ಶಾಸಕ ಜಿ.ಟಿ.ದೇವೇಗೌಡರು ಮೀಸಲಾತಿ ವಿರೋಧಿಸಿಲ್ಲ: ದಲಿತ ಮುಖಂಡರ ಸ್ಪಷ್ಟನೆ

KannadaprabhaNewsNetwork |  
Published : Mar 02, 2024, 01:47 AM IST
39 | Kannada Prabha

ಸಾರಾಂಶ

ವಾಸ್ತವವಾಗಿ ಜಿ.ಟಿ.ದೇವೇಗೌಡರು ಸಹಕಾರ ಕ್ಷೇತ್ರದಲ್ಲಿನ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ. ಈಗಾಗಲೇ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಇದೆ. ಆದರೆ, ನಾಮ ನಿರ್ದೇಶನದ ಮಾಡುವ ವೇಳೆ ಮೀಸಲಾತಿ ಸರಿಯಲ್ಲ. ಹೊರಗಿನವರನ್ನು ಮೀಸಲಾತಿ ನೆಪದಲ್ಲಿ ತಂದು ಕೂರಿಸಿದರೆ ಸ್ಥಳೀಯ ಆಡಳಿತಗಳಲ್ಲಿ ಅಧಿಕಾರಿಗಳೊಡನೆ ಅವರು ಸೇರಿದರೆ ಅವರದೇ ಪ್ರಾಬಲ್ಯವಾಗುತ್ತದೆ ಎಂಬ ಅಭಿಪ್ರಾಯದಲ್ಲಿ ಅವರು ಮಾತನಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತರಲು ಜಿ.ಟಿ. ದೇವೇಗೌಡರು ವಿರೋಧಿಸಿದ್ದಾರೆ ಎಂಬ ತಪ್ಪರ್ಥದ ಸಂದೇಶ ರವಾನೆಯಾಗುತ್ತಿದ್ದು, ಇದರ ವಾಸ್ತವ ಸ್ಥಿತಿಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ತಾಲೂಕಿನ ವಿವಿಧ ದಲಿತ ಮುಖಂಡರು ಆಗ್ರಹಿಸಿದರು.

ವಾಸ್ತವವಾಗಿ ಜಿ.ಟಿ.ದೇವೇಗೌಡರು ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ. ಈಗಾಗಲೇ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಇದೆ. ಆದರೆ ನಾಮ ನಿರ್ದೇಶನದ ಮಾಡುವ ವೇಳೆ ಮೀಸಲಾತಿ ಸರಿಯಲ್ಲ. ಹೊರಗಿನವರನ್ನು ಮೀಸಲಾತಿ ನೆಪದಲ್ಲಿ ತಂದು ಕೂರಿಸಿದರೆ ಸ್ಥಳೀಯ ಆಡಳಿತಗಳಲ್ಲಿ ಅಧಿಕಾರಿಗಳೊಡನೆ ಅವರು ಸೇರಿದರೆ ಅವರದೇ ಪ್ರಾಬಲ್ಯವಾಗುತ್ತದೆ ಎಂಬ ಅಭಿಪ್ರಾಯದಲ್ಲಿ ಅವರು ಮಾತನಾಡಿರುವುದಾಗಿ ಜಿಪಂ ಮಾಜಿ ಉಪಾಧ್ಯಕ್ಷ ಎಚ್. ಸುಬ್ಬಯ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ನಾಮ ನಿರ್ದೇಶನದ ವೇಳೆ ಮೀಸಲಾತಿ ಅನುಸರಿಸಿದರೆ ಸ್ಥಳೀಯವಾಗಿ ಮೀಸಲಾತಿ ಹಾಗೂ ಚುನಾವಣೆ ಮೊದಲಾದವುಗಳ ಮೂಲಕ ಆಯ್ಕೆಯಾದವರಿಗೆ ಪ್ರಾಮುಖ್ಯತೆ ಇರುವುದಿಲ್ಲ ಎಂಬುದು ಅವರ ಅಭಿಪ್ರಾಯ. ಇದನ್ನು ಸದನದಲ್ಲಿ ಹೇಳಿದ್ದಾರೆಯೇ ಹೊರತು ಸಹಕಾರ ಕ್ಷೇತ್ರದಲ್ಲಿ ಮೀಸಲಾತಿಯನ್ನು ಅವರು ವಿರೋಧಿಸಿಲ್ಲ ಎಂದು ಅವರು ತಿಳಿಸಿದರು.

ಸಹಕಾರ ಸಂಘಗಳಿಗೆ ಒಂದು ವೇಳೆ ನಾಮ ನಿರ್ದೇಶನ ಮಾಡಬೇಕಾಗಿದ್ದಲ್ಲಿ ಸ್ಥಳೀಯರನ್ನೇ ಮಾಡಲಿ. ಬದಲಾಗಿ ಹೊರಗಿನವರನ್ನು ತರುವುದರಿಂದ ಮೀಸಲು ಸ್ಥಾನದಿಂದ ಆಯ್ಕೆಯಾದವರೂ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿದಂತಾಗುತ್ತದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಅವರನ್ನು ಮೀಸಲಾತಿ ವಿರೋಧಿ ಎಂದು ಬಿಂಬಿಸುವುದು ತರವಲ್ಲ ಎಂದು ಅವರು ವಿವರಿಸಿದರು.

