ಉಡುಪಿ ಜಿಲ್ಲೆಯಲ್ಲಿ ಕಲ್ಲು ಕ್ವಾರಿ ಪುನರಾರಂಭಕ್ಕೆ ಶಾಸಕ ಗಂಟಿಹೊಳೆ ಆಗ್ರಹ

KannadaprabhaNewsNetwork | Published : Dec 16, 2024 12:45 AM

ಸಾರಾಂಶ

ಬೈಂದೂರಿನಲ್ಲಿ ಹೋರಾಟದ ಸ್ವರೂಪ ಪಡೆದಿರುವ ಕಲ್ಲುಕ್ವಾರಿ ವಿಚಾರ ವಿಧಾನ ಮಂಡಲದ ಅಧಿವೇಶನದ ನಡುವೆಯೇ ಗಣಿ ಸಚಿವರ ಗಮನಕ್ಕೆ ತರುವಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಂದೂರು

ಬೈಂದೂರಿನಲ್ಲಿ ಹೋರಾಟದ ಸ್ವರೂಪ ಪಡೆದಿರುವ ಕಲ್ಲುಕ್ವಾರಿ ವಿಚಾರ ವಿಧಾನ ಮಂಡಲದ ಅಧಿವೇಶನದ ನಡುವೆಯೇ ಗಣಿ ಸಚಿವರ ಗಮನಕ್ಕೆ ತರುವಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿದ ಶಾಸಕ ಗುರುರಾಜ್‌ ಅವರು, ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು, ಶಿಲೆ ಕಲ್ಲು ಹಾಗೂ ಮರಳು ಸಿಗದೇ ಕ್ವಾರಿ ಮಾಲೀಕರು, ಲಾರಿ ಮಾಲೀಕರು, ರೈತರು ಹಾಗೂ ಕೂಲಿ ಕಾರ್ಮಿಕರ ಸಹಿತ ವಿವಿಧ ಕಟ್ಟಡ ಕಾಮಗಾರಿಗಳಿಗೆ ಸಾಮಾಗ್ರಿಗಳು ದೊರೆಯದೇ ಇಡೀ ಜಿಲ್ಲೆಯು ತೊಂದರೆಗೊಳಗಾದ ಬಗ್ಗೆ ಸಚಿವರ ಗಮನಕ್ಕೆ ತಂದರು.

ಜಿಲ್ಲಾಡಳಿತವು ಏಕಾಏಕಿ ಕೆಂಪು ಕಲ್ಲು ತೆಗೆಯುವ ಸಂಬಂಧ 3ಎಬಿ ನಡಿ ನೀಡಿರುವ ಅನುಮತಿಗಳನ್ನು ರದ್ದು ಪಡಿಸಿದ್ದು, ಕರಾವಳಿಯ ಉಳಿದ ಜಿಲ್ಲೆಗಳಲ್ಲಿ ಇರುವಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಹಿಂದೆ ನೀಡುತ್ತಿದ್ದಂತೆ 3ಎ ನಡಿ ಕೆಂಪು ಕಲ್ಲು ತೆಗೆಯಲು ಈ ಕೂಡಲೇ ಅನುಮತಿ ನೀಡುವಂತೆ ಸಚಿವರನ್ನು ಶಾಸಕ ಆಗ್ರಹಿಸಿದರು.

ಶಾಸಕರ ಆಗ್ರಹಕ್ಕೆ ಸ್ಪಂದಿಸಿದ ಸಚಿವರು ಗಣಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು, ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಕಲ್ಲುಕ್ವಾರಿಯ ಸಮಸ್ಯೆಯ ವಿರುದ್ಧ ಡಿ 7 ರಂದು ಬೈಂದೂರಿನಲ್ಲಿ ಈ ಕುರಿತು ಪ್ರತಿಭಟನೆಯೂ ನಡೆದಿತ್ತು. ಪ್ರತಿಭಟನೆಯಲ್ಲಿ ಶಾಸಕರು ಮುಂದಿನ 10 ದಿನಗಳ ಒಳಗಾಗಿ ಕೋರೆಗಳನ್ನು ತೆರೆಯಬೇಕು ಇಲ್ಲದಿದ್ದರೆ ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಇದೀಗ ಗಣಿ ಸಚಿವರೇ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿರುವುದರಿಂದ ಸಮಸ್ಯೆ ಪರಿಹಾರಗೊಳ್ಳಲಿದೆ ಎಂಬ ನಿರೀಕ್ಷೆಯಿದೆ.

ಸಚಿವರ ಭೇಟಿಯ ವೇಳೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇದ್ದರು

Share this article