ಕನ್ನಡಪ್ರಭ ವಾರ್ತೆ ಮಂಗಳೂರು
ಜೆಡಿಎಸ್ ಜೊತೆಗಿನ ಮೈತ್ರಿ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಮಂಗಳೂರಲ್ಲಿ ಭಾನುವಾರ ಸಂಜೆ ಅಬ್ಬರದ ರೋಡ್ ಶೋ ನಡೆಸಿ, ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದರು. ಸುಮಾರು ಒಂದು ಗಂಟೆ ಕಾಲ, 2 ಕಿ.ಮೀ. ದೂರ ರೋಡ್ ಶೋ ನಡೆಸಿ, ಕರಾವಳಿಯ ನೆಲೆಬೀಡಲ್ಲಿ ಮೋದಿ ಮೇನಿಯಾ ಪಸರಿಸಿದರು.ಮೈಸೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ, ನೇರವಾಗಿ ರಸ್ತೆ ಮಾರ್ಗದಲ್ಲಿ ಮಂಗಳೂರಿನ ಲೇಡಿಹಿಲ್‌ನ ನಾರಾಯಣಗುರು ವೃತ್ತಕ್ಕೆ ಆಗಮಿಸಿದರು. ಅಲ್ಲಿ ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮಿಸಿದರು. ಈ ವೇಳೆ ಮೋದಿಗೆ ಪೇಟ, ರುದ್ರಾಕ್ಷಿ ಹಾರ ಹಾಕಿ, ಕೇಸರಿ ಬಣ್ಣದ ವಿಶಿಷ್ಟ ಜರಿಶಾಲು ಹೊದಿಸಿ, ಶ್ರೀಕೃಷ್ಣ ದೇವರ ಅಟ್ಟೆಯ ಪ್ರಭಾವಳಿಯ ವಿಶೇಷ ಉಡುಗೊರೆ ನೀಡಿ, ಗೌರವಿಸಲಾಯಿತು. ಬಳಿಕ ವಿಶೇಷ ವಾಹನ ಏರಿದ ಮೋದಿ, ನವಭಾರತ ವೃತ್ತದವರೆಗೆ ರೋಡ್ ಶೋ ನಡೆಸಿದರು. ಸುಮಾರು ಒಂದು ಗಂಟೆ ಕಾಲ ಎರಡು ಕಿ.ಮೀ. ದೂರ ರೋಡ್ ಶೋ ನಡೆಸಿ, ಕರಾವಳಿಯಲ್ಲಿ ಮೋದಿ ಹವಾ ಬೀಸಿದರು. ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸಾಥ್ ನೀಡಿದರು.
ಈ ವೇಳೆ ನೆರೆದಿದ್ದ ಜನರು ಮೋದಿ ವಾಹನದ ಮೇಲೆ ಪುಷ್ಪವೃಷ್ಟಿ ಸುರಿಸಿದರು. ಇಕ್ಕೆಲಗಳಲ್ಲಿ ತಳಿರು ತೋರಣ, ಕೇಸರಿ ಪತಾಕೆ ಹಾಗೂ ಬಿಜೆಪಿ ಧ್ವಜ, ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದ ಹಾದಿಯಲ್ಲಿ ರೋಡ್ ಶೋ ಸಾಗುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಮೋದಿ...ಮೋದಿ, ಜೈಶ್ರೀರಾಮ್, ಬಿಜೆಪಿಗೆ ಜೈ ಘೋಷಣೆಗಳನ್ನು ಕೂಗಿದರು. ದೂರದಿಂದಲೇ ಸೆಲ್ಫಿ ತೆಗೆಯಲು, ಮೋದಿ ಮೋಡಿಯ ಫೋಟೋ ಕ್ಲಿಕ್ಕಿಸಲು ಜನ ಹಾತೊರೆದರು. ರೋಡ್‌ಶೋ ಸಾಗುವ ಹಾದಿಯನ್ನು ಪುಷ್ಪ, ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು. ಸುಮಾರು ಐದು ಕ್ವಿಂಟಾಲ್ ಹೂವಿನ ಎಸಳನ್ನು ಪುಷ್ಪವೃಷ್ಟಿಗೆ ಬಳಸಲಾಯಿತು.ಬ್ರಹ್ಮಶ್ರೀನಾರಾಯಣಗುರು ವೃತ್ತದಿಂದ ಆರಂಭವಾದ ಮೋದಿ ರೋಡ್ ಶೋ ಮಂಗಳೂರು ದಸರಾವನ್ನು ನೆನಪಿಸಿತು. ಮಂಗಳೂರು ದಸರಾ ವೇಳೆ ಮೆರವಣಿಗೆ ಅಬ್ಬರದಲ್ಲಿ ಸಾಗುವುದು ವಾಡಿಕೆ. ರೋಡ್ ಶೋ ಕೂಡ ರಾತ್ರಿ ವೇಳೆ ಅದೇ ಅಬ್ಬರದಲ್ಲಿ ಸಾಗಿದ್ದು ಗಮನಾರ್ಹವಾಗಿತ್ತು.20ಕ್ಕೆ ಮೋದಿ ಮತ್ತೆ ಈ ಚುನಾವಣೇಲಿ 2047ರವರೆಗಿನ ಭವಿಷ್ಯ: ಮೋದಿ
