ಮಾದರಿ ಹೆಸ್ಕಾಂಗೆ ಶ್ರಮಿಸುವೆ: ಅಜೀಮ್‌ಪೀರ್ ಖಾದ್ರಿ

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯು ಬಡವರಿಗೆ ಆಸರೆಯಾಗಿದೆ. ಪ್ರತಿ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಿ, ಸಮಾಲೋಚನೆ ನಡೆಸಲಾಗುವುದು. ಹೆಸ್ಕಾಂ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡಲು ಮುಂದಾಗುತ್ತೇನೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ನನ್ನ ಮೇಲೆ ನಂಬಿಕೆಯಿಟ್ಟು ಹೆಸ್ಕಾಂ ಅಧ್ಯಕ್ಷ ಸ್ಥಾನ ನೀಡಿದ್ದು, ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ. ಈ ಮೂಲಕ ಮಾದರಿ ಹೆಸ್ಕಾಂ ಮಾಡಲು ಬದ್ಧವಾಗಿದ್ದೇನೆ ಎಂದು ನೂತನ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಖಾದ್ರಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು ಉತ್ತರ ಕರ್ನಾಟಕ ಭಾಗದ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪುರ ಸೇರಿ ಒಟ್ಟು 7 ಜಿಲ್ಲೆ ಒಳಗೊಂಡಿದೆ. ಒಟ್ಟು 62 ಲಕ್ಷ ಗ್ರಾಹಕರಿದ್ದು, ಅದರಲ್ಲಿ 10.49 ಲಕ್ಷ ನೀರಾವರಿ ಪಂಪ್ ಸೆಟ್‌ಗಳಿವೆ. 33.54 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 467 ವಿವಿಧ ವಿದ್ಯುತ್ ಉಪ ಕೇಂದ್ರಗಳಿದ್ದು 4,329 11 ಕೆವಿ ಫೀಡರ್‌ ಹಾಗೂ 3.18 ಲಕ್ಷ ವಿತರಣಾ ಪರಿವರ್ತಕಗಳಿವೆ. ಒಟ್ಟು 3,937 ಗ್ರಾಹಕರು ಸೌರ ಚಾವಣಿ ಯೋಜನೆಯ ಅಡಿ ಸೌರ ವಿದ್ಯುತ್ ಅಳವಡಿಸಿಕೊಂಡು, 89.93 ಮೆಗಾ ವ್ಯಾಟ್ ವಿದ್ಯುತ್‌ ಉತ್ಪಾದಿಸುತ್ತಿದ್ದಾರೆ ಎಂದರು.

ನೀರಾವರಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಒದಗಿಸುವ ಕುಸುಮ್-ಬಿ ಯೋಜನೆಯಡಿ 748 ಗ್ರಾಹಕರು ನೋಂದಾಯಿಸಿದ್ದು, ಅದರಲ್ಲಿ 13 ನೀರಾವರಿ ಪಂಪ್ ಸೆಟ್‌ಗಳು ಕಾರ್ಯಾರಂಭಗೊಂಡಿವೆ. ಹೆಸ್ಕಾಂದಲ್ಲಿ ಪ್ರತಿ ತಿಂಗಳು ಸರಿಸುಮಾರು 1,595.51 ಮಿಲಿಯನ್ ಯುನಿಟ್‌ ವಿದ್ಯುತ್ ಬಳಕೆಯಾಗುತ್ತಿದ್ದು, ಪ್ರತಿ ತಿಂಗಳು ಸರಾಸರಿ ₹1,016 ಕೋಟಿ ಕಂದಾಯ ಬೇಡಿಕೆ ಇದೆ. ಮುಂಬರುವ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆ ಇದ್ದು, ಅದನ್ನು ಪೂರೈಸಲು ಎಲ್ಲ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ನಿಗಮ ಕಚೇರಿಯಲ್ಲಿ ಗ್ರಾಹಕರ ಸೇವಾ ಕೇಂದ್ರವು 3 ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರು 1912 ಹಾಗೂ 18004251033 ಮತ್ತು 18004254754 ಟೋಲ್ ಫ್ರೀ ನಂಬರ್‌ಗಳಿಗೆ ವಿದ್ಯುತ್ ಸಮಸ್ಯೆಗಳನ್ನು ಕರೆಮಾಡಿ ತಿಳಿಸಿದಲ್ಲಿ ತಕ್ಷಣ ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ. ರೈತರ ನೀರಾವರಿ ಪಂಟ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡುವ ಪರಿವರ್ತಕಗಳು (TC) ವಿಫಲವಾಗಿದ್ದಲ್ಲಿ ಅವುಗಳನ್ನು ತ್ವರಿತವಾಗಿ ಬದಲಾಯಿಸಲು ಕ್ರಮ ವಹಿಸಲಾಗುವುದು. ವಿದ್ಯುತ್ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಕ್ರಮಕೈಗೊಳ್ಳಲು ಹಾಗೂ ವಿದ್ಯುತ್ ಅಪಘಾತ ಪ್ರಕರಣಗಳಲ್ಲಿ ಪರಿಹಾರ ತ್ವರಿತವಾಗಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಖಾದ್ರಿ ತಿಳಿಸಿದರು.

ಪೋನ್‌ ಇನ್‌ ಕಾರ್ಯಕ್ರಮ:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯು ಬಡವರಿಗೆ ಆಸರೆಯಾಗಿದೆ. ಪ್ರತಿ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಿ, ಸಮಾಲೋಚನೆ ನಡೆಸಲಾಗುವುದು. ಹೆಸ್ಕಾಂ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡಲು ಮುಂದಾಗುತ್ತೇನೆ. ಮುಂದಿನ ದಿನಗಳಲ್ಲಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡು, ಸಮಸ್ಯೆ ಪರಿಹರಿಸಲಾಗುವುದು. ವಿದ್ಯುತ್ ಬಾಕಿ ಬಿಲ್ ಇರುವುದು ಗಮನಕ್ಕೆ ಬಂದಿದ್ದು, ತ್ವರಿತಗತಿಯಲ್ಲಿ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ವೇಳೆ ಹಣಕಾಸು ನಿರ್ದೇಶಕ ಪ್ರಕಾಶ ಪಾಟೀಲ, ತಾಂತ್ರಿಕ ನಿರ್ದೇಶಕ ಎಸ್. ಜಗದೀಶ, ಆರ್ಥಿಕ ಸಲಹೆಗಾರ ರುದ್ರೇಶ ಸೊಬರದ ಸೇರಿದಂತೆ ಹಲವರಿದ್ದರು.

ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ:

ಸರ್ಕಾರದ ಆಡಳಿತ ಹಾಗೂ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಅಪಪ್ರಚಾರ ಮಾಡುವ ಮೂಲಕ ಉಪಚುನಾವಣೆ ಗೆಲ್ಲುವ ಪ್ರಯತ್ನ ಮಾಡಿದ್ದರು. ಬಿಜೆಪಿಯವರು ಸುಳ್ಳುಗಳನ್ನೇ ಸತ್ಯಮಾಡಲು ಹೊರಟಿದ್ದರು. ಆದರೆ, ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಸಿದ್ದರಾಮಯ್ಯನವರ ಆಡಳಿತ ಮೆಚ್ಚಿ ಮೂರು ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅಪಪ್ರಚಾರ ಮಾಡುವುದು, ಜನರಿಗೆ ಸುಳ್ಳು ಹೇಳುವುದನ್ನು ಬಿಜೆಪಿ ನಾಯಕರು ಮತ್ತೆ ಮುಂದುವರಿಸಿದಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲೂ ಅವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೈಯ್ಯದ್ ಅಜೀಮ್‌ಪೀರ್ ಎಸ್. ಖಾದ್ರಿ ಹೇಳಿದರು.

Share this article