ಕನ್ನಡಪ್ರಭ ವಾರ್ತೆ ಬೇಲೂರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಬಗರ್‌ಹುಕುಂ ರೈತರಿಗೆ ಅನಗತ್ಯ ಕಿರುಕುಳ ಕೊಡುತ್ತಿರುವುದನ್ನ ವಿರೋಧಿಸಿ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದಾಗ ಶಾಸಕ ಎಚ್ ಕೆ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಕುಂದುಕೊರತೆ ಆಲಿಸಿದರು.ತಾಲೂಕಿನಲ್ಲಿ ವ್ಯಾಪಕವಾಗಿ ಮರಳುದಂಧೆ ನಡೆಯುತ್ತಿರುವ ಬಗ್ಗೆ ಬಳ್ಳೂರು ಸ್ವಾಮಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮರಳು ಅಕ್ರಮ ದಂಧೆಯ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ 14 ಇಲಾಖೆಗಳು ಒಳಪಡುತ್ತವೆ. ಪೊಲೀಸರು ಏಕೆ ಸುಮ್ಮನಿದ್ದಾರೆ ಗೊತ್ತಿಲ್ಲ ಎಂದರು.
ಈ ಮಧ್ಯೆ ಸ್ವಾಮಿ ಗೌಡ ಮಾತನಾಡಿ, ಪೊಲೀಸರ ಸಹಕಾರದೊಂದಿಗೆ ಮರಳುದಂಧೆ ನಡೆಯುತ್ತಿದೆ. ಅವರ ರಕ್ಷಣೆಯಲ್ಲಿ ಮರಳನ್ನು ಸಾಗಾಟ ಮಾಡಲಾಗುತ್ತಿದೆ ಎಂದರು. ಈ ಬಗ್ಗೆ ಶಾಸಕರು ಉತ್ತರಿಸಿ ಇನ್ನು ಮುಂದೆ ಒಂದು ಹಿಡಿ ಮರಳು ತೆಗೆಯಲು ಬಿಡುವುದಿಲ್ಲ.ಈ ಬಗ್ಗೆ ಆ ವ್ಯಾಪ್ತಿಗೆ ಸಂಬಂಧಪಟ್ಟ ಆರ್‌ಐ ಹಾಗೂ ವಿಎ ಕಳಿಸಿ ಮರಳನ್ನು ತೆಗೆಯಲು ಬಿಡಬಾರದು ಎಂದು ತಹಸಿಲ್ದಾರ್ ಅವರಿಗೆ ಸೂಚಿಸಿದರು.ತಾಲೂಕು ಕಚೇರಿಯ ಸರ್ವೆ ಇಲಾಖೆಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿ, ತಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ಆಡಳಿತ ನಡೆಸಲು ಆಸ್ಪದ ಕೊಡುವುದಿಲ್ಲ. ಇನ್ನು ಮುಂದೆ ರೈತನಿಗೆ ಏನಾದರೂ ತೊಂದರೆ ಕೊಟ್ಟಲ್ಲಿ ನೇರವಾಗಿ ತಮ್ಮನ್ನು ಸಂಪರ್ಕಿಸಿ ದೂರು ನೀಡಿ. ಈಗಿರುವ ತಹಸೀಲ್ದಾರವರು ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೂ ಕೆಲವರು ಕಣ್ ತಪ್ಪಿಸಿ ಕೆಲಸ ಮಾಡಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಇವಾಗಲೇ ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಹಾಗೂ ಕಾಡಾನೆಗಳ ಹಾವಳಿ ಬಗ್ಗೆ ಸದನದಲ್ಲಿ ವ್ಯಾಪಕವಾಗಿ ಚರ್ಚೆ ನಡೆಸಿದ್ದೇನೆ. ಸುರಾಪುರದಲ್ಲಿ ನಡೆದ ಕಾಡಾನೆ ದಾಳಿ ಸಂದರ್ಭದಲ್ಲಿ ಕೇವಲ 50,000 ಚಿಕಿತ್ಸೆಗೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಆದರೆ ತಾವು ಪಟ್ಟು ಹಿಡಿದು 15 ಲಕ್ಷ ಪರಿಹಾರ ಹಣ ಕೊಡಿಸಿದ್ದೇನೆ. ಮುಂದಿನ ದಿನಗಳಲ್ಲಿ ರೈತರ ಸಭೆ ಕರೆದು ನಡೆಯುತ್ತಿರುವ ಅನ್ಯಾಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದರು.ಈ ಸಂದರ್ಭದಲ್ಲಿ ರೈತ ಸಂಘ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.