ಕನ್ನಡಪ್ರಭ ವಾರ್ತೆ, ಶಿಕಾರಿಪುರ
ತಂದೆಯ ನಾಮಬಲದಿಂದ ಶಾಸಕರಾಗಿ, ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ವಿಜಯೇಂದ್ರ ಅವರ ಕೊಡುಗೆ ತಾಲೂಕಿಗೆ ಶೂನ್ಯವಾಗಿದೆ. ಪಾದಯಾತ್ರೆ ಮೂಲಕ ತಾಲೂಕಿನ ಏತ ನೀರಾವರಿಗೆ ಕಾರಣಕರ್ತರಾದ ಸಚಿವ ಮಧು ಬಂಗಾರಪ್ಪ ಬಗ್ಗೆ ಟೀಕಿಸುವ ನೈತಿಕ ಹಕ್ಕು ಶಾಸಕರಿಗಿಲ್ಲ ಎಂದು ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಎಸ್.ಪಿ. ನಾಗರಾಜಗೌಡ ತೀವ್ರ ವಾಗ್ದಾಳಿ ನಡೆಸಿದರು.ಪಟ್ಟಣದ ಮುದಿಗೌಡರ ಕೇರಿಯಲ್ಲಿನ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ಪಕ್ಷದಲ್ಲಿದ್ದ ಮಧು ಬಂಗಾರಪ್ಪ ಸೊರಬ ಜತೆಗೆ ಶಿಕಾರಿಪುರ ತಾಲೂಕಿಗೆ ಏತ ನೀರಾವರಿಗಾಗಿ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿದ ಫಲವಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನೀರಾವರಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಡಿಪಿಆರ್ ಸಿದ್ಧತೆಗಾಗಿ ₹85 ಲಕ್ಷ ಬಿಡುಗಡೆಗೊಳಿಸಿ, ಯೋಜನೆಗೆ ಚಾಲನೆ ನೀಡಿದ್ದರು. ಅನಂತರದಲ್ಲಿ ಸಿದ್ದರಾಮಯ್ಯ ಸಿಎಂ ಆದ ಅವಧಿಯಲ್ಲಿ ಯೋಜನೆಯನ್ನು ಬಜೆಟ್‌ನಲ್ಲಿ ಸೇರ್ಪಡೆಗೊಳಿಸಿದರು. ಈ ಬಗ್ಗೆ ಅಂಕಿ ಅಂಶಗಳನ್ನು ನೀಡಲು ಸಿದ್ಧ ಎಂದು ಅವರು ಆಯವ್ಯಯದ ಪ್ರತಿ ಪ್ರದರ್ಶಿಸಿದರು.
ಚುನಾವಣೆಯಲ್ಲಿ ಪರಾಭವ ಬಳಿಕವೂ ತಾವು ಮತದಾರರ ಸಮಸ್ಯೆ ಅರಿಯಲು ಗ್ರಾಮೀಣ ಭಾಗದಲ್ಲಿ ಪ್ರವಾಸ ಹಮ್ಮಿಕೊಂಡಿದ್ದೇನೆ. ಹಲವು ಕಡೆ ಏತ ನೀರಾವರಿ ಪೈಪ್‌ಲೈನ್ ಹಾಳಾಗಿ ನೀರು ಪೋಲಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಸಚಿವರ ಗಮನಕ್ಕೆ ತಂದು ಅಧಿಕಾರಿಗಳ ಮೂಲಕ ಸರಿಪಡಿಸಲಾಗಿದೆ. ಈ ಸಂದರ್ಭ ಸಹಚರರು ತೆಗೆದ ಫೋಟೋ ಬಗ್ಗೆ ವಿಜಯೇಂದ್ರ ವೇದಿಕೆಯಲ್ಲಿ ಕಾಂಗ್ರೆಸ್ ಪುಡಾರಿಗಳಿಗೆ ಲೋಕಸಭಾ ಚುನಾವಣೆ ನಂತರದಲ್ಲಿ ಉತ್ತರ ನೀಡುವುದಾಗಿ ಧಮ್ಕಿ ಹಾಕುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ ಕಾಲ ಮುಗಿದಿದೆ ಎಂದರು.ಸಿದ್ದರಾಮಯ್ಯ ಸಿಎಂ ಆದ ಅವಧಿಯಲ್ಲಿ ಏತ ನೀರಾವರಿಗೆ ಹಣ ಮಂಜೂರುಗೊಳಿಸಿದ್ದು, ಅನಂತರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೈಪ್‌ಲೈನ್ ಜನರೇಟರ್ ಜಾಕ್ವೆಲ್‌ಗಾಗಿ ಪುನಃ ₹850 ಕೋಟಿ ಬಿಡುಗಡೆಗೊಳಿಸಲಾಗಿದೆ. ಇದರೊಂದಿಗೆ ಕೆರೆ ಅಭಿವೃದ್ದಿಗೆ ₹85 ಕೋಟಿ, ರಸ್ತೆ ದುರಸ್ತಿಗೆ ₹66 ಕೋಟಿ, 145 ಸಮುದಾಯ ಭವನಕ್ಕೆ ₹32 ಕೋಟಿ ಬಿಡುಗಡೆಗೊಳಿಸಿ ಚುನಾವಣಾ ಪೂರ್ವದಲ್ಲಿ ಬಿಜೆಪಿಗೆ ಮತ ನೀಡದಿದ್ದಲ್ಲಿ ಕಾಮಗಾರಿ ಅರ್ದಕ್ಕೆ ಸ್ಥಗಿತಗೊಳಿಸುವುದಾಗಿ ಬ್ಲಾಕ್‌ಮೇಲ್ ಮಾಡಿ, ಕರಪತ್ರ ಹಂಚಿದ್ದು, ಈ ಬಗ್ಗೆ ಸೂಕ್ತ ದಾಖಲೆ ಹೊಂದಿರುವುದಾಗಿ ತಿಳಿಸಿದರು.
ಕೆಡಿಪಿ ಮಾಜಿ ಸದಸ್ಯ ಉಮೇಶ್ ಮಾರವಳ್ಳಿ ಮಾತನಾಡಿ, ಕಾಂಗ್ರೆಸ್ ದುಷ್ಟ ಭ್ರಷ್ಟ ಎಂದು ಜರಿಯುವ ಶಾಸಕರು ತಮ್ಮ ಕುಟುಂಬದ ಎಲ್ಲರ ಬಗ್ಗೆ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಹಿತ ವಿವಿಧ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವುದನ್ನು ಮರೆತಿದ್ದಾರೆ ಎಂದು ಟೀಕಿಸಿದರು.ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿದರು. ಪುರಸಭಾ ಮಾಜಿ ಸದಸ್ಯ ಶಿವರಾಂ ಪಾರಿವಾಳದ, ಮುಖಂಡ ಅಂಬಾರಗೊಪ್ಪ ರಾಜಣ್ಣ, ಎಚ್.ಎಸ್. ರವೀಂದ್ರ, ಸುರೇಶ್ ಧಾರವಾಡದ, ಸುಬ್ರಹ್ಮಣ್ಯ ರೇವಣ್ಕರ್, ಬುಡೇನ್ ಸಾಬ್, ಬೆಳಕೇರಪ್ಪ, ನಾಗಪ್ಪ ಬೆಂಡೆಕಟ್ಟೆ, ರೇಣುಕಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
- - -ಕೋಟ್ ಬಂಗಾರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಅಕ್ಷಯ, ಆರಾಧನಾ, ಗ್ರಾಮೀಣ ಕೃಪಾಂಕ, ಉಚಿತ ವಿದ್ಯುತ್ ಸಹಿತ ನೂರಾರು ಜನತೆಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ನೀವು ಕನಿಷ್ಠ 4 ಜನರಿಗೆ ಉದ್ಯೋಗ ದೊರಕಿಸಿಕೊಟ್ಟ ಬಗ್ಗೆ ದಾಖಲೆ ನೀಡಿ, ನಂತರದಲ್ಲಿ ಬಂಗಾರಪ್ಪ ಅವರನ್ನು ಟೀಕಿಸಿ
- ಎಸ್.ಪಿ. ನಾಗರಾಜಗೌಡ, ಕಾಂಗ್ರೆಸ್ ಮುಖಂಡ- - - -1ಕೆಎಸ್.ಕೆಪಿ2: ಪತ್ರಿಕಾಗೋಷ್ಠಿಯಲ್ಲಿ ನಾಗರಾಜಗೌಡ ಮಾತನಾಡಿದರು.