ಮಾದರಿ ನೀತಿ ಸಂಹಿತೆ ಜಾರಿಗೆ ತಂಡ ರಚನೆ: ಡಿಸಿ ಡಾ.ವೆಂಕಟೇಶ

KannadaprabhaNewsNetwork | Published : Mar 17, 2024 1:51 AM

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯದ ಸಭಾಂಗಣವನ್ನು ಚುನಾವಣಾಧಿಕಾರಿಗಳ ಕಚೇರಿಯಾಗಿ ಮಾಡಲಾಗಿದೆ. ಇಲ್ಲಿಯೇ ನಾಮಪತ್ರಗಳ ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಕೆ ವೇಳೆ ಸಾಮಾನ್ಯ ಅಭ್ಯರ್ಥಿಯಾಗಿದ್ದಲ್ಲಿ 25 ಸಾವಿರ ರು., ಪರಿಶಿಷ್ಟ ಜಾತಿ-ಪಂಗಡದ ಅಭ್ಯರ್ಥಿಯಾಗಿದ್ದರೆ 12500 ರು. ಠೇವಣಿ ಸಲ್ಲಿಸಬೇಕು. ಚುನಾವಣಾ ವೆಚ್ಚದ ಮಿತಿ ಪ್ರತಿ ಅಭ್ಯರ್ಥಿಗೆ 95 ಲಕ್ಷ ರು.ಗಳಾಗಿರುತ್ತದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದರಿ ನೀತಿ ಸಂಹಿತೆ ಜಾರಿಗೆ ತಂಡಗಳ ರಚಿಸಲಾಗಿದೆ. ಜಿಲ್ಲೆಯ ಗಡಿಭಾಗದಲ್ಲಿ 20 ಚೆಕ್‍ ಪೋಸ್ಟ್, ಜಿಲ್ಲೆಯೊಳಗೆ 15 ಚೆಕ್‍ ಪೋಸ್ಟ್ ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪೊಲೀಸ್ ಅಧಿಕಾರಿಗಳ ಒಳಗೊಂಡು 25 ಪ್ಲೈಯಿಂಗ್ ಸ್ಕ್ವಾಡ್ ನೇಮಿಸಲಾಗಿದೆ. ವೀಡಿಯೋ ಸರ್ವೇಲೆನ್ಸ್ ಟೀಂ, ಸಿಸಿ ಟಿವಿ ಅಳವಡಿಕೆ ಮಾಡಲಾಗುವುದು. ಈ ತಂಡಗಳು ದಿನದ 24 ಗಂಟೆಯೂ 3 ಪಾಳಿಯಲ್ಲಿ ಕೆಲಸ ನಿರ್ವಹಿಸಲಿವೆ. ₹50 ಸಾವಿರ ನಗದು ಸಾಗಣೆಗೆ ಅವಕಾಶ ಇದೆ. ಸಾರ್ವಜನಿಕರು ಯಾವುದೇ ದಾಖಲೆಗಳಿಲ್ಲದೇ 50 ಸಾವಿರ ರು.ವರೆಗೆ ಪ್ರಯಾಣದ ವೇಳೆ ಕೊಂಡೊಯ್ಯಬಹುದು. ಹೆಚ್ಚಿನ ನಗದು ತೆಗೆದುಕೊಂಡು ಹೋಗಲು ಅದಕ್ಕೆ ಸಂಬಂಧಿಸಿದ ದಾಖಲೆ ಹಾಜರುಪಡಿಸಬೇಕಾಗುತ್ತದೆ ಎಂದು ತಿಳಿಸಿದರು.

ಡಿಸಿ ಕಚೇರಿ ಸಭಾಂಗಣವೇ ಚುನಾವಣಾಧಿಕಾರಿ ಕಚೇರಿ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯದ ಸಭಾಂಗಣವನ್ನು ಚುನಾವಣಾಧಿಕಾರಿಗಳ ಕಚೇರಿಯಾಗಿ ಮಾಡಲಾಗಿದೆ. ಇಲ್ಲಿಯೇ ನಾಮಪತ್ರಗಳ ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಕೆ ವೇಳೆ ಸಾಮಾನ್ಯ ಅಭ್ಯರ್ಥಿಯಾಗಿದ್ದಲ್ಲಿ 25 ಸಾವಿರ ರು., ಪರಿಶಿಷ್ಟ ಜಾತಿ-ಪಂಗಡದ ಅಭ್ಯರ್ಥಿಯಾಗಿದ್ದರೆ 12500 ರು. ಠೇವಣಿ ಸಲ್ಲಿಸಬೇಕು. ಚುನಾವಣಾ ವೆಚ್ಚದ ಮಿತಿ ಪ್ರತಿ ಅಭ್ಯರ್ಥಿಗೆ 95 ಲಕ್ಷ ರು.ಗಳಾಗಿರುತ್ತದೆ ಎಂದರು. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಏ.9ರವರೆಗೆ ಅವಕಾಶ ಇದೆ. ಆನ್ ಲೈನ್ ಮೂಲಕ ಅಥವಾ ಬಿಎಲ್ಓ ಮೂಲಕ ನೋಂದಾಯಿಸಿ, ಯುವ ಮತದಾರರಾಗಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.

ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೊಂಡಿದ್ದು, ಜೂ.6ರವರೆಗೆ ಜಾರಿಯಲ್ಲಿರುತ್ತದೆ. ಈಗಾಗಲೇ ರಾಜಕೀಯ ಪ್ರೇರಿತ ಫ್ಲೆಕ್ಸ್, ಬಂಟಿಂಗ್ಸ್‌, ಪೋಸ್ಟರ್‌, ಕರಪತ್ರಗಳನ್ನು ಅಳವಡಿಸಿದ್ದಲ್ಲಿ ಅವುಗಳನ್ನು 24 ಗಂಟೆ ಒಳಗಾಗಿ ತೆರವು ಮಾಡಬೇಕು. ಫ್ಲೆಕ್ಸ್ ಅಳವಡಿಸಲು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ಅನುಮತಿ ಪಡೆದು, ಅನುಮತಿ ನೀಡಿದ ಅವಧಿ ಮತ್ತು ಸ್ಥಳದಲ್ಲಿ ಮಾತ್ರ ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ಎಲ್ಲಾ ಸರ್ಕಾರಿ ಇಲಾಖೆಗಳ ವೆಬ್‍ಸೈಟ್, ಕಾರ್ಯಕ್ರಮಗಳ ಪ್ರದರ್ಶನದಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಬಳಸಿದ್ದಲ್ಲಿ ತಕ್ಷಣ ಅವುಗಳನ್ನು ತೆರವು ಮಾಡಬೇಕು. ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ, ಈಗಾಗಲೇ ಆರಂಭಿಸಿದ ಕಾಮಗಾರಿ ಮುಂದುವರೆಸಬಹುದು ಎಂದು ಹೇಳಿದರು.

.....

190 ಸೆಕ್ಟರ್ ಅಧಿಕಾರಿಗಳ ನೇಮಕ

ಹರಪನಹಳ್ಳಿ ಸೇರಿ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 190 ಸೆಕ್ಟರ್ ಅಧಿಕಾರಿಗಳ ನೇಮಿಸಲಾಗಿದೆ. ಮತಗಟ್ಟೆಗಳಲ್ಲಿ ನಿರಂತರ ಪ್ರವಾಸ ಕೈಗೊಂಡು ಇವಿಎಂಗಳ ಬಳಕೆ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವುದು ಮತ್ತು ಮತದಾರರಿಗೆ ಬೆದರಿಕೆ ಉಂಟು ಮಾಡುವವರ ಮೇಲೆ ನಿಗಾವಹಿಸಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯಲು ಪ್ರತಿ ಹಂತದ ವರದಿಯನ್ನು ಸೆಕ್ಟರ್ ಅಧಿಕಾರಿಗಳು ನೀಡುವರು.ಕಂಟ್ರೋಲ್ ರೂಂ ಸ್ಥಾಪನೆ

