ಸತತ 4 ಬಾರಿ ಶಾಸಕರಾಗಿ ಆಯ್ಕೆಯಾದ ಪುಟ್ಟರಂಗಶೆಟ್ಟಿ । ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಧ್ಯಕ್ಷ ಸ್ಥಾನ ನೀಡಿಡ ಸಿದ್ದರಾಮಯ್ಯ
ದೇವರಾಜು ಕಪ್ಪಸೋಗೆ ಕನ್ನಡಪ್ರಭ ವಾರ್ತೆ ಚಾಮರಾಜನಗರಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಧ್ಯಕ್ಷ ಸ್ಥಾನ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಗಣತಂತ್ರ ಹಬ್ಬದ ಉಡುಗೊರೆ ರೀತಿ ನಿಗಮ ಮಂಡಲಿ ಸ್ಥಾನ ನೀಡಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಪ್ರಭಾವಿ ನಾಯಕ ವಿ. ಸೋಮಣ್ಣ ಅವರನ್ನು ಸೋಲಿಸಿ ಚಾಮರಾಜನಗರದಲ್ಲಿ 4 ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಪುಟ್ಟರಂಗಶೆಟ್ಟಿಗೆ ಸರ್ಕಾರ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಕೊಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಅದು ಕೈ ತಪ್ಪಿದ ಬಳಿಕ ಡೆಪ್ಯುಟಿ ಸ್ಪೀಕರ್ ಪಟ್ಟ ನೀಡಲಾಗಿತ್ತು. ಆದರೆ, ಡೆಪ್ಯುಟಿ ಸ್ಪೀಕರ್ ಪಟ್ಟ ವಹಿಸಿಕೊಳ್ಳಲು ನಿರಾಕರಿಸಿದ್ದರಿಂದ ಸುಮಾರು 6 ತಿಂಗಳ ಬಳಿಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಲಿದಿದೆ. ಗ್ರಾಪಂ ಮೂಲಕ ರಾಜಕೀಯ ಪ್ರವೇಶ ಮಾಡಿದ ಪುಟ್ಟರಂಗಶೆಟ್ಟಿ ಅವರು ಜಿಪಂ ಸದಸ್ಯರಾಗಿ ಬಳಿಕ ಉಪಾಧ್ಯಕ್ಷರಾಗಿದ್ದ ವೇಳೆ 2008ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದರಿಂದ 2008, 2013, 2018 2023 ಹೀಗೆ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಎರಡನೇ ಬಾರಿಗೆ ಶಾಸಕರಾಗಿದ್ದ ವೇಳೆ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದರು. ಬಳಿಕ 2017ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಎಚ್.ಡಿ. ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾದ ಸಂದರ್ಭದಲ್ಲಿ ಸಚಿವ ಸ್ಥಾನ ಕಟ್ಟಿಟ್ಟಬುತ್ತಿ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ. ಸಚಿವ ಸ್ಥಾನ ಒಲಿಯದ ಹಿನ್ನೆಲೆ ನೀಡಲಾಗಿದ್ದ ಡೆಪ್ಯುಟಿ ಸ್ಪೀಕರ್ ಪಟ್ಟವನ್ನುನಿರಾಕರಿಸಿದ್ದ ಇದೀಗ ನಿಗಮ ಮಂಡಳಿ ಅಧ್ಯಕ್ಷ ಸ್ಛಾನಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಗಿದೆ. ಉಪ್ಪಾರ ಜನಾಂಗದ ಏಕೈಕ ಶಾಸಕ:ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಹಳೇ ಮೈಸೂರು ಭಾಗದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಕಳೆದ 4 ಚುನಾವಣೆಗಳಿಂದ ಕೈ ಭದ್ರಕೋಟೆಯಾಗಿದ್ದು ಸಿ. ಪುಟ್ಟರಂಗಶೆಟ್ಟಿ ಕ್ಷೇತ್ರದಲ್ಲಿ ನಿರಂತರವಾಗಿ 4 ಬಾರಿ ಗೆದ್ದ ಮೊದಲ ಶಾಸಕರಾಗಿದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. 68ರ ಹರೆಯದ ಪುಟ್ಟರಂಗಶೆಟ್ಟಿ ಹಿರಿಯ ಶಾಸಕರಾಗಿದ್ದು ಉಪ್ಪಾರ ಜಾತಿಯ ರಾಜ್ಯದ ಏಕೈಕ ಶಾಸಕ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ.