ವಿಜಯನಗರ ಕಾರ್ಖಾನೆ ಎದುರು ಅಣಕು ಶವ ಪ್ರದರ್ಶನ

KannadaprabhaNewsNetwork | Published : Nov 30, 2023 1:15 AM

ಸಾರಾಂಶ

ಮುಂಡರಗಿ ತಾಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಗಂಗಾಪುರ ವಿಭಾಗದ ಕೊರ್ಲಹಳ್ಳಿ, ಗಂಗಾಪುರ ಹಾಗೂ ಶೀರನಹಳ್ಳಿ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾರ್ಖಾನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಕಟಾವಿಗೆ ಗ್ಯಾಂಗ್ ಮ್ಯಾನ್ ಗಳನ್ನು ಕಳಿಸುತ್ತಿಲ್ಲ ಎಂದು ಮಂಗಳವಾರ ಕಾರ್ಖಾನೆ ಎದುರಿನಲ್ಲಿ ಅಣಕು ಶವಯಾತ್ರೆ ಮಾಡುವ ಮೂಲಕ ತಕ್ಷಣವೇ ನಿತ್ಯ 250 ಟನ್ ಕಟಾವಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.

ಮುಂಡರಗಿ: ತಾಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಗಂಗಾಪುರ ವಿಭಾಗದ ಕೊರ್ಲಹಳ್ಳಿ, ಗಂಗಾಪುರ ಹಾಗೂ ಶೀರನಹಳ್ಳಿ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾರ್ಖಾನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಕಟಾವಿಗೆ ಗ್ಯಾಂಗ್ ಮ್ಯಾನ್ ಗಳನ್ನು ಕಳಿಸುತ್ತಿಲ್ಲ ಎಂದು ಮಂಗಳವಾರ ಕಾರ್ಖಾನೆ ಎದುರಿನಲ್ಲಿ ಅಣಕು ಶವಯಾತ್ರೆ ಮಾಡುವ ಮೂಲಕ ತಕ್ಷಣವೇ ನಿತ್ಯ 250 ಟನ್ ಕಟಾವಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಗಂಗಾಪುರ ವಿಭಾಗದಲ್ಲಿ ಕೊರ್ಲಹಳ್ಳಿ, ಗಂಗಾಪುರ ಹಾಗೂ ಶೀರನಹಳ್ಳಿ ಗ್ರಾಮಗಳು ಒಟ್ಟು ಸುಮಾರು 30 ಸಾವಿರ ಟನ್ ಕಬ್ಬು ಬೆಳೆದಿದ್ದು, ಇದೀಗ ಕಾರ್ಖಾನೆಯವರು ನಿತ್ಯ 100 ರಿಂದ 130 ಟನ್ ವರೆಗೆ ಮಾತ್ರ ಕಬ್ಬು ಕಟಾವು ಮಾಡಿಸುತ್ತಿದ್ದಾರೆ. ಹೀಗೆ ಆದರೆ ಕಾರ್ಖಾನೆಯ ಕಬ್ಬು ಅರೆಯುವ ಅವಧಿ ಮುಗಿದರೂ ನಮ್ಮ ವಿಭಾಗದ ಕಬ್ಬು ಕಟಾವು ಮುಗಿಯುವುದಿಲ್ಲ. ಆದ್ದರಿಂದ ನಮಗೆ ತಕ್ಷಣವೇ ನಿತ್ಯ ಸುಮಾರು 250 ಟನ್ ಕಬ್ಬು ಕಟಾವು ಮಾಡಲು ಗ್ಯಾಂಗ್‌ಗಳನ್ನು ಕಳಿಸಬೇಕು.

ಕಾರ್ಖಾನೆಯವರು ಪ್ರತಿವರ್ಷವೂ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ರೈತರಿಗೆ ಇದೇ ರೀತಿ ತೊಂದರೆ ಮಾಡುತ್ತಾರೆ. 14ರಿಂದ 16 ತಿಂಗಳ ಕಾಲ ಸಾಕಷ್ಟು ಕಷ್ಟಪಟ್ಟು ಕಬ್ಬು ಬೆಳೆದ ರೈತರಿಗೆ ವೇಳೆಗೆ ಸರಿಯಾಗಿ ಕಟಾವು ಮಾಡಿಸದಿದ್ದರೆ ಕಬ್ಬು ಒಣಗಿಹೋಗುತ್ತದೆ. ಒಣಗುವುದರಿಂದ ಕಬ್ಬು ತೂಕ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಹಾನಿಯಾಗಲಿದೆ. ಆದ್ದರಿಂದ ಕಾರ್ಖಾನೆಯವರು ತಕ್ಷಣವೇ ಹೆಚ್ಚಿನ ಗ್ಯಾಂಗ್ ಗಳನ್ನು ಕರೆತಂದು ರೈತರಿಗೆ ಹಾನಿಯಾಗದಂತೆ ಕಬ್ಬು ಕಟಾವು ಮಾಡಿಸಬೇಕು. ನಮಗೆ 250 ಟನ್ ಕಬ್ಬು ಕಟಾವು ಮಾಡುವ ಭರವಸೆ ನೀಡುವವರೆಗೂ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಕಬ್ಬು ಕಟಾವು ವಿಭಾಗದ ಎಜಿಎಂ ಮಂಜುನಾಥ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತನಾಡಿ, ನಮ್ಮ ಕಾರ್ಖಾನೆಯ ವ್ಯಾಪ್ತಿಯಲ್ಲಿ ಸುಮಾರು 5 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ಸುಮಾರು 1.50 ಲಕ್ಷದಷ್ಟು ಅರೆದಿದ್ದೇವೆ. ಉಳಿದ ವಿಭಾಗಗಳಲ್ಲಿ ಕಟಾವಿನ ಕಾರ್ಯ ನಡೆದಿದ್ದು, ಗಂಗಾಪೂರ ವಿಭಾಗದಲ್ಲಿ ಸ್ವಲ್ಪ ವಿಳಂಬವಾಗಿದೆ. ತಾವು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಂಗ್ ಗಳನ್ನು ಕರೆಸಲು ಕಾರ್ಖಾನೆಯಿಂದ ಸುಮಾರು 2 ಕೋಟಿ ರು.ಗಳನ್ನು ಕಾರ್ಮಿಕರಿಗೆ ಮುಂಗಡವಾಗಿ ನೀಡಿದ್ದು, ನಾವು ಮುಂಗಡ ಹಣಕೊಟ್ಟ ಗ್ಯಾಂಗುಗಳು ನಮ್ಮ ಕಾರ್ಖಾನೆಗೆ ಬರದೇ ಬೇರೆಡೆಗೆ ಹೋಗಿ ನಮಗೆ ಮೋಸ ಮಾಡಿದ್ದಾರೆ. ಹೀಗಾಗಿ ನಾವಿಲ್ಲಿ ಸಮಯಕ್ಕೆ ಸರಿಯಾಗಿ ರೈತರ ಕಬ್ಬು ಕಟಾವು ಮಾಡಿಸುವುದಕ್ಕೆ ವಿಳಂಬವಾಗುತ್ತದೆ. ಅಲ್ಲದೇ ಪ್ರತಿವರ್ಷಕ್ಕಿಂತ ಪ್ರಸ್ತುತ ವರ್ಷ ಕಾರ್ಖಾನೆ ಒಂದು ತಿಂಗಳ ತಡವಾಗಿ ಪ್ರಾರಂಭವಾಗಿದೆ. ಹೀಗಾಗಿ ನಮಗೆ ತೊಂದರೆವುಂಟಾಗಿದ್ದು, ರೈತರು ಸಹಕಾರ ನೀಡಿದರೆ ಗಂಗಾಪುರ ವಿಭಾಗದಲ್ಲಿ ಮುಂದಿನ 15 ದಿನಗಳಲ್ಲಿ ನಿತ್ಯ 250 ಟನ್ ಕಟಾವು ಮಾಡಲು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ರವಿಕುಮಾರ ಕೊಳಲ ಮಾತನಾಡಿ, ಕಾರ್ಖಾನೆಯವರು ರೈತರಿಗೆ ಪ್ರತಿವರ್ಷವೂ ಇದೇ ರೀತಿಯ ಹಾರಿಕೆ ಉತ್ತರ ನೀಡುತ್ತೀರಿ. ನಮಗೆ ನಿಮ್ಮ ಮಾತುಗಳ ಮೇಲೆ ನಂಬಿಕೆ ಇಲ್ಲ. ನಿತ್ಯ 250 ಟನ್ ಕಡಿಸಲು ಇಂದಿನಿಂದಲೇ ಗ್ಯಾಂಗ್ ಗಳನ್ನು ಕಳಿಸಿದರೆ ನಾವು ಪ್ರತಿಭಟನೆ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ನೀವು ಭರವಸೆ ನೀಡುವವರೆಗೂ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದರು. ನಂತರ ಮಾತನಾಡಿದ ಎಜಿಎಂ ಮಂಜುನಾಥ ಅವರು, ಇಂದಿನಿಂದ ಗಂಗಾಪುರ ವಿಭಾಗದಲ್ಲಿ ನಿತ್ಯ 170 ಟನ್ ಕಟಾವು ಮಾಡಿಸುವ ವ್ಯವಸ್ಥೆ ಮಾಡುತ್ತಿದ್ದು, ಮುಂದಿನ 4-5 ದಿನಗಳಲ್ಲಿ ನಿತ್ಯ 250ಕ್ಕೂ ಹೆಚ್ಚು ಟನ್ ಕಟಾವು ಮಾಡಿಸುವ ಭರವಸೆ ನೀಡಿದರು. ನಂತರ ರೈತರು ತಮ್ಮ ಪ್ರತಿಭಟನೆ ಹಿಂದೆ ಪಡೆದರು. ಈ ಸಂದರ್ಭದಲ್ಲಿ ಕಬ್ಬು ವಿಭಾಗದ ದೇವೇಂದ್ರಪ್ಪ ಉಪಸ್ಥಿತರಿದ್ದರು.ಪ್ರತಿಭಟನೆಯಲ್ಲಿ ರಂಜಿತ್ ಮಧ್ಯಪಾಟಿ, ಮಾಬೂಸಾಬ್ ಬಳ್ಳಾರಿ, ಮಾಬೂಸಾಬ್ ಮುಂಡರಗಿ, ಕೋಟೆಪ್ಪ ಚೌಡಕಿ, ರಂಗಪ್ಪ ಗಾಂಜಿ, ಹನಮಪ್ಪ ಶೀರನಹಳ್ಳಿ, ರಾಜಾಭಕ್ಷಿ ಬುಡೇನಾಯ್ಕರ್, ಈರಣ್ಣ ಸಜ್ಜನರ, ಇಮಾಮಸಾಬ್, ಚೆನ್ನಬಸಪ್ಪ ಅಸುಂಡಿ, ಕರಿಯಪ್ಪ ಗೊಂಡಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article