ನೀರಾವರಿ ನಿಗಮದ ಕಾರ್ಯವೈಖರಿಗೆ ಶಾಸಕ ಲಮಾಣಿ ಅಸಮಾಧಾನ

KannadaprabhaNewsNetwork | Published : Jan 18, 2024 2:02 AM

ಸಾರಾಂಶ

ಶಿರಹಟ್ಟಿ ತಾಲೂಕಿನ ನೀರಾವರಿ ನಿಗಮದ ಅಧಿಕಾರಿಯ ಕಾರ್ಯವೈಖರಿಗೆ ಶಾಸಕ ಡಾ. ಚಂದ್ರು ಲಮಾಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಿರಹಟ್ಟಿ: ೨೦೧೮ರಲ್ಲೇ ಶಿರಹಟ್ಟಿ ತಾಲೂಕಿನಲ್ಲಿ ಬರುವ ೨೦ ಕೆರೆಗಳಿಗೆ ನೀರು ತುಂಬಿಸುವ ಅತ್ಯಂತ ಮಹತ್ವದ ಯೋಜನೆಗೆ ಅಂದಿನ ಸರ್ಕಾರ ₹೧೩೭ ಕೋಟಿ ಅನುದಾನ ನೀಡಿದ್ದು, ಅಧಿಕಾರಿ ಸದ್ಯ ₹೧೧೫ ಕೋಟಿ ಖರ್ಚಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾಗಿ ಬಂದು ೬ ತಿಂಗಳು ಕಳೆದರೂ ಇಲಾಖೆ ಅಧಿಕಾರಿ ಯಾರೆಂದು ಗೊತ್ತಾಗಿಲ್ಲ, ಒಮ್ಮೆಯೂ ಸಭೆಗೆ ಹಾಜರಾಗಿಲ್ಲ. ಇಲಾಖೆಯ ಪ್ರಗತಿ ವರದಿ ನೀಡಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮದ ಎಇಇ ನಾಗರಾಜ ಅವರನ್ನು ಶಾಸಕ ಡಾ. ಚಂದ್ರು ಲಮಾಣಿ ತರಾಟೆಗೆ ತೆಗೆದುಕೊಂಡರು.

ಬುಧವಾರ ತಾಪಂ ಸಭಾಭವನದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂಥವರಿಂದ ತಾಲೂಕಿನಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ? ಎಂದರು.

ಕಾಮಗಾರಿ ಪೂರ್ಣಗೊಳಿಸಲು ೨ ವರ್ಷ ಕಾಲವಕಾಶವಿದ್ದು, ಸದ್ಯ ೬ ವರ್ಷ ಕಳೆದರೂ ಕೆರೆ ತುಂಬಿಸುವ ಕಾಮಗಾರಿ ಪೂರ್ಣವಾಗಿಲ್ಲ. ಆದರೆ ಹಣ ಮಾತ್ರ ಕೊಳ್ಳೆ ಹೊಡೆಯಲಾಗಿದೆ. ಶಿರಹಟ್ಟಿ ಮೀಸಲು ಮತಕ್ಷೇತ್ರದ ರೈತರಿಗಾಗಿ ನೀಡಿದ ಕೋಟ್ಯಂತರ ಹಣವನ್ನು ನಮ್ಮ ಕ್ಷೇತ್ರದಲ್ಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗೆ ನೀಡಿದ್ದು, ಅಧಿಕಾರಿಗಳ ವಿರುದ್ಧ ತನಿಖೆಗೆ ಸಭೆಯಲ್ಲಿ ಠರಾವು ಬರೆಸಿದರು.

ನಿಮ್ಮಂಥ ಅಧಿಕಾರಿಗಳಿಂದ ನನಗೆ ಕೆಟ್ಟ ಹೆಸರು ಬರುತ್ತಿದೆ. ನಮ್ಮ ಕ್ಷೇತ್ರದಲ್ಲಿ ನಿಮ್ಮಂಥವರು ಕೆಲಸ ಮಾಡಲು ಯೋಗ್ಯರಲ್ಲ. ತಾಲೂಕಿನಲ್ಲಿರುವ ೨೦ ಕೆರೆಗಳ ಸ್ಥಿತಿ-ಗತಿ ಏನಾಗಿದೆ ಎನ್ನುವುದನ್ನು ಪರಿಶೀಲಿಸಬೇಕು. ದಿನಾಂಕ ನಿಗದಿ ಮಾಡಿ ಎಂದು ಸೂಚನೆ ನೀಡಿದರು. ನಿಮ್ಮಂಥವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ತಾಲೂಕಿನಲ್ಲಿ ೧೦೯ ಶುದ್ಧ ನೀರಿನ ಘಟಕಗಳಿದ್ದು, ಅದರಲ್ಲಿ ೪೨ ಸ್ಥಗಿತಗೊಂಡಿವೆ. ಆದರೆ ನಿರ್ವಹಣೆ ವೆಚ್ಚ ಹಾಕಲಾಗುತ್ತಿದೆ. ಅವುಗಳ ಏಜೆನ್ಸಿ ಯಾರಿಗಾಗಿದೆ ಎಂಬುದರ ಮಾಹಿತಿ ನೀಡುವಂತೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ ಸಂತೋಷ ಅವರಿಗೆ ಸೂಚಿಸಿದರು. ಅಲ್ಲದೆ ಇನ್ನು ಮುಂದೆ ಯಾವುದೇ ಬಿಲ್ ತೆಗೆಯದಂತೆ ತಾಕೀತು ಮಾಡಿದರು.

