ಕನ್ನಡಪ್ರಭ ವಾರ್ತೆ ಅರಸೀಕೆರೆ
"ಶಾಸಕರೇ ಎಲ್ಲಿದ್ದೀರಾ...ಕೆ. ಎಂ ಶಿವಲಿಂಗೇಗೌಡ ಎಲ್ಲಿದ್ದೀರಾ. ನಿಗಮ ಮಂಡಳಿ ಅಧ್ಯಕ್ಷರೇ ನಮ್ಮ ಮನೆಗಳು ಮಳೆ ಬಂದು ಬಿದ್ದು ಹೋಗುತ್ತಿವೆ, ಚರಂಡಿ ವ್ಯವಸ್ಥೆ ಸರಿ ಇಲ್ಲ. ಒಂದು ವರ್ಷಕ್ಕೆ ಒಂದು ಬಾರಿಯಾದರೂ ನಮ್ಮ ಬೀದಿಗಳಿಗೆ ಭೇಟಿ ಕೊಟ್ಟು, ಮತ ಕೊಟ್ಟವರು ಸತ್ತಿದ್ದಾರಾ, ಬದುಕಿದ್ದಾರಾ ನೋಡಿ " ಹೀಗೆಂದು ಅರಸೀಕೆರೆ ನಗರದ ಬಾಬಾ ಸಾಬ್ ಕಾಲೋನಿ ಪ್ರದೇಶದಲ್ಲಿ ಮಹಿಳೆಯರು ಬುಧವಾರ ಬ್ಯಾನರ್ ಹಿಡಿದುಕೊಂಡು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡರ ಗಮನ ಸೆಳೆಯುವ ವಿಭಿನ್ನ ಪ್ರಯತ್ನ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಮಾತನಾಡಿ, ಶಾಸಕರು, ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ವೋಟ್ ಕೇಳಲು ಬರುತ್ತಾರೆ. ಹಾಗೂ ಹಲವು ಆಶ್ವಾಸನೆ ನೀಡುತ್ತಾರೆ. ಗೆದ್ದ ನಂತರ ಇತ್ತ ಕಡೆ ತಿರುಗು ಸಹ ನೋಡುವುದಿಲ್ಲ. ನಮ್ಮನ್ನ ಕಡೆಗಣಿಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಸ್ಲಿಂ ಮೊಹಲ್ಲಾಗಳಿಗೆ ಶಾಸಕರು ಭೇಟಿ ನೀಡಿ ಹಲವು ವರ್ಷಗಳೇ ಕಳೆದು ಹೋಗಿದೆ. ಶಾಸಕ ಶಿವಲಿಂಗೇಗೌಡರು ಕಳೆದ ವಿಧಾನಸಭೆ ಚುನಾವಣೆಯಾಗಲಿ ಲೋಕಸಭಾ ಚುನಾವಣೆಯಾಗಲಿ ಒಂದು ಸಾರಿಯೂ ಭೇಟಿ ನೀಡಿಲ್ಲ. ಮಳೆಯಿಂದ ಮನೆಗಳು ಬಿದ್ದುಹೋಗಿದೆ. ಚರಂಡಿಗಳು ಮಣ್ಣು ತುಂಬಿಕೊಂಡು ನೀರು ಮುಂದೆ ಸಾಗದೆ ಮನೆಗಳ ಗೋಡೆಗಳು ಶಿಥಿಲಗೊಂಡು ಬಿರುಕು ಬಿದ್ದು ಯಾವುದೇ ಸಮಯದಲ್ಲೂ ಸಹ ನಮ್ಮ ಕುಟುಂಬಸ್ಥರ ಮೇಲೆ ಬೀಳಬಹುದು ಎನ್ನುವ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದರು.ರಸ್ತೆಗಳು ಕಿತ್ತು ಹೋಗಿವೆ. ಸೇತುವೆಗಳು ಮುರಿದು ಬಿದ್ದಿರುವ ಕಾರಣ ಹಲವು ವಾಹನ ಸವಾರರು ರಾತ್ರಿ ಸಮಯದಲ್ಲಿ ಬಿದ್ದು ಕೈಕಾಲುಗಳು ಮುರಿದುಕೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟದಿಂದ ಮಕ್ಕಳಿಗೆ ಡೆಂಘೀ ಜ್ವರ ಹಾಗೂ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದುಡಿಯುತ್ತಿರುವ ಹಣವೆಲ್ಲ ಆಸ್ಪತ್ರೆಗಳಿಗೆ ಸುರಿವಂತಾಗಿದೆ. ಇಷ್ಟೊಂದು ಸಮಸ್ಯೆಗಳು ಇದ್ದರೂ ಸಹ ಸ್ಥಳೀಯ ಶಾಸಕರಾಗಲಿ, ನಗರಸಭೆ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಇತ್ತ ಕಡೆ ಗಮನಹರಿಸುತ್ತಿಲ್ಲ, ನಾಲ್ಕು ಸಾರಿ ಗೆಲ್ಲಿಸಿರುವ ಜನರ ಕಷ್ಟಗಳಿಗೆ ಸ್ಪಂದಿಸುವುದು ಶಾಸಕರ ಕರ್ತವ್ಯವಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.