ಮಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಮಲೆನಾಡಿನ ಶಿವಮೊಗ್ಗ, ದ್ವಿತೀಯ ಹಂತದಲ್ಲಿ ಭಾನುವಾರ ಮೈಸೂರಿನ ಬಳಿಕ ಕರಾವಳಿಗೆ ಮೊದಲ ಬಾರಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಂಗಳೂರಲ್ಲಿ ಅಬ್ಬರದ ರೋಡ್‌ಶೋ ಮೂಲಕ ಚುನಾವಣೆಯ ರಣ ಕಹಳೆ ಮೊಳಗಿಸಿದ್ದಾರೆ. ಇದೇ ಸಂದರ್ಭ ಜಾತಿ ಓಲೈಸಿ ಮತ ಸೆಳೆಯುವ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ನಡೆಸುವ ಮೂಲಕ ಮೋದಿ ಟಾಂಗ್ ನೀಡಿದ್ದಾರೆ.
ಬಂದರು ನಗರಿ ಮಂಗಳೂರಿಗೆ ಭಾನುವಾರ ಮುಸ್ಸಂಜೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕರಾವಳಿಯಲ್ಲಿ ಮೋದಿ ಹವಾ ಬೀಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಎರಡು ಕಿ.ಮೀ. ದೂರ ರೋಡ್‌ಶೋ ನಡೆಸಿ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದಾರೆ. ಇದರೊಂದಿಗೆ ದ.ಕ., ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಕರಾವಳಿಯಲ್ಲಿ ಮೋದಿ ಮೇನಿಯಾ ಪಸರಿಸಿದ್ದಾರೆ.
ಶ್ರೀನಾರಾಯಣಗುರು ಪ್ರತಿಮೆಗೆ ‘ನಮೋ’:
ನರೇಂದ್ರ ಮೋದಿ ಅವರ ರೋಡ್‌ಶೋ ಬ್ರಹ್ಮಶ್ರೀನಾರಾಯಣಗುರುಗಳ ಪ್ರತಿಮೆಗೆ ನಮಿಸುವ ಮೂಲಕ ಆರಂಭಗೊಂಡಿತು. ಮೈಸೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ನರೇಂದ್ರ ಮೋದಿ, ನೇರವಾಗಿ ರಸ್ತೆ ಮಾರ್ಗದಲ್ಲಿ ಮಂಗಳೂರಿನ ಲೇಡಿಹಿಲ್‌ನ ನಾರಾಯಣಗುರು ವೃತ್ತಕ್ಕೆ ಆಗಮಿಸಿದರು. ಅಲ್ಲಿ ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು. ಸುತ್ತಲೂ ಸೇರಿದ್ದ ಜನಸಮೂಹದತ್ತ ಕೈಬೀಸಿದರು. ಇದೇ ವೇಳೆ ಕರಾವಳಿ ಭೇಟಿಯ ನೆನಪಿಗೆ ನರೇಂದ್ರ ಮೋದಿಗೆ ಪೇಟ, ರುದ್ರಾಕ್ಷಿ ಹಾರ ಹಾಕಿ, ಕೇಸರಿ ಬಣ್ಣದ ವಿಶಿಷ್ಟ ಜರಿಶಾಲು ಹೊದಿಸಿ, ಶ್ರೀಕೃಷ್ಣ ದೇವರ ಅಟ್ಟೆಯ ಪ್ರಭಾವಳಿಯ ವಿಶೇಷ ಉಡುಗೊರೆ ನೀಡಲಾಯಿತು. ಬಳಿಕ ವಿಶೇಷ ವಾಹನವನ್ನು ಏರಿದ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ ನಡೆಸಿದರು.
ಈ ಸಂದರ್ಭ ದ.ಕ.ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಚುನಾವಣಾ ಸಂಚಾಲಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ದಕ್ಷಿಣ ಹಾಗೂ ಉತ್ತರ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಡಾ.ಭರತ್ ಶೆಟ್ಟಿ ಮತ್ತಿತರರಿದ್ದರು.