ತಾಲೂಕಿನಲ್ಲಿ ೧೧.೫೮೫ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವಿದ್ದು, ಈ ಅರಣ್ಯ ಪ್ರದೇಶ ವ್ಯಾಪ್ತಿಯ ಚಿಕ್ಕಸವಣೂರು, ದೇವಿಹಾಳ ಗ್ರಾಮಗಳ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ವಲಯ ಅರಣ್ಯ ಇಲಾಖೆ ಅಧಿಕಾರಿ ಯಾವುದನ್ನೂ ಗಮನಿಸುತ್ತಿಲ್ಲ ಎಂದರು. ಅಕ್ರಮ ಕಲ್ಲು ಗಣಿಗಾರಿಕೆ ನಡೆದಿರುವ ಮಾಹಿತಿ ನಮಗೆ ಬಂದಿಲ್ಲ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ ಉತ್ತರಿಸಿದರು.

ತಾಲೂಕಿನ ಕಡಕೋಳ, ಹೊಸಳ್ಳಿ, ಜಲ್ಲಿಗೇರಿ, ಕುಸ್ಲಾಪುರ ಸೇರಿದಂತೆ ಸುತ್ತಲಿನ ರೈತರ ಜಮೀನುಗಳಲ್ಲಿನ ಫಸಲನ್ನು ಕಾಡುಪ್ರಾಣಿಗಳು ತಿಂದು ಹಾಳುಮಾಡುತ್ತಿವೆ. ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ರೈತರಿಗೆ ಪರಿಹಾರ ನೀಡಿದ ಬಗ್ಗೆ ಸಭೆಗೆ ಒಮ್ಮೆಯೂ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದರು. ಈಗಾಗಲೇ ₹೭ ಲಕ್ಷದ ವರೆಗೆ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಹೇಳುತ್ತಿದ್ದಂತೆ ನಮ್ಮ ಗಮನಕ್ಕೆ ಏಕೆ ತಂದಿಲ್ಲ? ಯಾವ ಬೆಳೆಗೆ ಎಷ್ಟು ಪರಿಹಾರ ಎಂಬುದರ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.

ಒಟ್ಟು ೪೫ ಇಲಾಖೆಯಲ್ಲಿ ೧೧ ಇಲಾಖೆ ಅಧಿಕಾರಿಗಳು ಗೈರುಹಾಜರಾಗಿದ್ದು, ಶಾಸಕರ ಮೌಖಿಲ ಆದೇಶದ ಮೇರೆಗೆ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮೀನುಗಾರಿಕೆ, ಪೊಲೀಸ್, ಕೆಆರ್‌ಐಡಿಎಲ್, ಸಾರಿಗೆ, ಭೂಮಾಪನ, ಕಾರ್ಮಿಕ, ಕ್ರೀಡಾ ಇಲಾಖೆ ಸೇರಿ ೧೧ ಇಲಾಖೆ ಅಧಿಕಾರಿಗಳು ಮುಂದಿನ ಸಭೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಹಾಜರಾಗುವಂತೆ ವರದಿ ಸಲ್ಲಿಸಲು ಸೂಚನೆ ನೀಡಲಾಯಿತು.

ಸಭೆಯಲ್ಲಿ ಜಿಪಂ ಸಿಇಒ ಎನ್.ಕೆ. ನಿರ್ಮಲಾ, ತಹಸೀಲ್ದಾರ್ ಅನಿಲ ಬಡಿಗೇರ, ತಾಪಂ ಇಒ ಡಾ. ನಿಂಗಪ್ಪ ಓಲೇಕಾರ ಇದ್ದರು.

Share this article