ಮತದಾರರಿಗೆ ಆಮಿಷವೊಡ್ಡಿ ಅನಧಿಕೃತವಾಗಿ ಮದ್ಯ, ಹಣ, ಇತರೆ ವಸ್ತು ಹಂಚಿಕೆ ಮಾಡಿ ಮತದಾರರ ಮೇಲೆ ಪ್ರಭಾವ ಭೀರುವ ಕೆಲಸ ಮಾಡಿದಲ್ಲಿ ದೂರು ನೀಡಲು, ಸಹಾಯಕ್ಕಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. 1950 ಹಾಗೂ 18004250380 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಬಹುದು. ಸಿವಿಜಿಲ್ ಆಫ್ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡು ಬಂದಲ್ಲಿ ಅದರ ಛಾಯಾಚಿತ್ರ, ವೀಡಿಯೋ ಮೂಲಕ ಮಾಹಿತಿ ನೀಡಬಹುದಾಗಿದೆ. ಮೀಡಿಯಾ ಮಾನಿಟರಿಂಗ್ ತಂಡ, ಸಾಮಾಜಿಕ ಜಾಲತಾಣಾ ವೀಕ್ಷಣಾ ತಂಡ ನೇಮಿಸಲಾಗಿದೆ. ಯಾವುದೇ ರಾಜಕೀಯ ಜಾಹಿರಾತುಗಳ ಮುದ್ರಣ ಮಾಧ್ಯಮ ಹೊರತುಪಡಿಸಿ ಇತರೆ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಎಂಸಿಎಂಸಿ ಅನುಮತಿ ಕಡ್ಡಾಯ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಅದೇ ರೀತಿ ಈ ಚುನಾವಣೆಗೂ ಮತದಾನ ಜಾಗೃತಿ ಕಾರ್ಯಕ್ರಮ ಕೈಗೊಂಡು, ಎಲ್ಲಾ ಮತದಾರರು ಮತದಾನ ಮಾಡಲು ಪ್ರೇರೇಪಣೆ ನೀಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ವಿಶೇಷ ಮತಗಟ್ಟೆ ಸ್ಥಾಪನೆ ಮಾಡಲಾಗುತ್ತದೆ. ಸಖಿ, ವಿಶೇಷಚೇತನರು, ಯುವ ಮತದಾರರು, ಸಂಪ್ರದಾಯ, ಧ್ಯೇಯ ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ. 85 ವರ್ಷ ಮೇಲ್ಟಟ್ಟ 11258, ವಿಶೇಷಚೇತನ 20351 ಮತದಾರರು ಹಾಗೂ 180 ಜನರು ನೂರು ವರ್ಷಕ್ಕಿಂತಲೂ ಹೆಚ್ಚಿನ ಮತದಾರರಿದ್ದಾರೆ.

ಸುರೇಶ ಬಿ.ಇಟ್ನಾಳ, ಸಿಇಒ, ಜಿಪಂ

........................

ಮುಕ್ತ, ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ರೌಡಿ ಶೀಟರ್‌ಗಳ ಬಾಂಡಿಂಗ್ ಓವರ್, ಸಮಾಜದಲ್ಲಿ ಶಾಂತಿ ಕದಡುವವರ ಪಟ್ಟಿ ಮಾಡಿ ಅಂತಹವರ ಮೇಲೆ ನಿಗಾ ವಹಿಸಲಾಗುತ್ತಿದೆ. ಮೊಬೈಲ್ ತಂಡ, ಚೆಕ್‍ ಪೋಸ್ಟ್ ಗಳ ಮೂಲಕ ತೀವ್ರ ಕಟ್ಟೆಚ್ಚರ ವಹಿಸುವ ಮೂಲಕ ನ್ಯಾಯ ಸಮ್ಮತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ.

ಉಮಾ ಪ್ರಶಾಂತ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಹಾಟ್‌ ಏರ್‌ ಬಲೂನ್‌ ಮೂಲಕ ಮತದಾನ ಜಾಗೃತಿ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಶನಿವಾರ ಸಂಜೆ ನಗರದ ಹೈಸ್ಕೂಲ್ ಮೈದಾನದಲ್ಲಿ ಮತದಾರರ ಜಾಗೃತಿ ಅರಿವು ಕಾರ್ಯಕ್ರಮದ ಅಂಗವಾಗಿ ಹಾಟ್ ಏರ್ ಬಲೂನ್ ಸಾಹಸ ಕ್ರೀಡೆ ಆಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹಾಟ್ ಏರ್ ಬಲೂನ್ ಸಾಹಸ ಕ್ರೀಡೆಗೆ ಚಾಲನೆ ನೀಡಿದರು. ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಸಾರ್ವಜನಿಕರು, ಇತರರು ಭಾಗವಹಿಸಿ ಮತದಾನ ಜಾಗೃತಿ ಅರಿವು ಮೂಡಿಸಿದರು.
.........

Share this article