ಕಾಂಗ್ರೆಸ್‌ಗೆ ಬಿಲ್ಲವ ಟಾಂಗ್:
ದ.ಕ. ಮತ್ತು ಉಡುಪಿ ಲೋಕಸಭಾ ಕ್ಷೇತ್ರ ಬಿಲ್ಲವರ ಪ್ರಾಬಲ್ಯ ಹೊಂದಿದ್ದು, ಹೇಗಾದರೂ ಮಾಡಿ ಕರಾವಳಿಯ ಕ್ಷೇತ್ರಗಳನ್ನು ಈ ಬಾರಿ ಕೈ ವಶಕ್ಕೆ ಕಾಂಗ್ರೆಸ್ ಇನ್ನಿಲ್ಲದ ತಂತ್ರಗಾರಿಕೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಪ್ರತಿ ತಂತ್ರಗಾರಿಕೆ ನಡೆಸಿದ್ದು, ನರೇಂದ್ರ ಮೋದಿ ಅವರನ್ನು ಕರೆಸಿ ಅವರಿಂದಲೇ ನಾರಾಯಣಗುರು ಪ್ರತಿಮೆಗೆ ಪುಷ್ಪಾರ್ಚನೆ, ನಮನ ಕಾರ್ಯಕ್ರಮ ಏರ್ಪಡಿಸಿದೆ. ಈ ಮೂಲಕ ಬಿಲ್ಲವ ಸಮುದಾಯದ ಜತೆ ಬಿಜೆಪಿ ಇದೆ ಎಂಬ ಸಂದೇಶ ರವಾನಿಸಿದ್ದು, ಕಾಂಗ್ರೆಸ್‌ಗೆ ಟಾಂಗ್ ಕೊಡುವ ಪ್ರಯತ್ನ ಮಾಡಲಾಗಿದೆ.
ರೋಡ್‌ಶೋಗೆ ದಸರಾ ಕಳೆ:
ಬ್ರಹ್ಮಶ್ರೀನಾರಾಯಣಗುರು ವೃತ್ತದಿಂದ ಆರಂಭವಾದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋ ದಸರಾ ಕಳೆ ತಂದಿತು. ಮಂಗಳೂರು ದಸರಾ ವೇಳೆ ಮೆರವಣಿಗೆ ಅಬ್ಬರದಲ್ಲಿ ಸಾಗುವುದು ವಾಡಿಕೆ. ರೋಡ್‌ಶೋ ಕೂಡ ರಾತ್ರಿ ವೇಳೆ ಅದೇ ಅಬ್ಬರದಲ್ಲಿ ಸಾಗಿದ್ದು ಗಮನಾರ್ಹವಾಗಿತ್ತು.
ರೋಡ್‌ಶೋವಿನ ವಿಶೇಷ ವಾಹನದಲ್ಲಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕೋಟ ಶ್ರೀನಿವಾಸ ಪೂಜಾರಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಇದ್ದರು.
ನಿಗದಿತ ಸಮಯಕ್ಕೆ ರೋಡ್‌ಶೋ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಗೆ ಕಾರ್ಯಕರ್ತರಿಂದ ಪುಷ್ಪವೃಷ್ಟಿ ನಡೆಯಿತು. ಇಕ್ಕೆಲಗಳಲ್ಲಿ ತಳಿರುತೋರಣ, ಕೇಸರಿ ಪತಾಕೆ ಹಾಗೂ ಬಿಜೆಪಿ ಧ್ವಜ, ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದ ಹಾದಿಯಲ್ಲಿ ರೋಡ್‌ಶೋ ಸಾಗುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು, ಜನತೆ ಮೋದಿ...ಮೋದಿ, ಜೈಶ್ರೀರಾಮ್, ಬಿಜೆಪಿಗೆ ಜೈ ಘೋಷಣೆ ಕೂಗಿದರು.
ರೋಡ್‌ಶೋ ಸಾಗುವ ದಾರಿಯುದ್ಧಕ್ಕೂ ಸ್ವಚ್ಛತೆಯನ್ನು ಕಾಪಾಡಿಕೊಂಡಿದ್ದು, ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಜನತೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಬ್ಯಾರಿಕೇಡ್‌ಗಳ ಸುತ್ತಮುತ್ತ ರೋಡ್‌ಶೋಗೆ ಜನಸಾಗರವೇ ಹರಿದುಬಂದಿತ್ತು.
ಮೋದಿ..ಮೋದಿ, ಜೈಕಾರ ಘೋಷಣೆ:
ಮೋದಿ ರೋಡ್‌ಶೋ ಲಾಲ್‌ಬಾಗ್ ತಲುಪುತ್ತಿದ್ದಂತೆ ಆರು ಮಾರ್ಗ ಸೇರುವ ಜಂಕ್ಷನ್‌ನಲ್ಲಿ ಪ್ರವಾಹೋಪಾದಿಯಲ್ಲಿ ಜನರ ದಂಡು ಕಂಡುಬಂತು. ಸುತ್ತಲೂ ಕೈಬೀಸುತ್ತಾ ನೆಚ್ಚಿನ ನಾಯಕನಿಗೆ ಜಯಘೋಷ ಹಾಕುತ್ತಿದ್ದರೆ, ಇತ್ತ ನರೇಂದ್ರ ಮೋದಿ ಹಾಗೂ ಅಭ್ಯರ್ಥಿಗಳು ಪ್ರತಿಯಾಗಿ ಕೈಬೀಸುತ್ತಾ , ನಮಸ್ಕರಿಸುತ್ತಾ ಕಾರ್ಯಕರ್ತರನ್ನು ಹರಿದುಂಬಿಸುತ್ತಿದ್ದರು. ದಾರಿಯುದ್ಧಕ್ಕೂ ಮೋದಿ..ಮೋದಿ...ಜೈಕಾರ ಘೋಷಣೆ ಮುಂದುವರಿದಿತ್ತು.
ರೋಡ್‌ಶೋ ಸಾಗುತ್ತಿದ್ದಂತೆ ದೂರದಿಂದಲೇ ಸೆಲ್ಫಿ ತೆಗೆಯುವ ತವಕ, ಮೋದಿ ಮೋಡಿಯ ಫೋಟೋ ಕ್ಲಿಕ್ಕಿಸಲು ಜನತೆ ಹಾತೊರೆಯುತ್ತಿದ್ದರು.
ಮಹಡಿಗಳಿಂದಲೂ ಪುಷ್ಪವೃಷ್ಟಿ: ರೋಡ್‌ಶೋ ಹಾದಿಯಲ್ಲಿ ಬಹುಮಹಡಿ ಕಟ್ಟಡಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಮೇಲೆ ಪುಷ್ಪವೃಷ್ಟಿ ನಿರಂತರವಾಗಿ ನಡೆಯುತ್ತಿತ್ತು. ರೋಡ್‌ಶೋ ಹಾದಿಯನ್ನು ಕೂಡ ಪುಷ್ಪ, ರಂಗವಲ್ಲಿಗಳಿಂದ ಅಲಂಕರಿಸಿ ಉತ್ಸವದ ಕಳೆ ನೀಡಲಾಗಿತ್ತು. ಸುಮಾರು ಐದು ಕ್ವಿಂಟಾಲ್ ಹೂವಿನ ಎಸಳನ್ನು ಪುಷ್ಪವೃಷ್ಟಿಗೆ ಬಳಸಿದ್ದು, ರೋಡ್‌ಶೋ ಪಿವಿಎಸ್ ಮೂಲಕ ನವಭಾರತ ವೃತ್ತ ತಲಪುವಾಗ ಪ್ರಧಾನಿ, ಭದ್ರತಾ ಸಿಬ್ಬಂದಿ ಸಹಿತ ವಿಶೇಷ ವಾಹನವೂ ಪುಷ್ಪವೃಷ್ಟಿಯಿಂದ ತೊಯ್ದು ಹೋಗಿತ್ತು. ಪ್ರಧಾನಿ ನರೇಂದ್ರ ಮೋದಿಯ ಅಬ್ಬರದ ರೋಡ್‌ಶೋ ಮಂಗಳೂರಿನಲ್ಲಿ ಹೊಸ ಇತಿಹಾಸ ದಾಖಲಿಸಿತು.