ವಿದ್ಯಾಕಾಶಿಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork | Published : Jan 10, 2025 12:49 AM

ಸಾರಾಂಶ

ಪ್ರತಿಭಟನಾಕಾರರು ಇಡೀ ನಗರ ಸುತ್ತಿ ಸರ್ಕಾರಿ ಸಂಸ್ಥೆ, ಶಾಲಾ-ಕಾಲೇಜು ಬಂದ್‌ ಮಾಡಿಸಿದರು. ಅದರಲ್ಲೂ ಕೃಷಿ ವಿವಿ ಕ್ಯಾಂಪಸ್‌, ಮಹಾನಗರ ಪಾಲಿಕೆ, ವಾಣಿಜ್ಯ ತೆರಿಗೆ ಇಲಾಖೆ ಸೇರಿದಂತೆ ವಿವಿಧೆಡೆ ಒತ್ತಾಯ ಪೂರ್ವಕವಾಗಿ ತರಗತಿ, ಕಚೇರಿ ಬಂದ್‌ ಮಾಡಿಸಿದರು.

ಧಾರವಾಡ:

ಡಾ. ಬಿ.ಆರ್‌. ಅಂಬೇಡ್ಕರ್‌ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆ ವಿರೋಧಿಸಿ ವಿವಿಧ ದಲಿತಪರ ಸಂಘಟನೆಗಳು ಗುರುವಾರ ನೀಡಿದ್ದ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಬಂದ್‌ಗೆ ಧಾರವಾಡದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ ಚಳಿಯಲ್ಲಿಯೇ ಶುರುವಾದ ಬಂದ್‌ ಆಚರಣೆಯ ಚಟುವಟಿಕೆಗಳು ಮಧ್ಯಾಹ್ನದ ಬಿಸಿಲೇರುತ್ತಿದ್ದಂತೆ ತಣ್ಣಗಾದವು. ನಗರದ ಜ್ಯುಬಿಲಿ ವೃತ್ತದಲ್ಲಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿದರು. ನಂತರ ಬೈಕ್‌ಗಳಲ್ಲಿ ನಗರಾದ್ಯಂತ ಸಂಚರಿಸಿದರು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಂಪೂರ್ಣ ಬಂದಾಗಿದ್ದರೆ, ಖಾಸಗಿ ವಾಹನಗಳು ಮಾತ್ರ ರಸ್ತೆ ಮೇಲಿದ್ದವು.ಪುತ್ಥಳಿಗೆ ಮಾಲಾರ್ಪಣೆ:

ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದ ಬಳಿಕ ಅಂಜುಮನ್ ವೃತ್ತ, ವಿವೇಕಾನಂದ ವೃತ್ತ, ಸುಭಾಷ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾಕಾರರು ಸಂಚರಿಸಿದರು. ಕೆಲವು ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದರೆ, ಕೆಲವು ಅಂಗಡಿಗಳನ್ನು ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಬಂದ್‌ ಮಾಡಿಸಿದರು. ವೈದ್ಯಕೀಯ ಸೇವೆ, ಔಷಧಿ ಅಂಗಡಿ, ಪೆಟ್ರೋಲ್‌ ಬಂಕ್‌, ಹಾಲಿನ ಅಂಗಡಿಗಳು ಎಂದಿನಂತೆ ಕಾರ್ಯ ನಡೆಸಿದವು. ಜಿಲ್ಲಾಸ್ಪತ್ರೆ, ಹೆರಿಗೆ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಸೇವೆಗಳು ಲಭಿಸಿದವು.ಪ್ರಮುಖ ಮಾರುಕಟ್ಟೆ ಪ್ರದೇಶದ ರಸ್ತೆಗಳ ಅಂಗಡಿ-ಮುಂಗಟ್ಟು ಮುಚ್ಚಲ್ಪಟ್ಟಿದ್ದವು. ಇದರಿಂದ ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.ಅಘೋಷಿತ ಸಾರಿಗೆ ಬಂದ್‌:

