ಚಿತ್ರದುರ್ಗದ ಮೂರು ಖಾದಿ ಹಂಜಿ ಘಟಕಗಳ ಆಧುನೀಕರಣ

KannadaprabhaNewsNetwork | Published : Mar 10, 2024 1:31 AM

ಸಾರಾಂಶ

ಚಿತ್ರದುರ್ಗ ಜಿಲ್ಲೆಯ ಮೂರು ಹಂಜಿ ಘಟಕಗಳನ್ನು ಶೀಘ್ರವಾಗಿ ಆಧುನೀಕರಣಗೊಳಿಸಲಾಗುವುದು.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೂರು ಹಂಜಿ ಘಟಕಗಳನ್ನು ಶೀಘ್ರವಾಗಿ ಆಧುನೀಕರಣಗೊಳಿಸಲಾಗುವುದು ಎಂದು ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ಹೇಳಿದರು.

ಚಿತ್ರದುರ್ಗ ನಗರದ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರೀಯ ಹಂಜಿ ಕಾರ್ಯಾಗಾರದ ಆಧುನೀಕರಣಗೊಂಡ ಸೆಂಟ್ರಲ್ ಸ್ಲಿವರ್ ಪ್ಲಾಂಟ್ ಉದ್ಘಾಟಿಸಿ ಮಾತನಾಡಿದ ಅವರು ಹತ್ತು ವರ್ಷದ ಮೊದಲು ಖಾದಿ ವಸ್ತ್ರ ವಹಿವಾಟು ಮರಣಾವಸ್ಥೆ ತಲುಪಿತ್ತು. ಕೇವಲ ರಾಜಕಾರಣಿಗಳ ಪೋಷಾಕಾಗಿ ಉಳಿದಿದ್ದ ಖಾದಿ ವಸ್ತ್ರಕ್ಕೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿ ಕೊಟ್ಟಿದ್ದಾರೆ ಎಂದರು.

ಸಾಮಾನ್ಯ ಜನರು ಖಾದಿ ಬಳಸಬೇಕು ಎಂಬುದು ಮಹಾತ್ಮಾ ಗಾಂಧೀಜಿ ಅವರ ಮಹದಾಸೆಯಾಗಿತ್ತು. ಈ ಕನಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನನಸು ಮಾಡಿದ್ದಾರೆ. ಇಂದು ಖಾದಿ ವಿಶ್ವಕ್ಕೆ ಫ್ಯಾಷನ್ ಎನಿಸಿದೆ. ವೋಕಲ್ ಫಾರ್ ಲೋಕಲ್ ಧ್ಯೇಯದಿಂದ ಲೋಕಲ್ ಟು ಗ್ಲೋಬಲ್ ಹಂತಕ್ಕೆ ಖಾದಿ ಏರಿದೆ. ಖಾದಿ ಬೆಂಗಳೂರು ಹಾಗೂ ಹುಬ್ಬಳಿ ವಿಭಾಗ ಬಹಳ ಪರಿಶ್ರಮದಿಂದ ಉನ್ನತ ಮಟ್ಟಕ್ಕೆ ಏರಿ ದೇಶಕ್ಕೆ ಮಾದರಿಯಾಗಿವೆ ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ಜಾಗತಿಕವಾಗಿ 30 ಸಾವಿರ ಕೋಟಿ ರು. ಇದ್ದ ಖಾದಿ ವಹಿವಾಟು, ಹತ್ತು ವರ್ಷದಲ್ಲಿ ಒಂದು ಲಕ್ಷ ಕೋಟಿ ಅಧಿಕ ವಹಿವಾಟಿಗೆ ಬದಲಾಗಿದೆ. ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಡಿ 3000 ಖಾದಿ ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. 5 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 4 ಲಕ್ಷ ಮಹಿಳೆಯರೇ ಇರುವುದು ವಿಶೇಷವಾಗಿದೆ. ಸದ್ಯ ನೇಕಾರ ಕೂಲಿಯನ್ನು ಶೇ.7.7ರಿಂದ ಶೇ.10ಕ್ಕೆ ಏರಿಸಲಾಗಿದೆ. ಬರುವ ಏಪ್ರಿಲ್ ವೇಳೆಗೆ ನೇಕಾರರ ಕೂಲಿಯನ್ನು ಶೇ.33ರಷ್ಟು ಏರಿಸಲು ಚಿಂತನೆ ನಡೆಸಲಾಗುತ್ತದೆ. ಮುಂದಿನ ವರ್ಷ ಮಹಿಳಾ ಸಿಲಾಯಿ ಸಮೃದ್ಧಿ ಯೋಜನೆ ಜಾರಿ ಮಾಡಲಾಗುವುದು ಎಂದರು.

ಚಿತ್ರದುರ್ಗದ ಕೆಳಗೋಟೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡಿರುವ ಕೇಂದ್ರೀಯ ಹಂಜಿ ಕಾರ್ಯಗಾರ ಘಟಕ 1995-96 ರಲ್ಲಿ ಕಾರ್ಯಾರಂಭ ಮಾಡಿದೆ. ಕರ್ನಾಟಕ, ಆಂಧ್ರಪದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದ ಕೆಲವು ಭಾಗಗಳಲ್ಲಿನ ಅಗತ್ಯತೆಗಳನ್ನು ಪೂರೈಸುವುದರೊಂದಿಗೆ, 200ಕ್ಕೂ ಹೆಚ್ಚು ಖಾದಿ ಸಂಸ್ಥೆಗಳಿಗೆ ಬೆನ್ನಲುಬಾಗಿದೆ. ಸುಮಾರು 2ರಿಂದ 3 ಲಕ್ಷ ಖಾದಿ ಕುಶಲಕರ್ಮಿಗಳು, ನೂಲು ತೆಗೆಯುವವರು ಹಾಗೂ ನೇಕಾರರಿಗೆ ಪ್ರಯೋಜನವಾಗಿದೆ. ದಕ್ಷಿಣ ಭಾರತದ ಖಾದಿ ಉತ್ಪಾದನಾ ಸಂಸ್ಥೆಗಳಿಗೆ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಗುಣಮಟ್ಟದ ಪ್ರೈವರ್ ರೋವಿಂಗ್‍ಗಳನ್ನು ಉತ್ಪಾದಿಸಿ ಸರಬರಾಜು ಮಾಡುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ನೂಲು ತಯಾರಕರು, ನೇಕಾರರು ಹಾಗೂ ಕುಶಲಕರ್ಮಿಗಳ ಆದಾಯ ಹೆಚ್ಚುವಂತೆ ಮಾಡಿದೆ.

ಮುಂಬಯಿ ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉಪ ಮುಖ್ಯ ಕಾರ್ಯನಿರ್ವಣಾಧಿಕಾರಿ ಪನ್ವರುತು, ಬೆಂಗಳೂರು ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಚ್.ಆರ್.ರಾಜಪ್ಪ, ಉಪ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಲ್.ಮದನ್ ಕುಮಾರ್ ರೆಡ್ಡಿ, ತಾಂತ್ರಿಕ ಮೇಲ್ವಿಚಾರಕ ರಮೇಶ್ ಇಟಗಿ, ಚಿತ್ರದುರ್ಗ ವಿಭಾಗದ ಕೇಂದ್ರೀಯ ಹಂಜಿ ಕಾರ್ಯಾಗಾರದ ಯೋಜನಾ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ರಾಮಸ್ವಾಮಿ ಉಪಸ್ಥಿತರಿದ್ದರು.

Share this article