ಸುಡುಗಾಡು ಸಿದ್ದರ ಬಡಾವಣೆಗೆ ಶಾಸಕ ಗೋಪಾಲಕೃಷ್ಣ ಭೇಟಿ: ಸಮಸ್ಯೆ ಆಲಿಕೆ

KannadaprabhaNewsNetwork | Published : Jun 11, 2024 1:32 AM

ಸಾರಾಂಶ

ಶಾಸಕ ಎನ್.ವೈ.ಜಿ ಮಾತನಾಡಿ, ಬಡಾವಣೆ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ತರಲು ಮನವಿ ಸಲ್ಲಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ತಾಲೂಕಿನ ರಾಯಪುರ ಬಳಿ ಇರುವ ಸುಡುಗಾಡು ಸಿದ್ದರ ಬಡಾವಣೆಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಭೇಟಿ ಮಾಡಿ ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿದರು.

ಭಾರಿ ಮಳೆಯಿಂದಾಗಿ ಸುಡುಗಾಡು ಸಿದ್ದರ ಬಡವಣೆಯಲ್ಲಿರುವ ಗುಡಿಸಿಲುಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಪರಿಣಾಮ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಸಮಸ್ಯೆ ಖುದ್ದು ಪರಿಶೀಲಿಸಿದರು.

ಈ ವೇಳೆ ನಿವಾಸಿಗಳು ತಮ್ಮ ಅಳಲು ತೋಡಿಕೊಂಡು, 40ಕ್ಕೂ ಹೆಚ್ಚು ಕುಟುಂಬಗಳು ಇದ್ದರು, ಸರ್ಕಾರ ಮನೆ ನಿರ್ಮಿಸುವ ಭರವಸೆ ನೀಡಿ ಹತ್ತು ವರ್ಷ ಕಳೆದರೂ ವಸತಿ ಮಂಜೂರಾಗಿಲ್ಲ. ಮಳೆ ಗಾಳಿ ಎನ್ನದೆ ಇದೇ ಗುಡಿಸಲಿನಲ್ಲಿ ವಾಸ ಮಾಡುವಂತ ಅನಿವಾರ್ಯತೆ ಇದೆ. ಹಲವು ಬಾರಿ ಈ ಕುರಿತು ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಮಳೆ ಬಂದರೆ ಗುಡಿಸಲುಗಳಿಗೆ ನೀರು ನುಗ್ಗಿ ಸಮಸ್ಯೆ ಎದುರಾಗುತ್ತದೆ. ವಸತಿ ಮಂಜೂರು ಮಾಡಿಸಿ ಕೊಡುವಂತೆ ಸ್ಥಳೀಯರು ಮನವಿ ಮಾಡಿದರು.

ಶಾಸಕ ಎನ್.ವೈ.ಜಿ ಮಾತನಾಡಿ, ಬಡಾವಣೆ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ತರಲು ಮನವಿ ಸಲ್ಲಿಸುತ್ತೇನೆ. ನಮ್ಮದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ಎಚ್.ಆಂಜನೇಯ ಅವರು ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದರು ಆಗ ಬಿಡುಗಡೆಯಾದ ಅನುದಾನದಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಹೊರತುಪಡಿಸಿದರೆ ಆನಂತರ ಬಂದ ಬಿಜೆಪಿ ಸರ್ಕಾರ ಅನುದಾನ ನೀಡದ ಪರಿಣಾಮ ಸಮಸ್ಯೆಗೆ ಕಾರಣವಾಗಿದೆ. ಕೂಡಲೇ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಿ ಶಾಲೆ ಅಂಗನವಾಡಿ ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ವೇಳೆ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಪ್ರಕಾಶ್, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ನಾಗನಗೌಡ, ನಿರ್ಮಿತಿ ಕೇಂದ್ರದ ಮಲ್ಲಿಕಾರ್ಜುನ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ನಂದೀಶ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಕಾಶ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್. ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಿಮುಲ್ಲಾ, ಮುಖಂಡ ಗೋಪಾಲ್ ಇದ್ದರು.

ರಾಯಪುರ ಬಳಿಯ ಸುಡುಗಾಡು ಸಿದ್ದರ ಬಡಾವಣೆ ನಿರ್ಮಾಣ ನೆನೆಗುದಿಗೆ ಬಿದ್ದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ವೈ.ಗೋಪಾಲಕೃಷ್ಣ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿ ಗ್ರಾಪಂ, ತಾಪಂ, ನಿರ್ಮಿತಿ ಕೇಂದ್ರ ಸೇರಿ ವಿವಿಧ ಇಲಾಖೆ ಸಭೆ ನಡೆಸಿ ಮತ್ತು ಬರಬೇಕಾಗಿರುವ ಅನುದಾನ ಕುರಿತು ಚರ್ಚಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ವಸತಿ ಇಲ್ಲದೆ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಅಲೆಮಾರಿಗಳಿಗೆ ಬಾರಿ ಸಮಸ್ಯೆ ಉಂಟಾಗುತ್ತಿದೆ. ಮಳೆ ಬಂದಲ್ಲಿ ಸಮಸ್ಯೆ ಇನ್ನಷ್ಟು ಬಿಗುಡಾಯಿಸುತ್ತದೆ. ಸುಮಾರು 89 ನಿವೇಶನಗಳು ಮಂಜೂರು ಮಾಡಲಾಗಿದೆ. ಅದರಲ್ಲಿ 49 ಕುಟುಂಬಗಳು ವಾಸವಿದ್ದು 19 ಕುಟುಂಬಗಳ ಮನೆ ನಿರ್ಮಾಣಕ್ಕೆ ಅರ್ಹತೆ ಪಡೆದಿದ್ದು, ಅವುಗಳನ್ನು ಅತ್ಯಂತ ಶೀಘ್ರವಾಗಿ ನಿರ್ಮಿಸಬೇಕು. ಉಳಿದ ಕುಟುಂಬಗಳಿಗೆ ಹಂತ ಹಂತವಾಗಿ ಮನೆ ನಿರ್ಮಿಸಬೇಕು. ಇದಕ್ಕಾಗಿ ಅಧಿಕಾರಿಗಳು ಸೂಕ್ತ ಕಡತ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಅಧಿಕಾರಿಗಳು ಕ್ರಿಯಾ ಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದರು.

Share this article