ಯದುವೀರ್ ಗೆ ಹಾಕುವ ವೋಟು, ಚಾಮುಂಡಿ ಪಾದಕ್ಕೆ ಹಾಕಿದ ಹೂನಂತೆ: - ಶಾಸಕ ಜಿ.ಟಿ. ದೇವೇಗೌಡ

KannadaprabhaNewsNetwork |  
Published : Mar 16, 2024, 01:47 AM IST
10 | Kannada Prabha

ಸಾರಾಂಶ

ಸೀಟು ಹಂಚಿಕೆಯಲ್ಲಿ ಹೊಡೆದಾಟವಿಲ್ಲ. ಮತ್ತೊಮ್ಮೆ ಮೋದಿ ಬಂದರೆ ಕರ್ನಾಟಕ ಉದ್ಧಾರವಾಗುತ್ತದೆ. ಅನುದಾನ ಬರುತ್ತದೆ. ಕಾಂಗ್ರೆಸ್ ನಯಾಪೈಸ ಪ್ರಯೋಜನವಿಲ್ಲ. ಕರ್ನಾಟಕ ರಾಜ್ಯಕ್ಕೆ ಕೊಡುವ ಸಂದೇಶವೆಂದರೆ ಚಾಮುಂಡೇಶ್ವರಿ ತಾಯಿಯ ಭಕ್ತರನ್ನು ಗೆಲ್ಲಿಸಬೇಕಾಗಿ ಮನವಿ ಮಾಡುತ್ತೇನೆ

ಕನ್ನಡಪ್ರಭ ವಾರ್ತೆ ಮೈಸೂರು

ಯದುವೀರ್ ಗೆ ಹಾಕುವ ಒಂದೊಂದು ವೋಟು ಚಾಮುಂಡೇಶ್ವರಿ ಪಾದಕ್ಕೆ ಹಾಕುವ ಒಂದು ಹೂ ಇದ್ದಂತೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ನಗರದ ಜಲದರ್ಶಿನಿ ಆವರಣದ ತಮ್ಮ ಕಚೇರಿಗೆ ಭೇಟಿ ನೀಡಿದ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಿ ಅವರು ಮಾತನಾಡಿದರು.

ಯದುವೀರ್ ಅವರು ಅರಮನೆ ಒಳಗೆ ಇದ್ದರೂ ಕೂಡ ಸಾಮಾಜಿಕ ಕಳಕಳಿ ಇರುವ ಅಭ್ಯರ್ಥಿ. ಮೀಸಲಾತಿ ಜಾರಿಗೆ ತಂದವರೇ ಮೈಸೂರು ಮಹಾರಾಜರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಿರುದ್ಧ ನಾನು 1996 ರಲ್ಲಿ ಸ್ಪರ್ಧಿಸಿ. ಸೋತಿದ್ದೇನೆ. ಯಾರು ಏನೇ ಹೇಳಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೊಡನೆ ಚರ್ಚಿಸಿದ್ದು, ಯದುವೀರ್ ಅವರನ್ನು ಗೆಲ್ಲಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದರು.

ಸೀಟು ಹಂಚಿಕೆಯಲ್ಲಿ ಹೊಡೆದಾಟವಿಲ್ಲ. ಮತ್ತೊಮ್ಮೆ ಮೋದಿ ಬಂದರೆ ಕರ್ನಾಟಕ ಉದ್ಧಾರವಾಗುತ್ತದೆ. ಅನುದಾನ ಬರುತ್ತದೆ. ಕಾಂಗ್ರೆಸ್ ನಯಾಪೈಸ ಪ್ರಯೋಜನವಿಲ್ಲ. ಕರ್ನಾಟಕ ರಾಜ್ಯಕ್ಕೆ ಕೊಡುವ ಸಂದೇಶವೆಂದರೆ ಚಾಮುಂಡೇಶ್ವರಿ ತಾಯಿಯ ಭಕ್ತರನ್ನು ಗೆಲ್ಲಿಸಬೇಕಾಗಿ ಮನವಿ ಮಾಡುತ್ತೇನೆ ಎಂದರು.

ಒಳ್ಳೆಯ ಮನಸಿನ, ರಾಜವಂಶದ ಕುಡಿಯನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಒಳೆಯದು. ಯದುವೀರ್ಅವರು ಹೆಚ್ಚಿನ ಅಂತರದಿಂದ ಗೆದ್ದರೆ ನಮಗೆ ಗೌರವ. ಎಲ್ಲರೂ ಸೇರಿ ಗೆಲ್ಲಿಸಿಕೊಂಡು ಬರೋಣ ಎಂದರು.

