ಡಿಸಿ ಗಂಗಾಧರಸ್ವಾಮಿ ಮಾಹಿತಿ । ಮಹಾನಗರ ಪಾಲಿಕೆ ಆವರಣದಲ್ಲಿ ಕಾರ್ಯಕ್ರಮ । ಜನರಿಗೆ ಜಿಲ್ಲಾಡಳಿತದಿಂದ ಜಾಗೃತಿ
ಕನ್ನಡಪ್ರಭ ವಾರ್ತ ದಾವಣಗೆರೆವೈಮಾನಿಕ ದಾಳಿ ಎದುರಾದಾಗ ಸ್ಥಳಿಯ ಜನರು ಭಯಭೀತರಾಗದೇ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಣಕು ಪ್ರದರ್ಶನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ತುರ್ತು ಅವಘಡಗಳನ್ನು ನಿಭಾಯಿಸುವ ಕುರಿತ ಅಣಕು ಪ್ರದರ್ಶದಲ್ಲಿ (ಮಾಕ್ ಡ್ರಿಲ್) ಪಾಲ್ಗೊಂಡು ಮಾತನಾಡಿ, ಸರ್ಕಾರ ಸೂಚನೆಯಂತೆ ಸಾರ್ವಜನಿಕರು, ಪೊಲೀಸ್ ಇಲಾಖೆ, ಅಗ್ನಿ ಶಾಮಕ ಇಲಾಖೆ, ಎನ್.ಸಿ.ಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಆರೋಗ್ಯ ಇಲಾಖೆ, ಬೆಸ್ಕಾಂ ಇಲಾಖೆ ಇತರ ಇಲಾಖೆಗಳ ಸಹಯೋಗದಲ್ಲಿ ಅವಘಡಗಳು ಸಂಭವಿಸದಾಗ ಕೈಗೊಳ್ಳುವ ತುರ್ತು ಕ್ರಮಗಳನ್ನು ಅಭ್ಯಾಸ ಮಾಡಲಾಗಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಜನಸಂದಣಿ ಪ್ರದೇಶಗಳಲ್ಲಿ ಅಣಕು ಪ್ರದರ್ಶನ ನಡೆಯಲಿದೆ ಎಂದರು.ಜನರಿಗೆ ಅವಘಡಗಳು ಕುರಿತು ತಕ್ಷಣೆ ಮಾಹಿತಿ ನೀಡುವುದು ಪ್ರಮುಖವಾಗಿರುತ್ತದೆ. ಆದ್ದರಿಂದ ಅಣಕು ಪ್ರದರ್ಶನದಲ್ಲಿ ಮೊದಲು ಮಿಸೆಲ್ ದಾಳಿಯ ಸೈರನ್ ಮೊಳಗಿಸುವ ಮೂಲಕ ಜನರನ್ನು ಎಚ್ಚರಿಸಬೇಕು. ನಂತರ ಜನರು ಸುರಕ್ಷತೆ ಸ್ಥಳಗಳಿಗೆ ಹೇಗೆ ತೆರಳಬೇಕು ಎನ್ನುವುದನ್ನು ಅಣಕು ಪ್ರದರ್ಶನದ ಮೂಲಕ ಪ್ರಸ್ತುತಪಡಿಸಿದರೆ ಜನರು ಸುರಕ್ಷ ಸ್ಥಳಗಳಿಗೆ ತೆರಳಲು ಅನುಕೂಲ ಆಗಲಿದೆ ಎಂದರು.
ಒಬ್ಬ ರಕ್ಷಣಾ ಸಿಬ್ಬಂದಿ ಓರ್ವ ಸಾರ್ವನಿಕನನ್ನು ರಕ್ಷಣೆ ಮಾಡಬಹುದು. ಹೀಗೆ ಅಣಕು ಪ್ರದರ್ಶನದಲ್ಲಿ ಜನರನ್ನು ರಕ್ಷಣೆ ಮಾಡುವುದನ್ನು ಇನ್ನು ಸ್ವಲ್ಪ ಉತ್ತಮ ರೀತಿಯಲ್ಲಿ ತೋರಿಸಬೇಕು. ಅವಘಡಗಳ ಸಂದರ್ಭದಲ್ಲಿ ರಕ್ಷಣಾ ಸಿಬ್ಬಂದಿ ಗಡಿಬಿಡಿ ಮಾಡಿಕೊಳ್ಳದೇ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಅಭ್ಯಾಸ ಮಾಡಬೇಕು ಎಂದು ರಕ್ಷಣಾ ಪಡೆಗಳಿಗೆ ನಿರ್ದೇಶನ ನೀಡಿದರು.ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಅವಘಡಗಳು ನಡೆದ ಕೂಡಲೇ ಎಸ್ಪಿ ಕಂಟ್ರೋಲ್ ರೂಂಗೆ ತಿಳಿಸುವುದನ್ನು ಅಣುಕು ಪ್ರದರ್ಶನದಲ್ಲಿ ತಿಳಿಸಬೇಕು. ಆಗ ಜನರಿಗೆ ಮಾಹಿತಿ ರವಾನಿಸಲು ಮತ್ತು ತಪ್ಪು ಮಾಹಿತಿ ತಪ್ಪಿಸಲು ಸಹಾಯ ಆಗಲಿದೆ. ಮಾಕ್ ಡ್ರಿಲ್ ಜನರು ಅವಘಡಗಳು ನಡೆದಾಗ ಯಾವ ರೀತಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಅನುಕೂಲ ಆಗಲಿದೆ ಎಂದರು.
ಅಣಕು ಪ್ರದರ್ಶನಲ್ಲಿ ಪಾಲ್ಗೊಂಡ ಅಗ್ನಿ ಶಾಮಕ ದಳದವರು ಕೃತಿಕ ಬೆಂಕಿ ನಂದಿಸಿದರು. ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ಸಾರ್ವಜನಿಕರನ್ನು ಕಾಪಾಡಿದರು. ಪೊಲೀಸ್ ಡಾಗ್‌ಗಳು ಬಾಂಬ್ ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಿದವು. ರಾಜ್ಯ ವಿಪತ್ತು ಸ್ಪಂದನಾ ಪಡೆ ಗೋಡೆ ಕೊರೆದು ಜನರನ್ನು ಅವಘಡದ ಸ್ಥಳಕ್ಕೆ ತೆರಳಿ ಜನರನ್ನು ಹೇಗೆ ರಕ್ಷಿಸಬೇಕು ಎನ್ನುವುದನ್ನು ತೋರಿಸುವುದು, ಮೊದಲಾದವುಗಳ ಅಣಕು ಪ್ರದರ್ಶನ ನಡೆಯಿತು.ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು (ಎಫ್‌ಎಸ್‌ಎಲ್) ಮತ್ತು ಸೋಕೋ ಪಡೆಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ಷ್ಮಮತ್ತು ತಾಂತ್ರಿಕ ಸಾಕ್ಷಿಗಳನ್ನು ಕಲೆ ಹಾಕುವುದನ್ನು ಅಣಕು ಪ್ರದರ್ಶನ ಮೂಲಕ ತೋರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕ, ಬೆಸ್ಕಾಂ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ವಿಪತ್ತು ಸ್ಪಂದನಾ ಪಡೆ, ಗೃಹ ರಕ್ಷಕ ಪಡೆ ಅಧಿಕಾರಿಗಳು, ಸಿಬ್ಬಂದಿ, ಎನ್.ಸಿ.ಸಿ ಮತ್ತು ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಪೌರ ಕಾರ್ಮಿಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.