ಪಲ್ಸ್ ಪೊಲಿಯೋ ಯಶಸ್ವಿಗೊಳಿಸಲು ಶಾಸಕ ಜ್ಯೋತಿ ಗಣೇಶ್ ಮನವಿ

KannadaprabhaNewsNetwork |  
Published : Mar 04, 2024, 01:16 AM IST
ಪಲ್ಸ್ | Kannada Prabha

ಸಾರಾಂಶ

ನಗರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ನಗರದ ಮರಳೂರು ದಿಣ್ಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಶಾಸಕ ಜ್ಯೋತಿ ಗಣೇಶ್, ಸಾರ್ವಜನಿಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಶುವಿಹಾರ ಕೇಂದ್ರಗಳಲ್ಲಿ ರುವ ಪೋಲಿಯೋ ಬೂತ್‌ಗಳಿಗೆ ಭೇಟಿ ನೀಡಿ ತಮ್ಮ 0-5 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಬೇಕು ಎಂದು ಮನವಿ ಮಾಡಿದರು. ಮಾ. 6ರ ವರೆಗೆ ಈ ಪಲ್ಸ್ ಪೋಲಿಯಾ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ದೇಶದಲ್ಲಿ ಪೋಲಿಯೋ ನಿರ್ಮೂಲನೆಗೆ ಪ್ರಮುಖ ಪಾತ್ರ ವಹಿಸಿರುವ ರೋಟರಿ ಸಂಸ್ಥೆಯವರು ಸಹ ಈ ಲಸಿಕಾ ಕಾರ್ಯಕ್ಕೆ ಕೈ ಜೋಡಿಸಿರುವುದು ತುಂಬಾ ಸಂತಸದ ಸಂಗತಿ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಮಾತನಾಡಿ, ಆರೋಗ್ಯ ಸಿಬ್ಬಂದಿ ಅಂಗನವಾಡಿ ಕೇಂದ್ರಗಳಲ್ಲಿ ಇಂದು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುತ್ತಾರೆ. ನಾಳೆಯಿಂದ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬ ಪೋಷಕರು ಸಹ ೦-೫ ವರ್ಷದ ವರೆಗಿನ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ಇದು ನಮ್ಮ ಜವಾಬ್ದಾರಿ ಎಂದರು.

ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 7, 19, 29 ರ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ವಿಶೇಷ ಅಟಿಕೆಗಳಿಂದ ಕೂಡಿದ ವಿಭಿನ್ನ ರೀತಿಯಲ್ಲಿ ಪೋಲಿಯೋ ಹನಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗಿದೆ. ಪೋಲಿಯೋ ಹನಿಯಿಂದ ಯಾವುದೇ ಮಕ್ಕಳ ವಂಚಿತರಾಗದಂತೆ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಜತೆಗೆ ಪೌಷ್ಟಿಕ ಆಹಾರವನ್ನು ಸಹ ಕೊಡಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಪ್ರತಿ ಹಂತದಲ್ಲೂ ಕಾಳಜಿ ಹೊಂದಿರಬೇಕು ಎಂದರು.

ಈ ಸಂದರ್ಭದಲ್ಲಿ ಡಿಎಚ್‌ಓ ಡಾ.ಮಂಜುನಾಥ್, ಆರ್‌ಸಿಎಚ್ ಅಧಿಕಾರಿ ಡಾ.ಮೋಹನ್, ರಾಜ್ಯಮಟ್ಟದ ನೋಡಲ್ ಅಧಿಕಾರಿ ಡಾ. ರೇಖಾ, ಐಎಂಎ ಅಧ್ಯಕ್ಷ ಡಾ.ಎಚ್.ವಿ. ರಂಗಸ್ವಾಮಿ, ರೋ.ನಾಗರಾಜು ಸೇರಿದಂತೆ ರೋಟರಿ ಸಂಸ್ಧೆ ಪದಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