ನರಗುಂದ : ಸತತ 3ನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಬಿಜೆಪಿಯ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾರತವನ್ನು ಜಗತ್ತಿನ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಮೋದಿಜಿ ಮತ್ತೆ ಪ್ರಧಾನ ಮಂತ್ರಿ ಆಗಿದ್ದಾರೆ ಎಂದು ಭಾಜಪ ಮುಖಂಡ ಉಮೇಶಗೌಡ ಪಾಟೀಲ ಸಂತಸ ವ್ಯಕ್ತಪಡಿದರು.
ಭಾನುವಾರ ಸಂಜೆ ಪಟ್ಟಣದ ಶಿವಾಜಿ ಮಹಾರಾಜ್ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನರೇಂದ್ರ ಮೋದಿ ಅವರು 3ನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಬಳಿಕ ಮಾತನಾಡಿದರು.
ಇದು ಭಾಜಪ ವಿಜಯೋತ್ಸವ ಅಲ್ಲ, ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಆಯ್ಕೆ ಮಾಡಿದ ಜನರ ವಿಜಯೋತ್ಸವ ಆಗಿದೆ. ಭಾರತವನ್ನು ವಿಶ್ವಗುರು ಮಾಡಲು ಮೋದಿ ಅವರಿಗೆ ದೇಶದ ಜನತೆ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ ಕಾಂಗ್ರೆಸ್ಸಿಗರಿಗೆ ಅವರ ಬಿಟ್ಟಿ ಭಾಗ್ಯಗಳಿಗಿಂತ ದೇಶ ಮುಖ್ಯ ಎಂದು ಜನತೆ ಕಾಂಗ್ರೆಸ್ ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ವಸಂತ ಜೋಗಣ್ಣವರ ಮಾತನಾಡಿ, ಬಿಟ್ಟಿ ಭಾಗ್ಯಗಳಿಂದ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ನಾಯಕರನ್ನು ರಾಜ್ಯದ ಜನರು ಸಂಪೂರ್ಣ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಸಿನ 135 ಶಾಸಕರ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ನೆಲಕಚ್ಚಿದೆ. ಮೊದಲು ದೇಶ ಎನ್ನುವುದನ್ನು ಜನ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ಅಜ್ಜಪ್ಪ ಹುಡೇದ, ಸಂಗಪ್ಪ ಪೂಜಾರ, ಚಂದ್ರು ಪವಾರ, ಎಸ್.ಆರ್. ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಮಹೇಶಗೌಡ ಪಾಟೀಲ, ಮಂಜು ಮೆಣಸಗಿ, ಅಜ್ಜನಗೌಡ ಪಾಟೀಲ, ರಾಚನಗೌಡ ಪಾಟೀಲ, ಮಹೇಶ ಹಟ್ಟಿ, ಉಮೇಶ ಯಳ್ಳೂರ, ಬಸವರಾಜ ಹುಲಕುಂದ, ವಿಠ್ಠಲ ಹವಾಲ್ದಾರ್, ಪ್ರವೀಣ ಅಳಗವಾಡಿ, ಸಂತೋಷ ಹಂಚಿನಾಳ, ಸಿದ್ದು ಹೂಗಾರ, ಪ್ರವೀಣ ವಡ್ಡರ, ಹಸನ ನವದಿ ಹಾಗೂ ಭಾಜಪ ಪುರಸಭೆ ಸದಸ್ಯರು ಸೇರಿದಂತೆ ನೂರಾರು ಜನರಿದ್ದರು.