ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಎರಡು ಯೋಜನೆಗಳ ಕಾಮಗಾರಿ ಭೂಮಿಪೂಜೆಗೆಂದು ಗ್ರಾಮಕ್ಕೆ ಆಗಮಿಸಿದ್ದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಭೆಯಲ್ಲಿಯೇ ಪಿಡಿಒ ಜ್ಯೋತಿ ಗೋವಿನಕೊಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.ತಾಲೂಕಿನ ನಾಗರಾಳ ಎಸ್ಪಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ₹ 150 ಲಕ್ಷ ಅನುದಾನದಲ್ಲಿ ನಾಗರಾಳ ಎಸ್ಪಿ ಗ್ರಾಮದಿಂದ ಚಿಮ್ಮಲಗಿ ಗ್ರಾಮೀಣ ರಸ್ತೆ 0.00 ದಿಂದ 1.50 ಕಿ.ಮೀ.ವರೆಗೆ ರಸ್ತೆ ಸುಧಾರಣೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ₹ 23 ಲಕ್ಷ ಅನುದಾನದಲ್ಲಿ ನಾಗರಾಳ ಎಸ್ಪಿ ಗ್ರಾಮದ ಅಂಗನವಾಡಿ ಕೇಂದ್ರ 01 ಭೂಮಿಪೂಜೆ ಕಾರ್ಯಕ್ರಮ ಶನಿವಾರ ನಾಗರಾಳ ಎಸ್ಪಿ ಗ್ರಾಮದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಗ್ರಾಮದ ಅನೇಕ ಹಿರಿಯರು ಗ್ರಾಪಂ ಪಿಡಿಒ ಬಗ್ಗೆ ಆರೋಪ ಮಾಡತೊಡಗಿದರು. ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು. ಸಾರ್ವಜನಿಕರ ಆರೋಪಕ್ಕೆ ಸಿಟ್ಟಾದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪಿಡಿಒ ಅವರನ್ನು ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು.ಮೇಡಂ ನಿಮ್ಮ ಬಗ್ಗೆ ಗ್ರಾಮಸ್ಥರಿಂದ ಮೇಲಿಂದ ಮೇಲೆ ದೂರುಗಳು ಬರುತ್ತಿವೆ. ನನಗೆ ಸಹಿಸಲು ಆಗುತ್ತಿಲ್ಲ. ಜನರಿಗೆ ಅನಾನುಕೂಲವಾಗುವ ತರಹ ನಡೆದುಕೊಳ್ಳುತ್ತಿದ್ದೀರಿ. 48 ಜನ ಕೂಲಿ ಕಾರ್ಮಿಕರಿಗೆ ಕೂಲಿ ಜಮಾ ಆಗಿಲ್ಲವಂತೆ. ಅವರು ಹೇಗೆ ಜೀವನ ಮಾಡಬೇಕು. ಯಾಕೆ ಕೂಲಿ ಕಾರ್ಮಿಕರಿಗೆ ತೊಂದರೆ ಮಾಡುತ್ತಿದ್ದೀರಿ. ಅದನ್ನು ಬೇಗ ಸರಿಪಡಿಸಿ, ಇನ್ನೊಮ್ಮೆ ನಿಮ್ಮ ಮೇಲೆ ದೂರು ಬಾರದಂತೆ ನಡೆದುಕೊಳ್ಳಿ ಎಂದು ಪಿಡಿಒಗೆ ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಮಸ್ಥರು ಗ್ರಾಮದ ಹಲವಾರು ಸಮಸ್ಯೆಗಳನ್ನು ಶಾಸಕರ ಮುಂದೆ ಸಭೆಯಲ್ಲಿಯೇ ತೋಡಿಕೊಂಡರು. ಗ್ರಾಮದ ನೈರ್ಮಲ್ಯ, ಹದಗೆಟ್ಟ ರಸ್ತೆಗಳು, ತೆರೆದ ಗಟಾರ ನೀರು ರಸ್ತೆ ಮೇಲೆ ಹರಿಯುವುದು, ಈ ಮುಂತಾದ ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದಾಗ ಶಾಸಕರು ಕೆಲಹೊತ್ತು ಪಿಡಿಒ ಅವರ ಮೇಲೆ ಗರಂ ಆದಾಗ ಸಭೆ ಅರ್ಧಕ್ಕೆ ಮೊಟಕುಗೊಂಡಿತು.ಬ್ಲಾಕ್ ಅಧ್ಯಕ್ಷ ಸಂಜಯ ಬರಗುಂಡಿ, ಗ್ರಾಪಂ ಪಿಡಿಒ ಜ್ಯೋತಿ ಗೋವಿನಕೊಪ್ಪ, ಅಭಿಯಂತರ ಬಿರಾದಾರ, ಅಶೋಕ ತೋಪಲಕಟ್ಟಿ, ದೇವೇಂದ್ರಪ್ಪ ಮೇಟಿ, ಗ್ರಾಮದ ಹಿರಿಯರಾದ ಗೋಪಾಲ ಜಕ್ಕಪ್ಪನವರ, ಯಲ್ಲಪ್ಪ ಹಿರ್ಯಾಳ, ಲೆಂಕೆಪ್ಪ ಹಿರೇಕುರುಬರ, ಮಲ್ಲಪ್ಪ ಪಾಟೀಲ, ಮಂಜುನಾಥ ವಾಲೀಕಾರ ವೈ.ಆರ್. ಹೆಬ್ಬಳ್ಳಿ ಸೇರಿದಂತೆ ಇನ್ನೂ ಅನೇಕರು ಇದ್ದರು.
ನಾನು ಕಾನೂನು ಪ್ರಕಾರ ನಡೆದುಕೊಂಡಿದ್ದೇನೆ. ನರೇಗಾ ಕೂಲಿಕಾರ್ಮಿಕರಿಗೆ ಆದ ತೊಂದರೆಯಲ್ಲಿ ನನ್ನ ತಪ್ಪಿಲ್ಲ. ಅದರಲ್ಲಿ ಅವರದೇ ತಪ್ಪಿದೆ. ಆದರೆ, ಶಾಸಕರ ಮುಂದೆ ಜನ ನನ್ನ ಮೇಲೆ ತಪ್ಪು ಹೊರಿಸಿದರು.-ಜ್ಯೋತಿ ಗೋವಿನಕೊಪ್ಪ ಪಿಡಿಒ ನಾಗರಾಳ ಎಸ್ಪಿ ಗ್ರಾಪಂ