ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಿದರೆ ಶಾಸಕರಿಗೆ ಜವಾಬ್ದಾರಿ ಕಡಿಮೆ: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Jul 26, 2025, 12:30 AM IST
25ಕೆಎಂಎನ್ ಡಿ14 | Kannada Prabha

ಸಾರಾಂಶ

ಕೆಡಿಪಿ ಸಭೆಯನ್ನು ಪ್ರತಿ ಹೋಬಳಿಗೊಂದು ಗ್ರಾಪಂಗಳಲ್ಲಿ ಗ್ರಾಮಗಳ ಅಭಿವೃದ್ಧಿ, ಜನಸಾಮಾನ್ಯರ ಕೆಲಸಗಳನ್ನು ಮಾಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಿದರೆ ಕ್ಷೇತ್ರದ ಶಾಸಕರಿಗೆ ಜವಾಬ್ದಾರಿ ಕಡಿಮೆಯಾಗುತ್ತದೆ ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಶೀಳನೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ,

ತಾಲೂಕಿನ 300 ಗ್ರಾಮಗಳ ಸಮಸ್ಯೆಗಳನ್ನು ಶಾಸಕರು ಏಕಕಾಲಕ್ಕೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಸಾಂವಿಧಾನಿಕವಾಗಿ ಗ್ರಾಪಂಗಳಿಗೆ ಸ್ಥಳೀಯ ಸರ್ಕಾರವಾಗಿ ಅಧಿಕಾರ ನೀಡಲಾಗಿದೆ. ಇದನ್ನು ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ತಮ್ಮ ಅಧಿಕಾರ ಚಲಾಯಿಸಿ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ತಾಪಂ ಮಟ್ಟದಲ್ಲಿ ನಡೆಯುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ಗ್ರಾಪಂ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವ ಅಧಿಕಾರ ವಿಕೇಂದ್ರೀಕರಣವನ್ನು 2018- 19ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಜಾರಿಗೆ ತಂದಿರುವುದಾಗಿ ತಿಳಿಸಿದರು.

ಅಂದಿನಿಂದ ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಪಂಚಾಯಿತಿ ಮಟ್ಟದ ವಿವಿಧ ಇಲಾಖೆಗಳ ಕೆಡಿಪಿ ಸಭೆ ನಡೆಸಲಾಗುತ್ತಿದೆ. ಆದರೆ, ನಮ್ಮ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದರು.

ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರಿಗೆ ಅಧಿಕಾರಿಗಳನ್ನು ಜನಸಾಮಾನ್ಯರ ಕೆಲಸವನ್ನು ಹೇಗೆ ಮಾಡುತ್ತಿದ್ದಾರೆ. ಮಾಡದೇ ಇದ್ದರೆ ಏಕೆ ಮಾಡಿಲ್ಲ, ವಿಳಂಬವೇಕೆ ಎಂದು ಪ್ರಶ್ನಿಸುವ ಮೂಲಕ ಜನ ಸಾಮಾನ್ಯರ ಕೆಲಸಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಮಾಡಿಸುವ ಹಕ್ಕನ್ನು ನೀಡಲಾಗಿದೆ ಎಂದು ಹೇಳಿದರು.

ಕೆಡಿಪಿ ಸಭೆಯನ್ನು ಪ್ರತಿ ಹೋಬಳಿಗೊಂದು ಗ್ರಾಪಂಗಳಲ್ಲಿ ಗ್ರಾಮಗಳ ಅಭಿವೃದ್ಧಿ, ಜನಸಾಮಾನ್ಯರ ಕೆಲಸಗಳನ್ನು ಮಾಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳು, ಸಹಕಾರ ಸಂಸ್ಥೆಗಳು, ಸರ್ಕಾರಿ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು ಸಹ ಕೆಡಿಪಿ ಸಭೆಗೆ ಬಂದು ತಮ್ಮ ಸಂಸ್ಥೆಯ ಪ್ರಗತಿ ಬಗ್ಗೆ ವರದಿ ಮಂಡಿಸಬೇಕು. ಸಭೆಗೆ ಬಾರದೇ ಗೈರು ಹಾಜರಾದರೆ ಕಾರಣ ಕೇಳಿ ನೋಟಿಸ್ ನೀಡಬೇಕು. ಮುಂದಿನ ಕೆಡಿಪಿ ಸಭೆಗೆ ಕಡ್ಡಾಯವಾಗಿ ಬರುವಂತೆ ತಿಳಿವಳಿಕೆ ಪತ್ರ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಯುವರಾಜ್, ತಾಪಂ ಇಒ ಕೆ.ಸುಷ್ಮಾ, ತಾಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಉಪಾಧ್ಯಕ್ಷೆ ನಾಗಮ್ಮ, ಪಿಡಿಒ ನವೀನ್, ಸದಸ್ಯರಾದ ಎಸ್.ಪಿ.ಸಿದ್ದೇಶ್, ಎಸ್.ಕೆ.ಪ್ರಕಾಶ್, ಮರಡಹಳ್ಳಿ ಪ್ರದೀಪ್, ಗಾಯಿತ್ರಿ ಸಿದ್ದೇಶ್ ಸೇರಿ ವಿವಿಧ ಗ್ರಾಮಗಳ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು