ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಭವಿಷ್ಯದ ಮಕ್ಕಳ ಜ್ಞಾನ ಕಸಿಯುತ್ತಿರುವ ಮೊಬೈಲ್, ತಲೆ ಎತ್ತುವ ಬದಲು ತಲೆ ತಗ್ಗಿಸುವಂತೆ ಮಾಡುತ್ತಿದೆ ಎಂದು ಅಪರ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಕೆ.ವಿ.ಶರತ್ ಚಂದ್ರ ಆತಂಕ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇಂದಿನ ಮಕ್ಕಳಿಗೆ ಮೊಬೈಲ್ ಸರ್ವಸ್ವವಾಗಿದೆ. ಜ್ಞಾನ ಮರೆಯಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಭವಿಷ್ಯದ ಮಕ್ಕಳಲ್ಲಿ ದೈಹಿಕ, ಮಾನಸಿಕ ಅನಾರೋಗ್ಯ ಕಾಡುತ್ತಿದೆ ಎಂದು ಎಚ್ಚರಿಸಿದರು.
ನಿತ್ಯ ಮೊಬೈಲ್ ಬಳಕೆ, ಚಾಟಿಂಗ್, ವ್ಯಾಟ್ಸಫ್, ಸಾಮಾಜಿಕ ಜಾಲತಾಣ ವೀಕ್ಷಣೆಯಿಂದ ಯುವಕರು, ವಿದ್ಯಾರ್ಥಿಗಳು ದಾರಿತಪ್ಪುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಎಳೆಯ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಯಿಂದ ಕನ್ನಡಕ ಬಳಕೆ ಹೆಚ್ಚಾಗಿದೆ ಬೇಸರ ವ್ಯಕ್ತಪಡಿಸಿದರು.ಅತಿಯಾದ ಮೊಬೈಲ್ ಬಳಕೆಯಿಂದ ಕೌಟುಂಬಿಕ ಬಾಂಧವ್ಯ ಕಸಿದು ಅಡ್ಡದಾರಿಯಲ್ಲಿ ಯುವ ಸಮುದಾಯ ಸಾಗುತ್ತಿದೆ. ಅರ್ಧಕ್ಕೆ ಓದಿಗೆ ಮೊಟಕು ಹಾಕುತ್ತಿದ್ದಾರೆ. ಪೋಷಕರ ಬಾಂಧವ್ಯ ಕುಸಿಯುತ್ತಿದೆ ಎಂದರು.
ಮಕ್ಕಳಲ್ಲಿ ಸಂಸ್ಕಾರ ಬಲುಮುಖ್ಯ. ಪೋಷಕರು ಎಚ್ಚೆತ್ತು ಕೊಂಡು ಮಕ್ಕಳಿಗೆ ತಿಳಿ ಹೇಳಬೇಕು. ಮಕ್ಕಳಿಗೆ ದಿನಕ್ಕೊಂದು ಕಥೆ, ಸಕಾರಾತ್ಮಕ ಹರಟೆಯಲ್ಲಿ ತೊಡಬೇಕು. ಕೌಟುಂಬಿಕ ಪ್ರೀತಿ ವಾತಾವರಣ, ಉತ್ತಮ ಪುಸ್ತಕ ಓದುವಿಕೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.ಕೇವಲ ಕ್ರಿಕೆಟ್, ಕಬಡ್ಡಿಯಂತಹ ಕ್ರೀಡೆ ಆಡಿದರೆ ಮಾನಸಿಕ, ದೈಹಿಕ ಆರೋಗ್ಯ ಸಿಗಲಾರದು. ದೈಹಿಕ, ಮಾನಸಿಕವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹುಟ್ಟಿದ ಬೆಳೆದ ಕಿಕ್ಕೇರಿ ನನ್ನೂರು. ಇಂದು ಸಾಂಸ್ಕೃತಿಕ ತವರೂರಾಗಿದೆ. ಯಾರು ಕೂಡ ಓದಿದ ಶಾಲೆ, ಹೆತ್ತ ಮಾತಾಪಿತೃಗಳನ್ನು ಮರೆಯಬಾರದು. ಬದುಕು ಕಟ್ಟಿಕೊಡುವ ಪುಣ್ಯ ಸ್ಥಾನವನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.ಕಿಕ್ಕೇರಿಯವರಾದ ಬೆಂಗಳೂರಿನ ಜಯದೇವ ಆಸ್ಪತ್ರೆ ಹೃದಯ ತಜ್ಞ ಡಾ.ಕೆ.ಎಚ್.ಶ್ರೀನಿವಾಸಶೆಟ್ಟಿ ಮಾತನಾಡಿ, ಇಂದಿನ ಜೀವನಶೈಲಿ, ಆಹಾರ ಪದ್ಧತಿಯಿಂದ ಯುವಕರಲ್ಲಿಯೇ ಹೆಚ್ಚು ಹೃದ್ರೋಗ ಸಮಸ್ಯೆ ಕಾಡುತ್ತಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಈ ಹಿಂದಿನ ದೈನಂದಿನ ಚಟುವಟಿಕೆ ದೇಹಕ್ಕೆ ಕಸರತ್ತು ನೀಡುತ್ತಿತ್ತು. ಇಂದು ಯಂತ್ರಿಕೃತ ಬದುಕು ಶಾರೀರಿಕ ವ್ಯಾಯಮಕ್ಕೆ ವಿರಾಮ ನೀಡಿ ಬಾರದ ರೋಗ ಬರುವಂತಾಗಿದೆ. ಆರೋಗ್ಯವಂತ ಬದುಕಿಗಾಗಿ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಚಿಂತೆ ಬಿಟ್ಟು ಋತುವಿಗೆ ತಕ್ಕಆಹಾರ ಹಿತಮಮಿತವಾಗಿ ಸೇವಿಸುತ್ತಾ ಬಂದರೆ ಹೃದ್ರೋಗದಂತಹ ಹಲವು ರೋಗ ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.ಈ ವೇಳೆ ಬೆಂಗಳೂರಿನ ರಾಜ್ಯಗುಪ್ತ ವಾರ್ತೆ ಸಹಾಯಕ ನಿರ್ದೇಶಕ ಬಿ.ಬಿ. ಲಕ್ಷ್ಮೇಗೌಡ, ಕೆಪಿಸಿಸಿ ಸದಸ್ಯ ಸುರೇಶ್, ಬಿಜೆಪಿ ಮುಖಂಡ ಕೆ.ವಿ. ಮೋಹನ್, ಅರುಣಕುಮಾರ್, ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ಇದ್ದರು.