ಮಾಂಜ್ರಾ ನೀರಿನ ಸದ್ಬಳಕೆಯಾಗಲಿ: ಶಾಸಕ ಡಾ.ಬೆಲ್ದಾಳೆ

KannadaprabhaNewsNetwork | Published : Dec 17, 2024 12:45 AM

ಸಾರಾಂಶ

ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕಾರಂಜಾ ಸಂತ್ರಸ್ತರ ಬೇಡಿಕೆಗೆ ಇನ್ನಾದರೂ ಸ್ಪಂದಿಸಬೇಕು ಎಂದು ಬೆಳಗಾವಿ ಅಧಿವೇಶನದಲ್ಲಿ ಡಾ. ಬೆಲ್ದಾಳೆ ಕೋರಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಗೋದಾವರಿ ಜಲಾನಯನ ಪ್ರದೇಶದಲ್ಲಿ ಬೀದರ್ ಜಿಲ್ಲೆಯಲ್ಲಿ ಹರಿಯುವ ಮಾಂಜ್ರಾ ನದಿ ನೀರಿನ ಸಂಪೂರ್ಣ ಬಳಕೆಗೆ ಸರ್ಕಾರ ಯೋಜನೆ ರೂಪಿಸಬೇಕೆಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅಗ್ರಹಿಸಿದರು. ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ಉತ್ತರ‌ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿ, ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಗೋದಾವರಿ ಜಲಾನಯನದಡಿ ಜಿಲ್ಲೆಗೆ 22 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ನಾವು ಸುಮಾರು 16ಟಿಎಂಸಿ ನೀರು ಬಳಸುತ್ತಿದ್ದು, ಉಳಿದ ನೀರು ತೆಲಂಗಾಣಕ್ಕೆ ಹೋಗುತ್ತಿದೆ. ನಮ್ಮ ಪಾಲಿನ ಸಂಪೂರ್ಣ ನೀರಿನ ಬಳಕೆ ಮಾಡಿಕೊಂಡರೆ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಜೊತೆಗೆ ಸಹಸ್ರಾರು ರೈತರ ಭೂಮಿಗೆ ನೀರಾವರಿ ಸೌಲಭ್ಯ ‌ಕಲ್ಪಿಸಬಹುದು. ಮಂಡಳಿ ಸ್ಥಾಪಿಸಿ:

ಏತ ನೀರಾವರಿ, ಬಾಂದಾರಗಳ ನಿರ್ಮಾಣದ ಮುಖಾಂತರ ನೀರಿನ ಬಳಕೆಗೆ ಮುಂದಾಗಬೇಕು. ಇದಕ್ಕಾಗಿ ಗೋದಾವರಿ ಜಲಾನಯನ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಆಗ್ರಹಿಸಿದರು. ಸರ್ಕಾರ ನಮ್ಕ ಭಾಗದ ನೀರಾವರಿ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರ ‌ನುಡಿದಂತೆ ನಡೆಯುತ್ತಿಲ್ಲ :

ಕಲ್ಯಾಣ ಕರ್ನಾಟಕ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ‌ನುಡಿದಂತೆ ನಡೆಯುತ್ತಿಲ್ಲ ಎಂದು ಬೀದರ್‌ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತೆತ್ತಿದರೆ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎನ್ನಲಾಗುತ್ತಿದೆ ಆದರೆ ನಮ್ಮ ಭಾಗದ ಪಾಲಿಗೆ ಇದು ಸುಳ್ಳಾಗಿದೆ. ಅಭಿವೃದ್ಧಿ ಕೆಲಸಕ್ಕೆ ಸರ್ಕಾರ ಅನುದಾನ ನೀಡುತ್ತಿಲ್ಲ. ನಮ್ಮ ಭಾಗಕ್ಕೆ ಸರ್ಕಾರ ಮೋಸ, ಅನ್ಯಾಯ ಮಾಡುತ್ತಿದೆ ಎಂದು ದೂರಿದರು.‘ಕಲ್ಯಾಣ’ಕ್ಕೆ ಪ್ರತ್ಯೇಕ ಸಚಿವಾಲಯಕ್ಕೆ ಆಗ್ರಹ

ಕೆಕೆಆರ್‌ಡಿಬಿ ಬಿಟ್ಟರೆ ನಮ್ಮ ಪಾಲಿಗೆ ಸರ್ಕಾರದ ಅನುದಾನ ಶೂನ್ಯ ಎನಿಸಿದೆ. ಅನುದಾನದ ಕೊರತೆಗೆ ಬಹುತೇಕ ಯೋಜನೆ ಸೊರಗುತ್ತಿವೆ. ಹೊಸ ಅಭಿವೃದ್ಧಿ ಕೆಲಸಗಳು ಅಕ್ಷರಶಃ ಸ್ಥಗಿತವಾಗಿವೆ. ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣಕ್ಕೆ ಬಂಪರ್‌ ಕೊಡುಗೆ ಎಂದೆಲ್ಲ ಪ್ರಚಾರ ಪಡೆಯಲಾಗಿತ್ತು. ಆದರೆ ಸಂಪುಟ ಸಭೆಯಲ್ಲಿನ ಯಾವ ನಿರ್ಣಯಗಳೂ ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರ ಈ ಭಾಗದ ಜನರ ಕಣ್ಣೊರೆಸುವ ತಂತ್ರವಾಗಿ ಸಂಪುಟ ಸಭೆ ನಡೆಸಿರು ವುದು ಸ್ಪಷ್ಟವಾಗಿದೆ. ಸರ್ಕಾರಕ್ಕೆ ಈ ಭಾಗದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಸಂಪುಟದ ಎಲ್ಲ ನಿರ್ಣಯಗಳನ್ನೂ ಕಾರ್ಯಗತಗೊಳಿಸಬೇಕು ಹಾಗೂ ಈ ಭಾಗದ ಅಭಿವೃದ್ಧಿಗೆ ವೇಗ ನೀಡಲು ಕೂಡಲೇ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು ಎಂದು ಡಾ.ಬೆಲ್ದಾಳೆ ಆಗ್ರಹಿಸಿದರು.ಸಂವಿಧಾನದ ಕಲಂ 371(ಜೆ) ಸಮರ್ಪಕ ಜಾರಿಗೆ ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ ಸೇರಿದಂತೆ 30 ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶಾಲಾ ಕಾಲೇಜು ಬೋಧಕರ ವೇತನ‌ 30 ಸಾವಿರ ರು. ಹಾಗೂ ಡಿ, ಸಿ, ಗ್ರೂಪ್‌ ನೌಕರರ ವೇತನ ಕನಿಷ್ಠ 25 ಸಾವಿರಕ್ಕೇರಿಸಲು ಆಗ್ರಹಿಸಿ ಸದನದ ಗಮನ ಸೆಳೆದರು.ಕಾರಂಜಾ ಸಂತ್ರಸ್ತರ ಹೋರಾಟ, ಸಾಮೂಹಿಕ ಆತ್ಮಹತ್ಯೆ ಯತ್ನ, ಅವರಿಗೆ ವೈಜ್ಞಾನಿಕ ಪರಿಹಾರ ನೀಡುವ, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡುವ ವಿಷಯ ಮತ್ತೆ ಉಲ್ಲೇಖಿಸಿದರು. ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕಾರಂಜಾ ಸಂತ್ರಸ್ತರ ಬೇಡಿಕೆಗೆ ಇನ್ನಾದರೂ ಸ್ಪಂದಿಸಬೇಕು ಎಂದು ಡಾ. ಬೆಲ್ದಾಳೆ ಕೋರಿದರು.

Share this article