ನಾನು- ನನ್ನ ಮಗ ಕಾಂಗ್ರೆಸ್ ಗೆ ಹೋಗುವುದಿಲ್ಲ . ಪ್ರತಾಪ್ ಸಿಂಹ ಅವರಿಗೂ ಕಾಂಗ್ರೆಸ್ ಗೆ ಹೋಗುವಂತೆ ಹೇಳಿಲ್ಲ. ಪ್ರತಾಪ ಸಿಂಹ ಬುದ್ಧಿವಂತ, ನಮ್ಮೊಂದಿಗೆ ಸಹಕಾರ ನೀಡು ನಿನ್ನ ಗೌರವ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದ್ದೇನೆ. ಕಳೆದ ಬಾರಿ ನಮ್ಮ ಮೈತ್ರಿ ಕಾಂಗ್ರೆಸ್ ಜೊತೆ ಇದ್ದರೂ ನಮ್ಮ ಬೆಂಬಲ ಬಿಜೆಪಿಗೆ ಇತ್ತು ಎಂದರು.

ಶಾಸಕ ಜಿ.ಟಿ. ದೇವೇಗೌಡರನ್ನು ಭೇಟಿಯಾಗುವ ಮೂಲಕ ಯದುವೀರ್ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ ಬೇಟೆ ಆರಂಭಿಸಿದರು.

ಬೆಂಗಳೂರು ಮಹಾರಾಜರು

ನಾನು ಮೈಸೂರು ಮಹಾರಾಜರು ಅನ್ಕೊಂಡೆ, ಆದ್ರೆ ಬಂದಿರೋದು ಬೆಂಗಳೂರು ಮಹಾರಾಜರು ಎಂದು ಶಾಸಕ ಜಿ.ಟಿ. ದೇವೇಗೌಡರು, ಶಾಸಕ ಅಶ್ವತ್ಥನಾರಾಯಣ್ ಅವರ ಕಾಲೆಳೆದರು.

ಜಿ.ಟಿ. ದೇವೇಗೌಡರ ಕಚೇರಿಗೆ ದಿಢೀರ್ ಭೇಟಿ ನೀಡಿದ ಅಶ್ವತ್ಥನಾರಾಯಣ ಅವರನ್ನು ನೋಡಿದಾಗ ಜಿಟಿಡಿ ಹೀಗೆ ಉದ್ಘರಿಸಿದರು.

ಮಾಜಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ನನಗೆ ಉಸ್ತುವಾರಿ ನೀಡಿರುವ ನಾಲ್ಕೂ ಕ್ಷೇತ್ರದಲ್ಲಿ ಮುನ್ನಡೆ ಪಡೆಯುವುದೇ ನಮ್ಮ ಮುಂದಿನ ಗುರಿ ಎಂದರು.

ಶಾಸಕ ಅಶ್ವತ್ಥನಾರಾಯಣ್ ಮಾತನಾಡಿ, ಮತ್ತೊಮ್ಮೆ ಮೋದಿ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾತನ್ನು ನಿಜವಾಗಿಸಲು ನಾವು ಜಿ.ಟಿ. ದೇವೇಗೌಡರ ಭೇಟಿಗೆ ಬಂದು ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಈ ವೇಳೆ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಇದ್ದರು.

ನಮ್ಮ ಪರ ಚುನಾವಣೆ ಫಲಿತಾಂಶ ಬರಲು ಜಿ.ಟಿ. ದೇವೇಗೌಡರ ಅವರ ಅಗಾಧ ಅನುಭವವನ್ನು ನಮಗೆ ನೀಡಿ ಎಂದು ಕಾರ್ಯಕರ್ತ ಪರವಾಗಿ ಮನವಿ ಮಾಡುತ್ತೇನೆ.

- ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.--

ಪುಟ್ಪಾತ್ ಅಂಗಡಿಯ ಚಹ ಗಂಟಲಿನಲ್ಲಿ ಇಳಿಯುವುದಿಲ್ಲ ಅಂದವರಿಗೆ ಟಿಕೆಟ್ ಘೋಷಣೆಯಾದ ದಿನವೇ ಉತ್ತರ ನೀಡಿರುವುದು ಎಲ್ಲರಿಗೂ ಗೊತ್ತಾಗಿದೆ.

- ಜಿ.ಟಿ. ದೇವೇಗೌಡ, ಶಾಸಕರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