ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ನದಿ ತಟದಲ್ಲಿ ಬದುಕುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಅವರ ಮಹಿಳೆಯರ ಮೇಲಿನ ದೈಹಿಕ ಹಲ್ಲೆಗಳಿಗೆ ಶಾಸಕರು, ಸಂಸದರು ಸ್ಪಂದಿಸುತ್ತಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ, ಪರಿಶಿಷ್ಟ ಜಾತಿಯ ಈ ಬುಡಕಟ್ಟು ಅಲೆಮಾರಿ ಸಮುದಾಯಗಳನ್ನು ಮೇಲಕ್ಕೆತ್ತಬೇಕಾದ ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮಗಳು ಹೆಸರಿಗಷ್ಟೇ ಇವೆ. ಈ ಸಮುದಾಯದವರ ಗುಡಿಸಲಿಗೊಮ್ಮೆ ಶಾಸಕರು ಸಂಸದರು, ಜಿಲ್ಲಾಡಳಿದ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಬೇಕು ಎಂದು ಡಿವೈಎಫ್ಐ ರಾಜ್ಯ ಮುಖಂಡ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.ಅವರು ಮಂಗಳವಾರ ಈ ಅಲೆಮಾರಿ ಸಮುದಾಯಗಳಿಗೆ ಮನೆ ನಿವೇಶನ ಸಹಿತ ಹಲವು ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಬ್ರಹ್ಮಾವರ, ಪಾಂಗಳ, ಮಲ್ಪೆ, ಕಟ್ ಬೆಳ್ತೂರು, ಗುಲ್ವಾಡಿ ನದಿ ತಟದಲ್ಲಿ ವಾಸಿಸುತ್ತಿರುವ ಈ ಸಮುದಾಯದವರ ಮೇಲೆ ಸ್ಥಳೀಯರಿಂದ ಹಲ್ಲೆಗಗಳಾಗಿವೆ. ಆದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ದೂರಿದರು.ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳ ಹಕ್ಕುಗಳ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕವಿರಾಜ್ ಎಸ್. ಕಾಂಚನ್ ಮಾತನಾಡಿ, ಕುಂದಾಪುರದಲ್ಲಿ ಗಂಗೊಳ್ಳಿಯಲ್ಲಿ ಈ ಸಮುದಾಯದವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಅಕ್ರಮ ಮರಳುಗಾರಿಕೆ ನಡೆಸುವ ಬಲಾಡ್ಯರು ರಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಹಲ್ಲೆಗೊಳಗಾದ ಸಮುದಾಯದ ಮಹಿಳೆ ಜಯಮಾಲ, ದೀಪು, ಸಿಐಟಿಯು ಜಿಲ್ಲಾ ಮುಖಂಡರಾದ ಶಶಿಧರ್ ಗೊಲ್ಲ, ಅಲೆಮಾರಿ ಸಮುದಾಯದ ಮುಖಂಡರಾದ ಶಂಕರ ಗುಲ್ವಾಡಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಸಂಚಾಲಕರಾದ ಪ್ರಭಾಕರ್ ಪೂಜಾರಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲಾ ಸಂಚಾಲಕ ಸಿದ್ದಬಸಯ್ಯ ಸ್ವಾಮಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಮೋಹನ್, ನಳಿನಿ ಎಸ್., ಸಮುದಾಯದ ಮುಖಂಡರಾದ ವೆಂಕಟೇಶ, ಲೋಕೇಶ್, ಬಾಬು, ಪ್ರಕಾಶ್, ಲೋಕೇಶ್, ಸಿದ್ದಪ್ಪ, ಸ್ವಾಮಿ, ನಾಗರಾಜ್ ಮುಂತಾದವರಿದ್ದರು. ಸಮಿತಿಯ ಕಾರ್ಯದರ್ಶಿ ರಾಮ ಟಿ.ಎನ್. ಸ್ವಾಗತಿಸಿ ನಿರೂಪಿಸಿದರು.
ಪ್ರತಿಭಟನೆಯ ನಂತರ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಮನವಿಯನ್ನು ಸ್ವೀಕರಿಸಿದರು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಭರವಸೆಯಿತ್ತರು.