ದೇಶದ ಸುರಕ್ಷತೆಗೆ ಮತ್ತೊಮ್ಮೆ ಮೋದಿ ಅವಶ್ಯ: ಸೂಲಿಬೆಲಿ

KannadaprabhaNewsNetwork | Published : Mar 3, 2024 1:35 AM

ಸಾರಾಂಶ

ಕಳೆದ 9 ವರ್ಷದಲ್ಲಿ ಭಯೋತ್ಪಾದನೆ ಘಟನೆ ನಡೆಯದೆ ದೇಶ ಸುಭದ್ರವಾಗಿದೆ. ಹೀಗೆ ದೇಶದ ಭದ್ರತೆ ಮುಂದುವರೆಯಲು ಮೋದಿ ದೇಶಕ್ಕೆ ಅವಶ್ಯಕವಾಗಿದ್ದಾರೆ.

ಗುರುಮಠಕಲ್: ವಿಶ್ವದಲ್ಲಿ ಭಾರತ ದೇಶ ಅರ್ಥಿಕ ಮಟ್ಟದಲ್ಲಿ ಪ್ರಸ್ತುತ 5ನೇ ಸ್ಥಾನದಲ್ಲಿದ್ದು, ಮುಂದಿನ 5 ವರ್ಷದೊಳಗೆ 3ನೇ ಸ್ಥಾನದಲ್ಲಿ ಬರಲು ಮತ್ತು ಜಗತ್ತಿಗೆ ವಿಶ್ವಗುರು ಆಗಿ ಮುಂದುವರೆಯಲು ಹಾಗೂ ದೇಶದಲ್ಲಿರುವ ಎಲ್ಲ ಜನರ ಸುರಕ್ಷತೆಗಾಗಿ 2024ರಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಆಯ್ಕೆಯಾಗುವುದು ಅತೀ ಅವಶ್ಯವಾಗಿದೆ ಎಂದು ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲಿ ಹೇಳಿದರು.

ಪಟ್ಟಣದ ಹೀರಾ ಗಾರ್ಡನ್‌ನಲ್ಲಿ ತಾಲೂಕು ನಮೋ ಬ್ರಿಗೇಡ್‌ವತಿಯಿಂದ ನಡೆದ ಚಿಂತನಾ ಸಭೆಯಲ್ಲಿ ದೇಶದ ಪ್ರಧಾನಿಯಾಗಿ 9 ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ಅವರ ಸಾಧನೆಗಳ ಕುರಿತು ಅವರು ಮಾತನಾಡಿದರು.

ಕಳೆದ 9 ವರ್ಷಗಳಲ್ಲಿ ದೇಶದ ಯಾವುದೇ ಜಾಗದಲ್ಲಿ ಒಂದು ಬಾಂಬ್ ಸ್ಫೋಟವಾಗಿರುವ ನಿದರ್ಶನ ಇಲ್ಲ. ಭಾರತ ದೇಶದ ವಿರೋಧಿಗಳನ್ನು ಪಾಕಿಸ್ತಾನದ ನೆಲೆಯಲ್ಲಿ ಅನಾಮಿಕವಾಗಿ ಹತ್ಯೆ ಮಾಡುತ್ತಿರುವವರು ಯಾರೆಂಬ ಮಾಹಿತಿ ಗೊತ್ತು ಆಗುತ್ತಿಲ್ಲ. ವಿದೇಶ ನೆಲೆಗಳಲ್ಲಿ ಅಪಾಯದಲ್ಲಿದ್ದ ಭಾರತೀಯರನ್ನು ಸುರಕ್ಷತೆಯಾಗಿ ದೇಶಕ್ಕೆ ವಾಪಸ್ಸು ತರುವಲ್ಲಿ ದೇಶದ ಸುರಕ್ಷತೆಗಾಗಿ ಮೋದಿ ಅವರು 24 ತಾಸು ನಮಗೋಸ್ಕರ ದುಡಿಯುತ್ತಿದ್ದಾರೆ ಎಂದರು.

ವಿಶ್ವದ ಎಲ್ಲಾ ಶ್ರೀಮಂತ ರಾಷ್ಟ್ರಗಳಿಗೆ ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ದೇಶಗಳಿಗೆ ಕೊರೋನಾ ಲಸಿಕೆ ಉಚಿತವಾಗಿ ನೀಡಿ ಅವರೆಲ್ಲರ ಪ್ರಾಣ ಕಾಪಾಡಿರುವ ಹೆಮ್ಮೆ ನಮ್ಮ ಭಾರತ ದೇಶದ್ದು ಆಗಿದೆ. ಕಾಂಗ್ರೆಸಿಗರು ಕೊರೋನಾ ವ್ಯಾಕ್ಸಿನ್ ಕಳಪೆಯಾಗಿದೆ ಎಂದು ಅಪಪ್ರಚಾರ ಮಾಡಿದರು. ಆದರೆ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ತಾನೇ ಲಸಿಕೆ ಹಾಕಿಕೊಂಡು ದೇಶದ ಜನರೂ ಲಸಿಕೆ ಹಾಕುವಂತೆ ಪ್ರೇರಣೆ ನೀಡಿ ನಮ್ಮೆಲ್ಲರ ಪ್ರಾಣ ಕಾಪಾಡಿರುವ ಮೋದಿಯನ್ನು ಕಳೆದುಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.

Share this article