ಪುತ್ರನಿಗೆ ತಪ್ಪಿದ ಟಿಕೆಟ್‌: ಇಂದು ಸಂಜೆ ಈಶ್ವರಪ್ಪ ಸಭೆ

KannadaprabhaNewsNetwork | Updated : Mar 15 2024, 01:31 PM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಹಾವೇರಿಯಿಂದ ಟಿಕೆಟ್‌ ತಪ್ಪಿದ ಬೆನ್ನಲ್ಲೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾ.15ರಂದು ಸಂಜೆ 5ಕ್ಕೆ ನಗರದ ಬಂಜಾರ ಕನ್ವೆನ್ಸನ್‌ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ 

ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಹಾವೇರಿಯಿಂದ ಟಿಕೆಟ್‌ ತಪ್ಪಿದ ಬೆನ್ನಲ್ಲೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾ.15ರಂದು ಸಂಜೆ 5ಕ್ಕೆ ನಗರದ ಬಂಜಾರ ಕನ್ವೆನ್ಸನ್‌ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಲಿದ್ದಾರೆ. 

ಇದು ಜಿಲ್ಲೆ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್‌ ಸಿಕ್ಕೆ ಸಿಗುತ್ತದೆ ಎಂದು ಆತ್ಮವಿಶ್ವಾಸದಲ್ಲಿದ್ದ ಈಶ್ವರಪ್ಪರಿಗೆ ಹೈಕಮಾಂಡ್‌ ಬಿಗ್‌ ಶಾಕ್ ನೀಡಿದೆ. ಯಡಿಯೂರಪ್ಪ ಅವರು ಮಾತು ಕೊಟ್ಟು ಮೋಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೇರ ಮಾಡುತ್ತಿದ್ದಾರೆ. 

ಈ ಹಿಂದೆ ಪುತ್ರನಿಗೆ ಟಿಕೆಟ್‌ ಸಿಗದಿದ್ದರೆ ಶಿವಮೊಗ್ಗದಲ್ಲಿ ಬಂಡಾಯ ಮಾಡುತ್ತಾರೆ ಎಂಬ ಮಾತು ದಟ್ಟವಾಗಿ ಕೇಳಿಬಂದಿತ್ತು. ಈ ಹಿನ್ನೆಲೆ ಶುಕ್ರವಾರ ಕರೆದಿರುವ ಬೆಂಬಲಿಗರ ಸಭೆ ತೀವ್ರ ಕುತೂಹಲ ಮೂಡಿಸಿದೆ. 

ಈಶ್ವರಪ್ಪ ಮುಂದಿನ ನಡೆ ಬಗ್ಗೆ ಈ ಸಭೆಯಲ್ಲಿ ಬಹುತೇಕ ತೀರ್ಮಾನವಾಗುವ ಸಾಧ್ಯತೆ ಇದೆ. ಆದರೆ, ಈ ಸಭೆಯಲ್ಲಿ ತೀರ್ಮಾನ ಪ್ರಕಟಿಸುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಕಳೆದೊಂದು ವಾರದಿಂದ ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಈ

 ಹಿಂದೆ ಯಡಿಯೂರಪ್ಪ ಅವರ ಮನೆಗೆ ತೆರಳಿಗೆ ಯಡಿಯೂರಪ್ಪ ಬಳಿ ಮನವಿಯನ್ನೂ ಮಾಡಿದ್ದರು. ಆದರೂ ಈಶ್ವರಪ್ಪ ಪುತ್ರನಿಗೆ ಟಿಕೆಟ್‌ ಕೈತಪ್ಪಿರುವುದರಿಂದ ಅವರ ಮುಂದಿನ ನಡೆ ಬಗ್ಗೆ ಕುರಿತು ಅಭಿಮಾನಿಗಳು ಹಾಗೂ ಬೆಂಬಲಿಗರ ಅಭಿಪ್ರಾಯ ಪಡೆಯಲು ಈ ಸಭೆ ನಡೆಸಲಾಗುತ್ತಿದೆ. 

ಇದನ್ನು ಈಶ್ವರಪ್ಪ ಸಹ ಬಹಿರಂಗವಾಗಿ ಹೇಳಿದ್ದಾರೆ. ಇಷ್ಟು ದಿನ ಪಕ್ಷ ನನಗೆ ತಾಯಿ, ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿಕೊಂಡು ಬಂದಿರುವ ಈಶ್ವರಪ್ಪ ಮುಂದೆ ನಡೆ ಬಗ್ಗೆ ಕಾರ್ಯಕರ್ತರಲ್ಲಿ ಕುತೂಹಲ ಹೆಚ್ಚಿಸಿದೆ.

ರಾಘವೇಂದ್ರರ ಗೆಲ್ಲಿಸುವ ಜವಾಬ್ದಾರಿ ನಮಗಿದೆ: ಶಾಸಕ ಚನ್ನಬಸಪ್ಪಶಿವಮೊಗ್ಗ: ಈಶ್ವರಪ್ಪ ನವರು ಭಾರತೀಯ ಜನತಾ ಪಾರ್ಟಿ ಗೆಲ್ಲಿಸಲು ಇಷ್ಟು ವರ್ಷ ಕೆಲಸ ಮಾಡಿದ್ದಾರೆ. 

ಬಿಜೆಪಿ ಗೆಲುವಿಗಾಗಿ ರಾಷ್ಟ್ರಭಕ್ತರು ಒಂದೆಡೆ ಸೇರಿ ಪಾರ್ಟಿ ಗೆಲ್ಲಿಸುತ್ತೇವೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ತಿಳಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಭೆ ಆಗಿದ್ದರೆ ನಾನು ಹೋಗುತ್ತೇನೆ. 

ರಾಷ್ಟ್ರಭಕ್ತರು ಇರುವ ಜಾಗವೇ ಭಾರತೀಯ ಜನತಾ ಪಕ್ಷ. ರಾಷ್ಟ್ರಕ್ಕಾಗಿ ಬದುಕುತ್ತಿರುವ ಪಾರ್ಟಿ ಭಾರತೀಯ ಜನತಾ ಪಾರ್ಟಿ. ರಾಘವೇಂದ್ರ ಗೆಲ್ಲಿಸುವ ಕೆಲಸವನ್ನು ಮಾಡುವ ಜವಾಬ್ದಾರಿ ನಮಗಿದೆ ಎಂದು ಶುಕ್ರವಾರ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕರೆದಿರುವ ಬೆಂಬಲಿಗರ ಸಭೆ ಕುರಿತು ಪ್ರತಿಕ್ರಿಯೆ ನೀಡಿದರು.

Share this article