ಸಹಕಾರಿ ಕ್ಷೇತ್ರದಲ್ಲಿ ಹಾಲಿ ಮೀಸಲಾತಿ ಇದೆ. ಆದರೂ ಹೊಸದಾಗಿ ಮೂರು ನಾಮನಿರ್ದೇಶನ ಮಾಡಲು ಹೊರಟಿದ್ದೀರಿ. ಉದಾಹರಣೆಗೆ ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟವಿದೆ. ಅಲ್ಲಿ 13 ಚುನಾಯಿತ ನಿರ್ದೇಶಕರು ಇದ್ದಾರೆ. ನಾಲ್ವರು ಸರ್ಕಾರದ ಅಧಿಕಾರಿಗಳಿದ್ದಾರೆ. ಅವರ ಜೊತೆಗೆ ಈಗ ಒಂದು ನಾಮ ನಿರ್ದೇಶನವಿದೆ, ಇದರೊಂದಿಗೆ ಹೊಸದಾಗಿ ಮೂರು ನಾಮ ನಿರ್ದೇಶನ ಮಾಡಿದರೆ ಸರ್ಕಾರದವರೆ ಅಧ್ಯಕ್ಷರಾಗುತ್ತಾರೆ. ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷರಾಗಲು ಸಾಧ್ಯವಿಲ್ಲ. ಈ ರೀತಿ ನಾಮ ನಿರ್ದೇಶನವನ್ನು ಜಾರಿಗೊಳಿಸಿದರೆ ಸಹಕಾರಿ ಸಂಸ್ಥೆಗಳನ್ನು ಸರ್ಕಾರ ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಮುಂದಾಗಿದೆ ಎಂದು ಅವರು ಆರೋಪಿಸಿದರು. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ 7 ಕೋಟಿ ರು. ಗಳನ್ನು ಜನ ಠೇವಣಿಯನ್ನಿಟ್ಟಿದ್ದಾರೆ. ಅಲ್ಲಿ ಸರ್ಕಾರ 10 ಲಕ್ಷ ಷೇರು ಬಂಡವಾಳ ನೀಡಿ ಮೂವರನ್ನು ಸರ್ಕಾರದ ನಾಮ ನಿರ್ದೇಶನ ಮಾಡುವುದು ಸರಿಯೇ? ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ 5 ಕೋಟಿ ರು., ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ 3 ಸಾವಿರ ಕೋಟಿ ರು.ಗಳಷ್ಟನ್ನು ಸದಸ್ಯರ ಠೇವಣಿ ಇರುವಾಗ ಸರ್ಕಾರವು ನಾಮ ನಿರ್ದೇಶನ ಮಾಡಿದರೆ, ಸದಸ್ಯರಿಗೆ ಆಡಳಿತ ಮಂಡಳಿ ಮೇಲೆ ನಂಬಿಕೆ ಹೋಗಿ, ಠೇವಣಿ ಹಣವನ್ನು ಹಿಂದಕ್ಕೆ ಪಡೆಯುತ್ತವೆ. ಇದರಿಂದಲೇ ಲಕ್ಷಾಂತರ ಜನರಿಗೆ ಸಾಲ ಸೌಲಭ್ಯ ನೀಡುತ್ತಿರುವುದು ಇದಕ್ಕೆ ಸರ್ಕಾರವು ಯಾವುದೇ ಅನುದಾನವನ್ನು ಸಹಕಾರಿ ಸಂಸ್ಥೆಗಳಿಗೆ ನೀಡಿಲ್ಲ. ಸ್ವಂತ ಸದಸ್ಯರ ಹಣದಿಂದ ಸಂಸ್ಥೆಗಳು ನಡೆಯುತ್ತಿವೆ. ಸರ್ಕಾರದ ಹಿಡಿತದಲ್ಲಿಟ್ಟುಕೊಂಡು ಸ್ವಾಯತ್ತ ಸಂಸ್ಥೆಗಳನ್ನು ಸರ್ಕಾರದ ಸಂಸ್ಥೆಗಳನ್ನಾಗಿ ಮಾಡಿಕೊಳ್ಳಲು ಹೊರಟಿರುವುದನ್ನು ಜಿ.ಟಿ. ದೇವೇಗೌಡರು ವಿರೋಧಿಸಿದ್ದಾರೆ ಎಂದರು.

ಈ ಬಗೆಗಿನ ಚರ್ಚೆಯ ವೀಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದನ್ನು ಸರಿಯಾಗಿ ತಿಳಿದುಕೊಳ್ಳದೆ ಪ್ರತಿಭಟಿಸಿರುವುದು ಸರಿಯಲ್ಲ. ಸಂಪೂರ್ಣ ವೀಡಿಯೋ ನೋಡಿದರೆ ಅರ್ಥವಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಹಕಾರ ಕ್ಷೇತ್ರದ ಮುಖಂಡರಾದ ಮೋಹನ್ ಕುಮಾರ್, ಚಂದ್ರಶೇಖರ್, ಶಿವಕುಮಾರ್, ಬಸವಲಿಂಗಯ್ಯ, ಎಂ.ಪಿ. ನಾಗರಾಜ್ ಹಾಗೂ ಉಮಾಪತಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