ಮಾಯಕೊಂಡಕ್ಕೆ ಬಸ್ಸ ಸೇವೆ ಹೆಚ್ಚಿಸಲು ಶಾಸಕ ಕೆ.ಎಸ್‌.ಬಸವಂತಪ್ಪ ಸೂಚನೆ

KannadaprabhaNewsNetwork | Published : Jun 14, 2024 1:04 AM

ಸಾರಾಂಶ

ದಾವಣಗೆರೆ ಕೆಎಸ್‌ಆರ್‌ಟಿಸಿ ಅಧಿಕಾರಿ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ, ಚನ್ನಗಿರಿ ತಾಲೂಕಿನ ವಿವಿಧ ಮಾರ್ಗಗಳಿಗೆ ತಕ್ಷಣ ಕೆಎಸ್‌ಆರ್‌ಟಿಸಿ ಬಸ್ಸು ಸೌಕರ್ಯ ಕಲ್ಪಿಸುವಂತೆ ಶಾಸಕ ಕೆ.ಎಸ್‌.ಬಸವಂತಪ್ಪ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದ್ದಾರೆ.

ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ನಿಗಮದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಚನ್ನಗಿರಿ, ದಾವಣಗೆರೆ ತಾಲೂಕುಗಳ ಕೆಲ ಭಾಗಗಳನ್ನು ಒಳಗೊಂಡ ಮಾಯಕೊಂಡ ಕ್ಷೇತ್ರದ ಅನೇಕ ಕಡೆ ಇಂದಿಗೂ ಸರಿಯಾಗಿ ಬಸ್ಸು ವ್ಯವಸ್ಥೆ ಇಲ್ಲ. ಅಂತಹ ಕಡೆ ಪ್ರಥಮಾದ್ಯತೆ ಮೇಲೆ ಬಸ್‌ ಸೇವೆ ಒದಗಿಸಿ ಎಂದರು.

ಸಾರಿಗೆ ವ್ಯವಸ್ಥೆ ಇಲ್ಲದೇ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಕಲಚೇತನರಿಗೆ ತೀವ್ರ ತೊಂದರೆಯಾಗುತ್ತಿದೆ. ಅಂತಹ ಮಾರ್ಗಗಳಿಗೆ ತಕ್ಷಣದಿಂದಲೇ ಸೇವೆ ಆರಂಭಿಸಬೇಕು. ಸರ್ಕಾರಿ ಬಸ್ಸು ಸೌಲಭ್ಯವಿಲ್ಲದ ಗ್ರಾಮಗಳಲ್ಲಿ ಜನರು ಅಪೆ ಆಟೋ, ಆಟೋ, ಟೆಂಪೋ, ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಸರಕು ಸಾಗಾಣಿಕೆ ವಾಹನ ಅವಲಂಭಿಸಿದ್ದಾರೆ. ಇದರಿಂದ ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳು, ನೌಕರಸ್ಥರು, ರೈತರಿಗೆ, ರೋಗಿಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಸುಮಾರು ₹10 ಕೋಟಿ ವೆಚ್ಚದಲ್ಲಿ ಮಾಯಕೊಂಡ ಗ್ರಾಮದಲ್ಲಿ ಬಸ್ಸು ನಿಲ್ದಾಣಕ್ಕೆ ನಿರ್ಧರಿಸಿದ್ದು, ತಕ್ಷಣವೇ ನಿಲ್ದಾಣದ ಕಾಮಗಾರಿ ಕೈಗೊಳ್ಳಬೇಕು. ದಾವಣಗೆರೆ-ಹೊಸದುರ್ಗ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳಿಗೆ ನಿಲುಗಡೆ ವ್ಯವಸ್ಥೆ ಮಾಡಬೇಕು. ಮಾಯಕೊಂಡ ಬಸ್ಸು ನಿಲ್ದಾಣದಲ್ಲಿ ಒಬ್ಬ ನಿಯಂತ್ರಕರನ್ನು ನೇಮಿಸಿ, ಬಸ್ಸುಗಳ ಆಗಮನ, ನಿರ್ಗಮನದ ದಾಖಲಿಸುವ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.

ಕೆಲಸ, ಕಾರ್ಯ ನಿಮಿತ್ತ ಮಾಯಕೊಂಡ, ಬಸವಾಪಟ್ಟಣದಿಂದ ಬೆಂಗಳೂರಿಗೆ ಹೋಗಿ, ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆ ಉಭಯ ಹೋಬಳಿ ಕೇಂದ್ರಗಳಿಂದ ಬೆಂಗಳೂರಿಗೆ ಹೋಗಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಬೇಕು. ಕೊರೋನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಹಳೆ ಮಾರ್ಗಗಳಲ್ಲಿ ಪುನಃ ಬಸ್ಸು ಸಂಚಾರ ಆರಂಭಿಸಬೇಕು ಎಂದು ಹೇಳಿದರು.

ಚನ್ನಗಿರಿ ತಾಲೂಕಿನ ಕಾರಿಗನೂರು ಮಾರ್ಗವಾಗಿ ಕತ್ತಲಗೆರೆ, ಬೆಳಲಗೆರೆ, ಸಾಗರಪೇಟೆ, ದಾಗಿನಕಟ್ಟೆ, ಕಂಚುಗಾರನಹಳ್ಳಿ, ನಿಲೋಗಲ್‌ ಮಾರ್ಗವಾಗಿ ಬಸ್ಸು ಸಂಚರಿಸಬೇಕು. ಗುಡ್ಡದ ಕುಮಾರನಹಳ್ಳಿ ಮಾರ್ಗವಾಗಿ ಹೊನ್ನಾಳಿ ಹಾಗೂ ದಾವಣಗೆರೆ ತಾ. ಜಮ್ಮಾಪುರ, ಕೆರೆಯಾಗಳಹಳ್ಳಿಗೆ ಬಸ್ಸು ಸೇವೆ ಒದಗಿಸಬೇಕು. ಗಿರಿಯಾಪುರ ಮಾರ್ಗವಾಗಿ ಅಣಜಿ ಗ್ರಾಮದ ಕಡೆಗೆ ಹೋಗಲು ಸರ್ಕಾರಿ ಬಸ್ಸು ಸೇವೆ ಕಲ್ಪಿಸಬೇಕು ಎಂದು ಅ‍ವರು ಸೂಚಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮಾತನಾಡಿ, ಮಾಯಕೊಂಡ ಶಾಸಕರು ಸೂಚಿಸಿದ ಮಾರ್ಗಗಳಿಗೆ ತಕ್ಷಣದಿಂದಲೇ ಬಸ್ಸು ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ಆದೇಶಿಸಿದರು. ಕೊರೋನಾ ಸಂದರ್ಭದಲ್ಲಿ ಸ್ಥಗಿತಗೊಂಡ ಹಳೆ ಮಾರ್ಗಗಳಲ್ಲೂ ಪುನಃ ಬಸ್ಸು ಸೇವೆ ಒದಗಿಸಲಾಗುವುದು ಎಂದರು.

ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಶೇಖರ, ಶಂಭಣ್ಣ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Share this article