂಗ್ರೆಸ್ ಸರ್ಕಾರ ಬೇರೆ ಯೋಜನೆಗಳಿಗೆ ಬಳಸಿಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ ಮತ್ತು ಕುಟುಂಬವನ್ನು ಸಶಕ್ತಗೊಳಿಸಬೇಕು. ದಲಿತಕೇರಿ, ಕಾಲೋನಿಗಳಿಗೆ ಆದಿವಾಸಿ ಹಾಡಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಭೂ ಒಡೆತನ, ಭೂಮಿಗೆ ನೀರು ಸ್ವ ಉದ್ಯೋಗ, ಸ್ವಂತ ವಾಹನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿ ಶಾಲೆ, ಹಾಸ್ಟೆಲ್ ನಿರ್ಮಾಣ ಇದಕ್ಕಾಗಿ ಬಳಸಬೇಕಾದ ಹಣ ದುರುಪಯೋಗ ಮಾಡಿಕೊಂಡಿದ್ದು, ಬೇರೆ ಉದ್ದೇಶಕ್ಕೆ ಬಳಸಿ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈ ಸರ್ಕಾರ ಮರೆತಿದೆ ಎಂದು ದೂರಿದರು. ಅಹಿಂದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಿದೆ. ಇದರಿಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಎಸ್.ಸಿ., ಎಸ್.ಟಿ. ಸಮುದಾಯದ ವಿವಿಧ ಯೋಜನೆಗಳ ಅಭಿವೃದ್ಧಿ ಆಗಿಲ್ಲ. ಹಣ ವರ್ಗಾವಣೆಗೆ ಅವಕಾಶ ಇಲ್ಲದಂತೆ 7ಡಿ ರದ್ದು ಮಾಡಿದ್ದು ತಾನೇ ಎಂದು ಬೆನ್ನು ತಟ್ಟಿಕೊಳ್ಳುವ ಸರ್ಕಾರ 7ಸಿ ಕಾಯ್ದೆ ರದ್ದು ಮಾಡದೇ ಅನುದಾನವನ್ನು ಡೈವರ್ಟ್ ಮಾಡಿದೆ. ಬರಲಿರುವ ಬಜೆಟ್‍ನಲ್ಲಿ ಮತ್ತೆ 14,488 ಕೋಟಿ ರು. ಹಣ ದುರ್ಬಳಕೆ ಮಾಡಲು ಹೊಂಚು ಹಾಕಿ ಕುಳಿತಿದ್ದು, ದಲಿತರ ಮೀಸಲು ನಿಧಿಗೆ ಕನ್ನ ಹಾಕಲು ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿ, ದಲಿತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಬೃಹತ್ ಆಂದೋಲನ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದ ಅವರು, ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಎಸ್.ಸಿ., ಎಸ್.ಟಿ. ಸಮುದಾಯದ ಜನ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಕುಡಚಿ, ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್‌.ಎನ್.ಕೆ. ಪ್ರಮುಖರಾದ ಆರ್.ಹರೀಶ್, ಗಿರೀಶ್ ಭದ್ರಾಪುರ, ಮೂರ್ತಿ, ಲಿಂಗರಾಜ್, ಗುಡ್ಡಪ್ಪ, ಎಸ್. ದತ್ತಾತ್ರಿ, ಕೆ.ಜಿ. ಕುಮಾರಸ್ವಾಮಿ, ಗವಿಸಿದ್ದಪ್ಪ ದ್ಯಾಮಣ್ಣ, ಸುರೇಖಾ ಮುರಳೀಧರ್, ರಶ್ಮಿ ಶ್ರೀನಿವಾಸ್, ಚೈತ್ರಾ ನಾಯಕ್ ಮೊದಲಾದವರಿದ್ದರು.

Share this article