ಬಾಕಿ ಆಸ್ತಿ ತೆರಿಗೆ ದಂಡ: ಕಾಯ್ದೆ ತಿದ್ದುಪಡಿ ಮಾಡಲು ಡಿಕೆಶಿಗೆ ಆಗ್ರಹಿಸಿದ ನಗರದ ಶಾಸಕರು, ಸಂಸದರು ಒತ್ತಾಯ

KannadaprabhaNewsNetwork |  
Published : Jan 30, 2024, 02:06 AM IST
DCM Meeting 1 | Kannada Prabha

ಸಾರಾಂಶ

ಜನಪ್ರತಿನಿಧಿಗಳ ಸಭೆ, ಬಾಕಿ ಆಸ್ತಿ ತೆರಿಗೆ ದಂಡ: ಕಾಯ್ದೆ ತಿದ್ದುಪಡಿ ಮಾಡಲು ಡಿಕೆಶಿಗೆ ಆಗ್ರಹಿಸಿದ ನಗರದ ಶಾಸಕರು, ಸಂಸದರು ಒತ್ತಾಯ. ದುಬಾರಿ ದಂಡ, ಬಡ್ಡಿಗೆ ತೀವ್ರ ವಿರೋಧ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ವಿಳಂಬಕ್ಕೆ ಹೆಚ್ಚಿನ ಪ್ರಮಾಣದ ದಂಡ, ಬಡ್ಡಿ ಪ್ರಮಾಣ ತಗ್ಗಿಸಲು ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರದ ಬಹುತೇಕ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಒತ್ತಾಯಿಸಿದರು.

ಬಿಬಿಎಂಪಿ ಬಜೆಟ್‌ಗೆ ಸಲಹೆ ಪಡೆಯುವುದು ಸೇರಿದಂತೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿಧಾನಸೌಧದಲ್ಲಿ ಬೆಂಗಳೂರಿನ ಶಾಸಕರು, ಸಂಸದರೊಂದಿಗೆ ಸೋಮವಾರ ಸಭೆ ನಡೆಸಿದರು.

ಸಭೆಯಲ್ಲಿ ಶಾಸಕರಾದ ಸುರೇಶ್‌ ಕುಮಾರ್‌, ಬೈರತಿ ಬಸವರಾಜು, ಮುನಿರಾಜು, ಟಿ.ಎ. ಶರವಣ ಸೇರಿದಂತೆ ಬಹುತೇಕರು ಆಸ್ತಿ ತೆರಿಗೆ ವಿಚಾರವಾಗಿ ಚರ್ಚಿಸಿದರು. ಬಿಬಿಎಂಪಿ ಕಾಯ್ದೆಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿ ವಿಳಂಬಕ್ಕೆ ದುಬಾರಿ ದಂಡ ಮತ್ತು ಬಡ್ಡಿ ವಿಧಿಸಲಾಗುತ್ತಿದೆ. ಅದರ ಜತೆಗೆ ತೆರಿಗೆ ಸುಸ್ತಿದಾರರು ತಮ್ಮ ಸ್ವತ್ತನ್ನು ಮಾರಾಟ ಮಾಡುವುದಕ್ಕೂ ಕಾಯ್ದೆಯಲ್ಲಿ ತೊಡಕಿದೆ. ಹೀಗಾಗಿ ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ಅದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಬಿಬಿಎಂಪಿ ಕಾಯ್ದೆ 2020ರಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಹೆಚ್ಚಿನ ಪ್ರಮಾಣದ ದಂಡ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕಾನೂನಿನಲ್ಲಿ ಮತ್ತೆ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ:

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಸುಪ್ರೀಂಕೋರ್ಟ್‌ ಆದೇಶದಂತೆ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 6 ಟಿಎಂಸಿ ನೀರನ್ನು ಬಳಸಬಹುದಾಗಿದೆ. ಹೀಗಾಗಿ ಈ ಬಾರಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಫ್ಲೆಕ್ಸ್‌ ಹಾಕಿದರೆ ದಂಡ ಖಚಿತ

ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಫ್ಲೆಕ್ಸ್‌ ಹಾಕಿದ್ದಕ್ಕೆ ನನ್ನ ವಿರುದ್ಧವೇ ದಂಡ ವಿಧಿಸಿದ್ದಾರೆ. ಯಾವುದೇ ಪಕ್ಷ, ನಾಯಕರು ಅನಧಿಕೃತ ಫ್ಲೆಕ್ಸ್‌ ಹಾಕಬಾರದು. ಒಂದು ವೇಳೆ ನಿಯಮ ಮೀರಿ ಹಾಕಿದರೆ ಕಾನೂನು ರೀತಿಯಲ್ಲಿ ದಂಡ ವಿಧಿಸುವುದು ಸೇರಿ ಇನ್ನಿತರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದರು.

ಸಚಿವರಾದ ಕೆ.ಜೆ. ಜಾರ್ಜ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಜಮೀರ್‌ ಅಹಮದ್‌ಖಾನ್‌, ಸಂಸದರಾದ ಡಿ.ಕೆ.ಸುರೇಶ್, ಜಿ.ಸಿ.ಚಂದ್ರಶೇಖರ್‌, ಡಾ। ಎಲ್‌.ಹನುಮಂತಯ್ಯ, ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಎಂ.ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ಮುನಿರಾಜು, ಉದಯ್‌ ಗರುಡಾಚಾರ್‌, ಶ್ರೀನಿವಾಸ್‌, ಶಿವಣ್ಣ, ಯು.ಬಿ.ವೆಂಕಟೇಶ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