ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಮಲೆನಾಡು ಜಿಲ್ಲೆಗಳಲ್ಲಿ ಮಂಗನಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಮಲೆನಾಡ ತಪ್ಪಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕಾಡಂಚಿನ ಊರುಗಳಾದ ಹೆಬ್ರಿ, ನಾಡ್ಪಾಲು, ಮುನಿಯಾಲು ಹಾಗೂ ಮರ್ಣೆ, ಕೆರುವಾಶೆ, ಮಾಳ, ನಾಡ್ಪಾಲು, ಈದು, ನೂರಲ್ಬೆಟ್ಟು ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.2024ರಲ್ಲಿ 8ಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿದ್ದು, ಅದರಲ್ಲಿ ಮರ್ಣೆ ಗ್ರಾಮದಲ್ಲಿ ಸಾವಿಗೀಡಾದ ಮಂಗವೊಂದರಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ- ಕ್ಯಾಸನೂರ್ ಫಾರೆಸ್ಟ್ ಡಿಸೀಸ್) ಇರುವುದು ಪತ್ತೆಯಾಗಿತ್ತು. ಆದರೆ ಮನುಷ್ಯರಿಗೆ ಹರಡಿದ ಪ್ರಕರಣಗಳು ವರದಿಯಾಗಿಲ್ಲ. ಅದಕ್ಕಾಗಿ ಈ ಬಾರಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಮಂಗನಕಾಯಿಲೆ ಲಕ್ಷಣಗಳು:ಕಾಡಿಗೆ ಹೋದಾಗ ಚಿಗಟ ಹುಣ್ಣುಗಳಿಂದ ಈ ಕಾಯಿಲೆ ಹರಡುತ್ತದೆ. ಕೆಂಪು ಚಿಗಟ ಕಡಿದಾಗ ಬರುವ ಈ ಕಾಯಿಲೆಯ ಮೊದಲ ಲಕ್ಷಣವೇ ಸೋಂಕು ತಗುಲಿದ ಒಂದು ವಾರದ ನಂತರ ಕಾಣಿಸಿಕೊಳ್ಳುವ ಜ್ವರ. 10ರಿಂದ 12 ದಿನಗಳ ವರೆಗೆ ಜ್ವರ ಕಾಡುತ್ತದೆ. ಚಳಿ, ಜ್ವರ, ತಲೆನೋವು, ತೀವ್ರ ಸ್ನಾಯು ನೋವು, ವಾಂತಿ, ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ನಂತರ ಕಡಿಮೆ ರಕ್ತದೊತ್ತಡ, ರಕ್ತ ಕಣಗಳ (ಪ್ಲೇಟ್‌ಲೆಟ್‌ಗಳು, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು) ಸಂಖ್ಯೆ ಕಡಿಮೆಯಾಗುವುದು, ತೀವ್ರ ತಲೆನೋವು, ಮಾನಸಿಕ ತೊಂದರೆಗಳು, ನಡುಕ ಮತ್ತು ದೃಷ್ಟಿ ಕೊರತೆಗಳು ಕಾಣಿಸಿಕೊಳ್ಳುತ್ತವೆ. ಮಂಗನ ಕಾಯಿಲೆ ಹೆಚ್ಚು ಕಾಡಿಗೆ ಹೋಗುವವರಲ್ಲಿ, ಕಾಡಿನ ಹತ್ತಿರ ಮನೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯದಿದ್ದರೆ ಕಾಯಿಲೆ ಉಲ್ಬಣವಾಗಿ ಮಾರಣಾಂತಿಕವಾಗಬಹುದು.ಮಲೇರಿಯಾ ರೋಗದ ಲಕ್ಷಣಗಳನ್ನೇ ಹೋಲುತ್ತವೆ. ಯಾವುದೇ ಪ್ರಾಣಿಗಳಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಜಾಗೃತರಾಗಿದ್ದರೆ ಒಳ್ಳೆಯದು. ಜ್ವರ ಬಂದರೆ ತಕ್ಷಣವೇ ಸ್ಥಳೀಯ ಅರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು. ವೈದ್ಯರಿಂದಲೇ ಪರೀಕ್ಷಿಸಿಕೊಳ್ಳಬೇಕು.ಗ್ರಾಮಮಟ್ಟದಲ್ಲಿ ನಿರ್ವಹಣಾ ತಂಡ:
ಕಾರ್ಕಳ ತಾಲೂಕಿನ 27 ಗ್ರಾ.ಪಂ.ನ 39 ಗ್ರಾಮಗಳು, ಹೆಬ್ರಿ ತಾಲೂಕಿನ 16 ಗ್ರಾಮಗಳಲ್ಲಿ ಮಂಗನ ಕಾಯಿಲೆ ನಿರ್ವಹಣೆಗಾಗಿ ಪ್ರತ್ಯೆಕವಾದ ಸಮಿತಿ ರಚಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.ಹೇಗೆ ತಪ್ಪಿಸಿಕೊಳ್ಳಬಹುದು:ಅರಣ್ಯ ಪ್ರದೇಶಗಳಿಗೆ ಪ್ರವೇಶಿಸುವಾಗ ಉದ್ದನೆಯ ತೋಳಿರುವ ಶರ್ಟ್ ಮತ್ತು ಪ್ಯಾಂಟ್ ಧರಿಸಬೇಕು. ಬೆಚ್ಚನೆಯ ಮತ್ತು ಇಡೀ ದೇಹವನ್ನು ಮುಚ್ಚುವಂತಹ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಸೋಂಕಿತ/ಸತ್ತ ಕೋತಿಗಳ/ಇತರ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಬೇಕು. ಪ್ರಾಣಿಗಳನ್ನು ಮುಟ್ಟಿದ ನಂತರ ಸರಿಯಾಗಿ ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸತ್ತ ಮಂಗನ ಮೃತದೇಹ ಕಂಡುಬಂದರೆ ಗ್ರಾಮ ಸಮಿತಿಯನ್ನು ಸಂಪರ್ಕಿಸಬೇಕು.ಸಕಲ ಸಿದ್ಧತೆ:
ಗ್ರಾಮಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರ, ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಅಭಿಯಾನ ಆರಂಭಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಯಲ್ಲಿ ಬೆಡ್‌ಗಳನ್ನು ನಿದಿಪಡಿಸುವಂತೆ ತಾಲೂಕು ವೈದ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.----------------ಕಳೆದ ಬಾರಿ ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ 8 ಮಂಗನ ಮೃತದೇಹಗಳು ದೊರೆತ್ತಿದ್ದು, ಮರ್ಣೆ ಗ್ರಾಮದಲ್ಲಿ ಸತ್ತ ಮಂಗನ ಮೃತದೇಹದಲ್ಲಿ ಫ್ಲಾವಿವಿರಿಡೆ ವೈರಸ್ ಇರುವುದು ಪತ್ತೆಯಾಗಿತ್ತು. ಈ ಬಾರಿ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕಾಡಂಚಿನ ಊರುಗಳಲ್ಲಿ ತೆರಳಿ ಜಿಗಟ ಹುಣ್ಣುಗಳನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಒಳಪಡಿಸಿದ್ದು, ಯಾವುದೇ ಮಂಗನ ಕಾಯಿಲೆಯ ಪ್ರಕರಣಗಳು ವರದಿಯಾಗಿಲ್ಲ. ಜ್ವರ ಬಂದರೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ. ತಾಲೂಕು ಆಸ್ಪತ್ರೆಯಲ್ಲಿ ಸನ್ನದ್ಧವಾಗಿರುವಂತೆ ಪ್ರತ್ಯೇಕ ಬೆಡ್‌ಗಳನ್ನು ಕಲ್ಪಿಸಲು ಸೂಚನೆ ನೀಡಲಾಗಿದೆ.
। ಡಾ. ಸಂದೀಪ್ ಕುಡ್ವ, ತಾಲೂಕು ವೈದ್ಯಾಧಿಕಾರಿ ಕಾರ್ಕಳ