ಕನ್ನಡ ಪ್ರಭ ವಾರ್ತೆ ಶಿಗ್ಗಾಂವಿ
ಮೂರನೇ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮೋ ಡ್ರೋಣ್ ದೀದಿಯವರಿಗೆ ತರಬೇತಿ ನೀಡಿ, ಶೇ.೮೦ ಸಬ್ಸಿಡಿ ಮೂಲಕ ಡ್ರೋಣ್‌ಗಳನ್ನು ವಿತರಿಸಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಪಟ್ಟಣದ ಹೊಸ ಬಸ್‌ಸ್ಟ್ಯಾಂಡ್ ಆವರಣದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಗಳನ್ನು ಘೋಷಿಸಿ, ಅವುಗಳನ್ನು ಫಲಾನುಭವಿಗಳಿಗೆ ಮುಟ್ಟಿಸಲು ಅಧಿಕಾರಿಗಳನ್ನು ಜನರ ಮನೆ ಬಾಗಿಲಿಗೆ ಕಳಿಸುವ ಮೂಲಕ, ವಂಚಿತ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ಮುಟ್ಟಿಸಲು ಮತ್ತು ಫಲಾನುಭವಿಗಳು ಯೋಜನೆಯನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಯಲು ಪ್ರಧಾನಿಯವರು ಈ ಯಾತ್ರೆ ಪ್ರಾರಂಭಿಸಿದ್ದಾರೆ ಎಂದರು.ವಿಕಸಿತ ದೇಶಗಳ ಜನರ ಮೂಲಭೂತ ಸೌಕರ್ಯಗಳನ್ನು ನಮ್ಮ ದೇಶದ ಜನರಿಗೆ ನೀಡಿ, ಸುಮಾರು ೭೦ ವರ್ಷಗಳಿಂದ ಕೇಳುತ್ತಿರುವ ವಿಕಾಸ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿಯನ್ನು ಅಳಸಿ, ವಿಕಸಿತ ಭಾರತವನ್ನಾಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದು, ಅವುಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಸದುದ್ದೇಶದಿಂದ ಈ ಯಾತ್ರೆಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಎಂದು ಹೆಸರಿಟ್ಟಿದ್ದರೆ, ಜನರು ಇದನ್ನು ಮೋದಿ ಗ್ಯಾರಂಟಿ ರತಯಾತ್ರೆ ಎಂದೂ ಕರೆಯುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಧಾನಿಯವರ ಆಡಳಿತಾವಧಿಯಲ್ಲಿ ಪ್ರತಿ ಯುವಕರಲ್ಲಿ ಆತ್ಮವಿಸ್ವಾಸ ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಭಾರತವನ್ನು ವಿಶ್ವದ ನಂ.೧ ದೇಶವನ್ನಾಗಿಸಲು ನಮ್ಮ ನಾಯಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ತಾವು ಮಾಡಿದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಪ್ರಹ್ಲಾ ಜೋಶಿಯವರು ನಿಮ್ಮ ಮುಂದೆ ಬಂದು ನಿಂತಿದ್ದಾರೆ. ಮೋದಿಯವರ ಆಡಳಿತಾವಧಿಯಲ್ಲಿ ₹೧ ಸೋರಿಕೆಯಾಗದೆ ನೇರವಾಗಿ ಫಲಾನುಭವಿಗಳಿಗೆ ಸೇರುತ್ತಿದೆ. ಹೀಗೆ ಅನೇಕ ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕೆ ಮುಂದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಸುಭಾಷ ಚವ್ಹಾಣ, ರೂಪಾ ಬನ್ನಿಕೊಪ್ಪ, ಸಂಗೀತಾ ವಾಲ್ಮಿಕಿ, ಪರಶುರಾಮ ಸೊನ್ನದ, ಶ್ರೀಕಾಂತ ಬುಳ್ಳಕ್ಕನವರ, ಮಂಜುನಾಥ ಬ್ಯಾಹಟ್ಟಿ, ಬಸವರಾಜ ಕೆಳಗಾರ, ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರು, ಪುರಸಭೆಯ ಸದಸ್ಯರು ಸೇರಿದಂತೆ ಇತರರು ಇದ್ದರು.