- ಕರ್ನಾಟಕ ಭೀಮ್ ಸೇನೆ ಆರೋಪ । ಶಿಥಿಲ ಕಾಂಪೌಂಡ್ ಸರಿಪಡಿಸಲು ₹20 ಲಕ್ಷ ಹಣ ದುರುಪಯೋಗ: ಆರೋಪ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ, ಏ.8ಪಾಲಿಕೆ 18ನೇ ವಾರ್ಡ್‌ನ ದೇವರಾಜ ಅರಸ್ ಬಡಾವಣೆ ಮುಖ್ಯರಸ್ತೆಯ ನಾಲ್ಕೈದು ದಶಕಗಳ ಅಂಚೆ ಇಲಾಖೆ ಸಿಬ್ಬಂದಿಗಾಗಿ ನಿರ್ಮಿಸಿದ್ದ ವಸತಿ ಗೃಹಗಳ ಸುತ್ತ ಹಳೆ ಕಾಂಪೌಂಡ್ ಶಿಥಿಲವಾಗಿದ್ದು, ಅದೇ ಕಾಂಪೌಂಡ್ ಮೇಲೆ ಕಬ್ಬಿಣದ ಗ್ರಿಲ್ ಅಳವಡಿಸಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಇಂಥ ಕಳಪೆ ಕಾಮಗಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಭೀಮ್ ಸೇನೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹಾಗೂ ಪಾಲಿಕೆ ಆಯುಕ್ತ ರೇಣುಕಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಆರ್.ಸೂರ್ಯಪ್ರಕಾಶ ನೇತೃತ್ವದಲ್ಲಿ ಉಭಯ ಅಧಿಕಾರಿಗಳನ್ನು ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಭೇಟಿ ಮಾಡಿದರು.
ಸೂರ್ಯಪ್ರಕಾಶ ಈ ಸಂದರ್ಭ ಮಾತನಾಡಿ, ದೇವರಾಜ ಅರಸು ಬಡಾವಣೆಯ ಅಂಚೆ ಇಲಾಖೆ ಸಿಬ್ಬಂದಿ ವಸತಿ ಗೃಹಗಳ ಸಮುಚ್ಛಯದ ಕಾಂಪೌಂಡ್ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸದಂತೆ ಕ್ರಮ ವಹಿಸಬೇಕು. ವಸತಿ ಗೃಹಗಳ ಕಾಂಪೌಂಡ್ ಶಿಥಿಲಾವಸ್ಥೆಯಲ್ಲಿದೆ. ಸುಮಾರು ₹20 ಲಕ್ಷ ಅನುದಾನ ದುರುಪಯೋಗ ಆಗುತ್ತಿದೆ. ಈ ಜಾಗದಲ್ಲಿ ಬೆಂಗಳೂರಿನ ಗುತ್ತಿಗೆದಾರರು, ಅಂಚೆ ಕಚೇರಿ ಅಧೀಕ್ಷಕರು, ಕೆಲ ಸಿಬ್ಬಂದಿ ಸೇರಿಕೊಂಡು, ಶಿಥಿಲ ಕಾಂಪೌಂಡ್ ಮೇಲೆ 100-150 ಕೆಜಿ ತೂಕದ ಗ್ರಿಲ್ ಹಾಕಿ, ಕಾಂಕ್ರೀಟ್ ಹಾಕದೇ, ಕಡಿಮೆ ತೂಕದ ಕಬ್ಬಿಣ, ಎಂ-ಸ್ಯಾಂಡ್, ಸಿಮೆಂಟ್ ಬಳಸಿದ್ದಾರೆ. ಕಳಪೆಮಟ್ಟದ ಪಿಲ್ಲರ್ ಹಾಕಿ, ಹಳೇ ಪಿಲ್ಲರ್ ಜೊತೆ ನಿಲ್ಲಿಸಿದ್ದಾರೆ ಎಂದು ದೂರಿದರು.ಅಧಿಕಾರಿ, ಸಿಬ್ಬಂದಿ ಹಾಗೂ ಗುತ್ತಿಗೆದಾರರು ಸೇರಿ, ಸರ್ಕಾರದ ಹಣವನ್ನು ದುರುಪಯೋಗ ಮಾಡಲು ಪ್ರಯತ್ನಿಸಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ, ಪಾಲಿಕೆ ಗಮನಕ್ಕೂ ಈ ವಿಚಾರ ತಂದಿಲ್ಲ. ಯಾವುದೇ ಕಾರ್ಯಾದೇಶ ಪ್ರತಿ ಹೊಂದಿಲ್ಲದೇ ಕಾಮಗಾರಿ ಕೈಗೊಂಡಿರುವುದು ಅಕ್ರಮ ಬಗ್ಗೆ ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯರು ಈ ಬಗ್ಗೆ ಸಂಘಟನೆಗೆ ಗಮನಕ್ಕೆ ತಂದಿದ್ದಾರೆ ಎಂದರು.
ಸಂಘಟನೆಯ ಎನ್.ಮಂಜುನಾಥ, ದಾದಾಪೀರ್, ಅಭಿ, ವಿಕಾಸ್, ವಿನಯ್, ಹುಲುಗಜ್ಜ, ಖಾಜಾ ಇತರರು ಇದ್ದರು.- - - ಕೋಟ್ ಕಾಮಗಾರಿ ಮಾಹಿತಿ ಕೋರಿದರೆ ಅಂಚೆ ಕಚೇರಿ ಅಧೀಕ್ಷಕರು, ಕಚೇರಿ ಸಹಾಯಕ ನಮ್ಮ ಮೇಲೆಯೇ ರೇಗಾಡುತ್ತಾರೆ. ಬೇರೆ ಬೇರೆಯವರಿಂದ ದೂರವಾಣಿ ಕರೆ ಮಾಡಿಸಿ, ಬೆದರಿಕೆ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಪಾಲಿಕೆಗೆ ದೂರು ನೀಡಿದ್ದೇನೆ. ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು
-- - -
-8ಕೆಡಿವಿಜಿ8:ದಾವಣಗೆರೆಯಲ್ಲಿ ಕಾಂಪೌಂಡ್ ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಭೀಮ್ ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಯಿತು.