ಜಿಲ್ಲೆಯಾದ್ಯಂತ ಮೋದಿ ಜನ್ಮದಿನ ಆಚರಣೆ

KannadaprabhaNewsNetwork |  
Published : Sep 18, 2025, 02:00 AM IST
ಪೊಟೋ: 17ಎಸ್‌ಎಂಜಿಕೆಪಿ09ನರೇಂದ್ರ ಮೋದಿ ಅವರ 75 ನೇ ಜನ್ಮ ದಿನಾಚರಣೆ ಅಂಗವಾಗಿ ಬುಧವಾರ ಭದ್ರಾವತಿಯ ಬಿಜೆಪಿ ಕಾರ್ಯಾಲಯದಲ್ಲಿ ಭದ್ರಾವತಿ ನಗರ ಮಂಡಲ ಯುವಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ರಕ್ತದಾನ ಮಾಡಿದರು.  | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಶಿವಮೊಗ್ಗ ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಪಾಲ್ಗೊಂಡಿದ್ದರು.

ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿಯೂ ಅವರು ಭಾಗಿಯಾದ್ದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಭಾರತ ಕಂಡ ಅಪ್ರತಿಮ ನಾಯಕ. ಬಿಜೆಪಿಯ ಕೋಟ್ಯಾಂತರ ಕಾರ್ಯಕರ್ತರ ಹೆಮ್ಮೆಯ ಸ್ಫೂರ್ತಿಯ ಚಿಲುಮೆ, ಭಾರತದ ಪ್ರತಿಯೊಂದು ರಂಗಗಳ ನೈಜ ಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ ಅಗ್ರಗಣ್ಯ ಚಾಣಾಕ್ಷ ಎಂದು ಬಣ್ಣಿಸಿದರು.

ತನ್ನ ಅಪ್ರತಿಮ ರಾಜ ನೀತಿಯ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿ ವಿಶ್ವಗುರು ಸ್ಥಾನ ಅಲಂಕರಿಸಲು ಶ್ರಮಿಸಿದ ಮಹಾನ್ ಚೇತನ ನಮ್ಮ ಪ್ರಧಾನಿ. ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತ ಸಾವಿರಾರು ಜನಪರ ಕಾಳಜಿಯ ನೂತನ ವಿನೂತನ ಯೋಜನೆಗಳನ್ನು ಜಾರಿಗೆ ತಂದು ಇತಿಹಾಸ ಪುಟಗಳಲ್ಲಿ ಮೇಳೈಸಲು ಅವಿರತ ಶ್ರಮಿಸುತ್ತಿರುವ ಮಹಾನ್ ಸಂತ. ಅವರ ಅವಧಿಯಲ್ಲಿ ದೇಶ ಮತ್ತಷ್ಟು ಪಬಲವಾಗಿ ಹೊರ ಹೊಮ್ಮಲಿ ಎಂದು ಹಾರೈಸಿದರು.

ಅಭಿಯಾನಕ್ಕೆ ಚಾಲನೆ:

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಅಂಗವಾಗಿ ಸ್ವಸ್ಥ ನಾರಿ - ಸಶಕ್ತ ಭಾರತ ಅಭಿಯಾನಕ್ಕೆ ಬುಧವಾರ ಶಿವಮೊಗ್ಗದ ತುಂಗಾ ನಗರ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಯೋಜನೆಯಡಿ ಮಹಿಳೆಯರ ಸ್ವಾಸ್ಥ್ಯ ಆರೋಗ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ನುರಿತ ವೈದ್ಯರಿಂದ ಸೂಕ್ತ ಸಲಹೆ ಸೂಚನೆ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗುರುತುಪಡಿಸಿದ ಸ್ಥಳಗಳಲ್ಲಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೂಡ ಹಮ್ಮಿಕೊಳ್ಳುವ ಯೋಜನೆ ಇದಾಗಿದೆ. ಮಹಿಳೆಯರ ಮಾನಸಿಕ ಆರೋಗ್ಯ ಸೇವೆ ಒದಗಿಸುವುದು, ಗರ್ಭಿಣಿ ಸ್ತ್ರೀಯರಿಗೆ ಮಾರ್ಗದರ್ಶನ ನೀಡುವುದು, ಮಕ್ಕಳ ಹಾಗೂ ಹಿರಿಯ ನಾಗರಿಕರ ಆರೋಗ್ಯ ಕಾಪಾಡುವುದು ಈ ಯೋಜನೆಯಲ್ಲಿ ಒಳಗೊಂಡಿದೆ ಎಂದರು.ನನ್ನೆಲ್ಲ ತಾಯಂದಿರು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ದೃಢ ಹೆಜ್ಜೆ ಇಡುವ ಸಂಕಲ್ಪ ಮಾಡಬೇಕೆಂದು ಹೇಳಿದರು.

ಡಾ.ಧನಂಜಯ ಸರ್ಜಿ ರಕ್ತದಾನ:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನ ಅಂಗವಾಗಿ ಬುಧವಾರ ಭದ್ರಾವತಿಯ ಬಿಜೆಪಿ ಕಾರ್ಯಾಲಯದಲ್ಲಿ ಭದ್ರಾವತಿ ನಗರ ಮಂಡಲ ಯುವಮೋರ್ಚಾದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಸತತ 68ನೇ ಬಾರಿ ರಕ್ತದಾನವನ್ನು ಮಾಡಿದರು. ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೂ ರಕ್ತದಾನ ಮಾಡಿದರು. ಶಿಬಿರದಲ್ಲಿ ಭದ್ರಾವತಿ ನಗರ ಮಂಡಲ ಅಧ್ಯಕ್ಷರಾದ ಧರ್ಮಪ್ರಸಾದ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಆನಂದ್, ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ರಕ್ತದಾನ ಶಿಬಿರ ಸಂಚಾಲಕ ಧನುಷ್, ನರಸಭಾ ಸದಸ್ಯರಾದ ಅನುಪಮಾ ಚನ್ನೇಶ್, ಪ್ರಮುಖರಾದ ಶಿವಕುಮಾರ್, ಚನ್ನೇಶ್, ರಘುರಾಮ್, ಮಂಜಣ್ಣ ಮತ್ತಿತರರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