ಕನ್ನಡಪ್ರಭ ವಾರ್ತೆ ಆನಂದಪುರ
ಸಾಗರ ಶಾಸಕರು ಬ್ಲಾಕ್ ಮೇಲ್ ತಂತ್ರ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯಡಿಯೂರಪ್ಪನವರ ಕುಟುಂಬದಿಂದ ಶಾಸಕರಾದ ಇವರು ಆ ಕುಟುಂಬದ ವಿರುದ್ಧವೇ ಇಲ್ಲಸಲ್ಲದ ಮಾತನಾಡುವುದು ಸರಿಯಲ್ಲ. ಸಿಗಂದೂರು ಸೇತುವೆ ಯಡಿಯೂರಪ್ಪನವರ ಬದ್ಧತೆ, ಸಂಸದರ ಶ್ರಮದ ಫಲದಿಂದಾಗಿ ನಿರ್ಮಾಣವಾಗಿದೆ. ಶಾಸಕರು ಇದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಕರೂರು, ಬಾರಂಗಿ ಹೋಬಳಿಯ ಜನರ ಬಹು ನಿರೀಕ್ಷಿತ ಅಂಬರಗೊಂಡ್ಲು ಕಳಸವಳ್ಳಿ ಸೇತುವೆ ಸಿಗಂದೂರು ದೇವಿಯ ಮೇಲಿರುವ ಭಕ್ತಿ ಹಾಗೂ ಈ ಭಾಗದ ಜನರ ಕಾಳಜಿಯಿಂದ ನಿರ್ಮಾಣಗೊಂಡಿದೆ. ಈ ಸೇತುವೆಗೆ ಸಂಸದರು ಸೂಚಿಸಿದಂತೆ ಸಿಗಂದೂರು ಸೇತುವೆ ಎಂದು ಹೆಸರನ್ನು ಇಟ್ಟಿದ್ದು, ಜುಲೈ 14ರಂದು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸವಾಗಿದೆ ಎಂದರು.ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕನ್ನಡಕ, ಕೋಟು ಹಾಕಿ ಕೈಬೀಸಿದರೆ ಅಭಿವೃದ್ಧಿಯಾಗುವುದಿಲ್ಲ. ಬ್ಲಾಕ್ ಮೇಲ್ ತಂತ್ರ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ. ಸಾಗರ ಕ್ಷೇತ್ರ ಅಭಿವೃದ್ಧಿಯಲ್ಲಿ ಈಗ 10 ವರ್ಷ ಹಿಂದೆ ಹೋಗಿದೆ. ಶಾಸಕರು ತಮ್ಮ ನಾಯಕತ್ವದಲ್ಲಿ ಯಾವುದೇ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಬಂಗಾರಪ್ಪ, ಯಡಿಯೂರಪ್ಪನವರು ಅಲೆ ಹಾಗೂ ಕಾಗೋಡು ತಿಮ್ಮಪ್ಪನವರ ಸೋಲಿನ ಅನುಕಂಪ ಇವರ ಗೆಲುವಿಗೆ ಕಾರಣವಾಗಿತ್ತು. ಕಾಗೋಡು ತಿಮ್ಮಪ್ಪ ಹಾಗೂ ಹರತಾಳು ಹಾಲಪ್ಪನವರ ಅವಧಿಯಲ್ಲಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ ಈಗ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
ಯಡಿಯೂರಪ್ಪ ಹಾಗೂ ಸಂಸದ ಬಿ. ವ್ಯೆ. ರಾಘವೇಂದ್ರ ರವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಇದನ್ನು ನಾವು ಸಹಿಸುವುದಿಲ್ಲ. ಶಾಸಕರಾದವರು ಶಾಸಕರ ಘನತೆಗೆ ಹಾಗೆ ವಯಸ್ಸಿಗೆ ತಕ್ಕಂತೆ ಮಾತನಾಡುವುದನ್ನು ಕಲಿಯಬೇಕು ಎಂದರು.ಸಂಸದರು ಆನಂದಪುರ ರೈಲ್ವೆ ನಿಲ್ದಾಣದ ಮೇಲ್ ಸೇತುವೆ ನಿರ್ಮಾಣಕ್ಕೆ 2 ಕೋಟಿ 54 ರು. ಲಕ್ಷ ಅನುದಾನ ಬಿಡುಗಡೆಮಾಡಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಜು.14 ರಂದು ಸಾಗರದಲ್ಲಿ ನಡೆಯಲಿರುವ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾಗರ ಹಾಗೂ ಹೊಸನಗರ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ್, ಗ್ರಾಪಂ ಅಧ್ಯಕ್ಷ ಕೆ. ಗುರುರಾಜ್, ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಜಾನಪದ ಕಲಾವಿದ ಜಿ.ಎಸ್ ಮಂಜಪ್ಪ ಉಪಸ್ಥಿತರಿದ್ದರು.