ಬಿಜೆಪಿ ಬಿಡುಗಡೆಗೊಳಿಸಿರುವ ಸಂಕಲ್ಪ ಪತ್ರದಲ್ಲಿ ಮೋದಿ ಗ್ಯಾರಂಟಿ ಅಡಗಿದೆ. ಈ ಬಾರಿಯ ಚುನಾವಣೆ ಕೇವಲ ಐದು ವರ್ಷಕ್ಕೆ ಅಲ್ಲ, ಬದಲಿಗೆ 2047 ರವರೆಗಿನ ಭಾರತದ ಭವಿಷ್ಯ ಇದರಲ್ಲಿ ಅಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ-ಜೆಡಿಎಸ್ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಈ ಚುನಾವಣೆ 2024 ರಿಂದ ಐದು ವರ್ಷಕ್ಕೆ ಅಂದುಕೊಳ್ಳಬೇಡಿ. 2047ರವರೆಗಿನ ಭಾರತದ ಭವಿಷ್ಯ ಇದರಲ್ಲಿ ಅಡಗಿದೆ. ಆದ್ದರಿಂದ ದೇಶದ ಅಭಿವೃದ್ಧಿಗೆ ನಿಮ್ಮ ಮತ ಅಮೂಲ್ಯ ಎಂದರು.ಇದು ನಿರ್ಣಯಕ ಚುನಾವಣೆ. ನಾವು ಸಂಕಲ್ಪ ಪತ್ರ ಬಿಡುಗಡೆಗೊಳಿಸಿದ್ದೇವೆ. ಇಡೀ ಕರ್ನಾಟಕ ಈ ಬಾರಿ ಮೋದಿ ಸರ್ಕಾರ ಎಂದು ಹೇಳುತ್ತಿದೆ. ನಮ್ಮ ಸಂಕಲ್ಪ ಪತ್ರವು ಮೋದಿ ಗ್ಯಾರಂಟಿಯನ್ನು ಹೊಂದಿದೆ. ಬಡವರಿಗೆ ಉಚಿತ ಪಡಿತರ, 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ಮಾಡುವ ಯೋಜನೆ, ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ, 3 ಕೋಟಿ ಮನೆ ನಿರ್ಮಾಣದ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.ಈ ಎಲ್ಲಾ ಯೋಜನೆಗಳು ಕರ್ನಾಟಕದ ಅರ್ಹರಿಗೂ ತಲುಪುತ್ತವೆ. ಬಡವರ ಜೀವನ ಮಟ್ಟ ಸುಧಾರಿಸಲಿದೆ. ಕಳೆದ 10 ವರ್ಷದ ಹಿಂದೆ ನಾವು ತಂತ್ರಜ್ಞಾನಕ್ಕಾಗಿ ಬೇರೆ ರಾಷ್ಟ್ರಗಳನ್ನು ಅವಲಂಬಿಸಿದ್ದೆವು. ಆದರೆ, ಈಗ ಚಂದ್ರಯಾನ ಸೇರಿದಂತೆ ಅನೇಕ ಸಾಧನೆಗಳ ಮೂಲಕ ಅವರೆಲ್ಲ ನಮ್ಮ ಕಡೆ ನೋಡುವಂತೆ ಮಾಡಿದ್ದೇವೆ. ಈಗ ನಿಮ್ಮ ಮತದ ಮೂಲಕ ಮೋದಿಗೆ ಮತ್ತಷ್ಟು ತಾಕತ್ತು ಬರಲಿದೆ ಎಂದರು.ನಮ್ಮ ಸರ್ಕಾರದ ಹತ್ತು ವರ್ಷದ ಆಡಳಿತದ ಅವಧಿಯಲ್ಲಿ ಕರ್ನಾಟಕದಲ್ಲಿ 4.5 ಲಕ್ಷ ಮಂದಿಗೆ ಮನೆ ದೊರಕಿದೆ, ಜಲ ಜೀವನ ಮಿಷನ್ ಯೋಜನೆಗೆ ಕೋಟ್ಯಂತರ ಹಣ ನೀಡಲಾಗಿದೆ. ಇದರಿಂದಾಗಿ ನೂರಾರು ಗ್ರಾಮಗಳು ಕುಡಿಯುವ ನೀರು ಪಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗಿದೆ. ವಂದೇ ಭಾರತ್ ರೈಲು ನೀಡಲಾಗಿದೆ ಎಂದರು.ಕರ್ನಾಟಕ ಸಮೃದ್ಧಿಯ ಕೇಂದ್ರ:ಕರ್ನಾಟಕ ಮಾಹಿತಿ ತಂತ್ರಜ್ಞಾನದ ಬಹುದೊಡ್ಡ ಶಕ್ತಿಯ ಕೇಂದ್ರ. ಈ ನೆಲ ಸಮೃದ್ಧಿಯ ಭಾಗ. ಮೈಸೂರು, ಹಂಪಿ, ಬಾದಾಮಿ ಮುಂತಾದ ನಗರಗಳು ಪಾರಂಪರಿಕ ನಗರವಾಗಿ ವಿಶ್ವ ಭೂಪಟದಲ್ಲಿ ತಮ್ಮ ಸ್ಥಾನ ಪಡೆದುಕೊಂಡಿವೆ. ಕನ್ನಡ ಭಾಷೆಯೂ ಸಮೃದ್ಧವಾಗಿದ್ದು, ಅದನ್ನು ವಿಶ್ವಮಟ್ಟದಲ್ಲಿ ಪ್ರಚಾರಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕದಲ್ಲಿ ದೇವೇಗೌಡರಂತ ಹಿರಿಯರ ಮಾರ್ಗದರ್ಶನವಿದೆ. ಯಡಿಯೂರಪ್ಪ, ಕುಮಾರಸ್ವಾಮಿ ಅವರಂತ ಸಂಘಟಕರು ಇದ್ದಾರೆ. ಇವರು ಕರ್ನಾಟಕದ ಅಭಿವೃದ್ಧಿಗೆ ನೆರವಾಗಲಿದ್ದಾರೆ. ಸುತ್ತೂರು ಮಠ, ಕುವೆಂಪು ಅವರ ಧ್ವನಿ ಇಲ್ಲಿದೆ. ಕಾರ್ಯಪ್ಪ ಅವರಂತಹ ಮಹನೀಯರ ಕೊಡುಗೆ ಇದೆ. ಈ ನೆಲದ ವಿಕಾಸ ಅವರಿಂದ ಆಗಿದೆ ಎಂದು ಮೋದಿ ಬಣ್ಣಿಸಿದರು.ಕಾವೇರಿ, ಗೌಡರನ್ನು ಸ್ಮರಿಸಿದ ಮೋದಿ:
‘ನಿಮಗೆಲ್ಲ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ತಾಯಿ ಚಾಮುಂಡೇಶ್ವರಿ, ಭುವನೇಶ್ವರಿ ಮತ್ತು ಕಾವೇರಿಗೆ ಪ್ರಣಾಮ ಸಲ್ಲಿಸಿದರು. ಅತ್ಯಂತ ಹಿರಿಯ ಮುತ್ಸದ್ಧಿಯಾದ ದೇವೇಗೌಡರ ಆಶೀರ್ವಾದ ದೊರಕ್ಕಿದ್ದು ನನ್ನ ಸೌಭಾಗ್ಯ. ಇದಕ್ಕೆ ನಾನು ಆಭಾರಿ ಎಂದು ಹೇಳಿದರು.ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಅಡ್ರೆಸ್‌ಗೆ ಇರುವುದಿಲ್ಲ: ಯಡಿಯೂರಪ್ಪಈ ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನೀವು ಅಡ್ರೆಸ್‌ಗೆ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ-ಜೆಡಿಎಸ್‌ನ ಬೃಹತ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರವನ್ನೂ ನಾವು ಗೆಲ್ಲಬೇಕು ಎಂಬ ಉದ್ದೇಶವಿದೆ. ಹಾಲು ಜೇನಿನಂತೆ ಬಿಜೆಪಿ-ಜೆಡಿಎಸ್ ಒಟ್ಟಾಗಿ ಕೆಲಸ ಮಾಡಲಿವೆ. ಜೆಡಿಎಸ್-ಬಿಜೆಪಿ ಮೈತ್ರಿಯನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಹಣ, ಅಧಿಕಾರ, ಹೆಂಡದ ಬಲದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ನವರು ಉದ್ದೇಶಿಸಿದ್ದಾರೆ. ಆದರೆ, ಫಲಿತಾಂಶದ ಬಳಿಕ ನೀವು ಅಡ್ರೆಸ್‌ಗೆ ಇರುವುದಿಲ್ಲ ಎಂದು ಭವಿಷ್ಯ ನುಡಿದರು.