ಸಾರಿಗೆ ಸಂಸ್ಥೆ, ಬಿಆರ್‌ಟಿಎಸ್ ಹಾಗೂ ಬೇಂದ್ರ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಬೇರೆಡೆಯಿಂದ ಬಂದ ಪ್ರಯಾಣಿಕರು ಪರದಾಡಿದರು. ಹೊರ ಜಿಲ್ಲೆಗಳಿಂದ ಬರುವ ಬಸ್‌ಗಳು ಬೈಪಾಸ್‌ ರಸ್ತೆ ಸೇರಿದಂತೆ ಹೊರ ವಲಯದಲ್ಲಿಯೇ ಪ್ರಯಾಣಿಕರನ್ನು ಇಳಿಸಿದವು. ಇದನ್ನೇ ಲಾಭವಾಗಿ ಬಳಸಿಕೊಂಡ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರು. ಸರ್ಕಾರಿ, ಖಾಸಗಿ ಶಾಲೆಗಳ 1ರಿಂದ 10ನೇ ತರಗತಿ ವರೆಗೆ ರಜೆ ಘೋಷಿಸಲಾಗಿತ್ತು.ಬೆಳಗ್ಗೆಯಿಂದ ಸಂಜೆ ವರೆಗೆ ಬಂದ್ ನಡೆಸಿದ ಸಂಘಟನೆ ಮುಖಂಡರು, ಅಮಿತ್ ಶಾ ವಜಾಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ದಲಿತ ಮುಖಂಡರಾದ ಪರಮೇಶ್ವರ ಕಾಳೆ, ಲಕ್ಷ್ಮಣ ಬಕ್ಕಾಯಿ, ಲಕ್ಷ್ಮಣ ದೊಡ್ಡಮನಿ, ಸುಧೀರ ಮುಧೋಳ, ಮಾರುತಿ ದೊಡ್ಡಮನಿ, ಪಾಪು ಧಾರೆ, ಅರವಿಂದ ಎಂ., ಸೇರಿದಂತೆ ಅನೇಕರಿದ್ದರು.ಬಂದ್‌ಗೆ ಬಿಜೆಪಿ ಮುಖಂಡ ಸಾಥ್‌ಧಾರವಾಡದಲ್ಲಿ ನಡೆದ ಬಂದ್‌ನಲ್ಲಿ ಬಿಜೆಪಿ ಮುಖಂಡರೊಬ್ಬರು ಪಾಲ್ಗೊಂಡ ಘಟನೆ ನಡೆಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅವಧಿಯಲ್ಲಿ ಜಂಗಲ್‌ ರೆಸಾರ್ಟ್‌ ಅಧ್ಯಕ್ಷರಾಗಿದ್ದ ರಾಜು ಕೋಟೆನ್ನವರ ಅಮಿತ್ ಶಾ ಹೇಳಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮುಂದೆ ನಿಂತು ಅಂಗಡಿ-ಮುಂಗಟ್ಟು ಬಂದ್‌ ಮಾಡಿಸುತ್ತಿದ್ದರು.ಕಪಾಳ ಮೋಕ್ಷ

ಬಂದ್‌ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್‌ ಬಂದ್‌ ಇದ್ದವು. ಈ ವೇಳೆ ಧಾರವಾಡದ ಶ್ರೀನಗರ ಬಳಿ ಬೀದಿಬದಿಗೆ ಇಡ್ಲಿ, ಚಟ್ನಿ ಮಾರುತ್ತಿದ್ದ ವ್ಯಾಪಾರಸ್ಥರ ಮೇಲೆ ದಲಿತ ಮುಖಂಡರು ದರ್ಪ ಮೆರೆದರು. ಮುಖಂಡ ಎಂ. ಅರವಿಂದ ಅಂಗಡಿ ವ್ಯಾಪಾರಿಗೆ ನಿಂದಿಸಿದಲ್ಲದೆ ಕಪಾಳ ಮೋಕ್ಷ ಮಾಡಿದರು.ಶಾಲಾ-ಕಾಲೇಜು ಬಂದ್‌ ಮಾಡಿಸಿದರುಪ್ರತಿಭಟನಾಕಾರರು ಇಡೀ ನಗರ ಸುತ್ತಿ ಸರ್ಕಾರಿ ಸಂಸ್ಥೆ, ಶಾಲಾ-ಕಾಲೇಜು ಬಂದ್‌ ಮಾಡಿಸಿದರು. ಅದರಲ್ಲೂ ಕೃಷಿ ವಿವಿ ಕ್ಯಾಂಪಸ್‌, ಮಹಾನಗರ ಪಾಲಿಕೆ, ವಾಣಿಜ್ಯ ತೆರಿಗೆ ಇಲಾಖೆ ಸೇರಿದಂತೆ ವಿವಿಧೆಡೆ ಒತ್ತಾಯ ಪೂರ್ವಕವಾಗಿ ತರಗತಿ, ಕಚೇರಿ ಬಂದ್‌ ಮಾಡಿಸಿದರು. ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರನ್ನು ತಳ್ಳಿದ ಘಟನೆಗಳು ನಡೆದವು.

ವಾದ-ವಾಗ್ದಾದನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕಲಾಪ ಬಂದ್‌ ಮಾಡಲು ಹೋರಾಟಗಾರರು ನ್ಯಾಯಾಲಯಕ್ಕೆ ನುಗ್ಗಿದಾಗ ಪೊಲೀಸರೊಂದಿಗೆ ವಕೀಲರು ವಾಗ್ವಾದಕ್ಕೆ ಇಳಿದ ಘಟನೆ ನಡೆಯಿತು. ಕೋರ್ಟ್ ಒಳಗೆ ಪ್ರತಿಭಟನಾಕಾರರು ಹೋಗಿದ್ದರಿಂದ ಇದನ್ನು ಪೊಲೀಸರು ಪ್ರಶ್ನಿಸಿದರು. ಆಗ ಪೊಲೀಸರ ವಿರುದ್ಧವೇ ಪ್ರತಿಭಟನಾ ಪರ ಕೆಲವು ವಕೀಲರು ಜಗಳಕ್ಕಿಳಿದರು. ನಂತರ ಕೋರ್ಟ್ ಕಲಾಪಕ್ಕೆ ಧಕ್ಕೆ ತರದಂತೆ ಪೊಲೀಸರು ಎಚ್ಚರಿಕೆ ನೀಡಿ ಹೊರಟರು.

Share this article