ಮಹಾನಾಯಕರ ಲೂಟಿ ತಡೆಗೆ ಮೋದಿ ಜತೆ ಎಚ್ಡಿಕೆ ಕಳ್ಸಿದ್ದೇನೆ:ಗೌಡಇಡೀ ವಿಶ್ವದಲ್ಲಿಯೇ ಈ ದೇಶಕ್ಕೆ ಕೀರ್ತಿ ತಂದುಕೊಟ್ಟ 120 ಕೋಟಿ ಜನತೆಯ ಪ್ರಧಾನಿಯನ್ನು, 6 ಕೋಟಿ ಜನರ ಮುಖ್ಯಮಂತ್ರಿ ಲಘುವಾಗಿ ಮಾತನಾಡುವುದು ಎಷ್ಟು ಸರಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ- ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮ ಮಾಡಿದ ಬಳಿಕ ಉಚಿತ ಘೋಷಣೆ ಮಾಡಿ ಇಬ್ಬರು ಮಹಾನಾಯಕರು ಈಗ ಆಳುತ್ತಿರುವರು ಎಂದು ಛೇಡಿಸಿದರು.
ನೀರಾವರಿ, ಬಿಬಿಎಂಪಿ, ನಗರಾಭಿವೃದ್ಧಿ ಸೇರಿದಂತೆ ಅನೇಕ ಕಡೆಗಳಲ್ಲಿ ಬಾಚಿದ್ದೋ ಬಾಚಿದ್ದು. ನನ್ನ 64 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಲುಟಿ ನೋಡಿಲ್ಲ ಎಂದ ಅವರು, ಈ ದೇಶಕ್ಕೆ ಕೀರ್ತಿ ತಂದ ವ್ಯಕ್ತಿ ಇದ್ದರೆ ಅದು ಮೋದಿ ಮಾತ್ರ. ನನಗೆ ತಲೆಯಲ್ಲಿ ಬುದ್ಧಿ ಇಲ್ಲದೆ ಕುಮಾರಸ್ವಾಮಿಗೆ ಬಿಜೆಪಿಗೆ ಹೋಗು ಅಂತ ಹೇಳಲಿಲ್ಲ. ರಾಜ್ಯದಲ್ಲಿ ಸೂರೆ ಮಾಡುವುದು ತಪ್ಪಿಸಲು ಮೋದಿ ಅವರ ಜತೆ ಹೋಗು ಅಂದೆ. ಇಬ್ಬರು ಮಹಾನುಭಾವರು ಈ ರಾಜ್ಯ ಆಳುತ್ತಿದ್ದಾರೆ. ಆ ಪುಣ್ಯಾತ್ಮರಿಗೆ ನಮೋ ನಮಃ ಎಂದು ವ್ಯಂಗ್ಯವಾಡಿದರು. ಮೋದಿ ಅವರು ಬಂದಾಗ ಎದ್ದು ನಿಂತು ಗೌರವ ಸಲ್ಲಿಸಲು ಸಾಧ್ಯವಾಗದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಅವರು ಹೇಳಿದರು.ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಪ್ರಧಾನಿ ಸಮಾವೇಶ:ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 20ರಂದು ಮತ್ತೊಮ್ಮೆ ರಾಜ್ಯದಲ್ಲಿ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ.
ಅಂದು ಮೋದಿ ಅವರು ರಾಜಧಾನಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.ಮಧ್ಯಾಹ್ನ 3.30ಕ್ಕೆ ಚಿಕ್ಕಬಳ್ಳಾಪುರದಲ್ಲಿ ಸಮಾವೇಶ ನಡೆದರೆ, ಸಂಜೆ 5.30ಕ್ಕೆ ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ. ಚಿಕ್ಕಬಳ್ಳಾಪುರದ ಸಮಾವೇಶದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಮತ್ತು ಶಾಸಕ ವಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ. ಇದಾದ ಬಳಿಕ ಮೊದಲ ಹಂತದ ಚುನಾವಣೆ ನಡೆಯುವ ಚಿತ್ರದುರ್ಗ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಅವರ ಇನ್ನೊಂದು ಸಮಾವೇಶ ನಿಗದಿಪಡಿಸುವ ಚಿಂತನೆ ನಡೆದಿದೆ.