ಮುಂಗಾರು ಮಳೆ ಜೋರು ಬಿತ್ತನೆ ಕಾರ್ಯ ಚುರುಕು

KannadaprabhaNewsNetwork | Published : Aug 4, 2024 1:22 AM

ಸಾರಾಂಶ

ಫಸಲ್ ಭೀಮಾ ಯೋಜನೆಯಡಿ ಈಗಾಗಲೇ ೨೦೨೪-೨೫ನೇ ಸಾಲಿನಲ್ಲಿ ೧೦೩೮೦ ರೈತರು ಶೇಂಗಾ, ಮುಸುಕಿನ ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮೆಯನ್ನು ಮಾಡಿಸಿದ್ದಾರೆ. ಬೆಳೆ ವಿಮೆ ಮಾಡಿಸಲು ಇಚ್ಛಿಸುವ ರೈತರು ಆ.೧೬ ಕೊನೆಯ ದಿನವಾಗಿದ್ದು ಸರ್ಕಾರದ ಸೌಲಭ್ಯವನ್ನು ಪಡೆಯಲು ರೈತರು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮುಂಗಾರು ಮಳೆ ಉತ್ತಮವಾಗಿದ್ದು, ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಈಗಾಗಲೇ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ರಾಗಿ, ಜೋಳ, ಶೇಂಗಾ, ತೊಗರಿ ಬೆಳೆಯುತ್ತಾರೆ. ಇದೆ ರೀತಿ ಉತ್ತಮ ಮಳೆ ಆದರೆ ರೈತರಿಗೆ ಉತ್ತಮ ಇಳುವರೆ ಬರುತ್ತದೆ. ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು ೩೨೫೩೩ ಹೆಕ್ಟೇರ್ ಬಿತ್ತನೆ ಗುರಿಯನ್ನು ಹೊಂದಿತ್ತು. ಈಗಾಗಲೇ ತಾಲೂಕಿನಲ್ಲಿ ೨೨೬೪೨ ಹೆಕ್ಟೇರ್ ಪ್ರದೇಶದಲ್ಲಿ ಶೇ.೭೦ ಬಿತ್ತನೆ ಮಾಡಲಾಗಿದ್ದು, ಪ್ರಾರಂಭದಲ್ಲಿ ೨೪೨೬ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇತ್ತು. ೨೧೦೦ ಕ್ವಿಂಟಾಲ್ ಬೀಜ ದಾಸ್ತಾನು ಶೇಖರಣೆ ಮಾಡಲಾಗಿದ್ದು, ಇದರಲ್ಲಿ ೧೭೮೩ ಕ್ವಿಂಟಾಲ್ ಮಾತ್ರ ವಿತರಣೆಯಾಗಿದೆ.

ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆ: ಕಳೆದ ವರ್ಷ ತಾಲೂಕಿನಲ್ಲಿ ಮಳೆ ಕೊರತೆಯಾಗಿತ್ತು. ಬೆಳೆಗಳು ಸಂಪೂರ್ಣ ನಾಶವಾಗಿದ್ದವು. ಈ ಬಾರಿ ಜುಲೈ ಅಂತ್ಯಕ್ಕೆ ಇಲಾಖೆಯು ೩೦೫ ಮಿ.ಮೀ ಮಳೆ ಗುರಿ ಹೊಂದಿತ್ತು, ಆದರೆ ೩೬೯ಮಿ.ಮೀ ನಷ್ಟು ಮಳೆಯಾಗಿದೆ. ಶೇ.೨೧ ಹೆಚ್ಚಿನ ಮಳೆಯಾಗಿದೆ.ರೈತರಿಂದ ಬೆಳೆ ವಿಮೆ ನೋಂದಣಿ:ಫಸಲ್ ಭೀಮಾ ಯೋಜನೆಯಡಿ ಈಗಾಗಲೇ ೨೦೨೪-೨೫ನೇ ಸಾಲಿನಲ್ಲಿ ೧೦೩೮೦ ರೈತರು ಶೇಂಗಾ, ಮುಸುಕಿನ ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮೆಯನ್ನು ಮಾಡಿಸಿದ್ದಾರೆ. ಬೆಳೆ ವಿಮೆ ಮಾಡಿಸಲು ಇಚ್ಛಿಸುವ ರೈತರು ಆ.೧೬ ಕೊನೆಯ ದಿನವಾಗಿದ್ದು ಸರ್ಕಾರದ ಸೌಲಭ್ಯವನ್ನು ಪಡೆಯಲು ರೈತರು ಮುಂದಾಗಬೇಕು.ತಾಲೂಕಿನ ಪ್ರಮುಖ ಬೆಳೆಗಳಲ್ಲಿ ಕೃಷಿ ಇಲಾಖೆಯ ಗುರಿ ಮತ್ತು ಸಾಧನೆ:ಪ್ರಮುಖ ಬೆಳೆಗಳು ಗುರಿ ಸಾಧನೆಮುಸುಕಿನಜೋಳ ೧೫೫೬೭ ಹೆಕ್ಟೇರ್ ೯೫೪೦ ಹೆಕ್ಟೇರ್ರಾಗಿ ೮೯೫೦ ಹೆಕ್ಟೇರ್ ೬೨೮೦ ಹೆಕ್ಟೇರ್ಶೇಂಗಾ೪೬೫೦ ಹೆಕ್ಟೇರ್ ೫೫೬೫ ಹೆಕ್ಟೇರ್

-------‘ಈಗಾಗಲೇ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಶೇ.೭೦ ಬಿತ್ತನೆಯಾಗಿದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಉತ್ತಮ ಮಳೆಯಾದ ಕಾರಣ ತಾಲೂಕಿನಲ್ಲಿ ಬಿತ್ತನೆ ಕಾರ್ಯವು ಚುರುಕುಗೊಂಡಿದೆ. ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ಕೊರತೆ ಕಂಡುಬರದಂತೆ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ೧೦೩೮೦ ಮಂದಿ ರೈತರು ವಿವಿಧ ಬೆಳೆಗಳಿಗೆ ಬೆಳೆ ವಿಮೆಗೆ ನೋಂದಾಯಿಸಿದ್ದಾರೆ.’ರುದ್ರಪ್ಪ ಎಂ.ಆರ್. ಸಹಾಯಕ ಕೃಷಿ ನಿರ್ದೇಶಕರು. ಕೊರಟಗೆರೆ.

‘ಮುಂಗಾರು ಮಳೆ ಆರಂಭದಲ್ಲೇ ಉತ್ತಮವಾಗಿದೆ. ಕಳೆದ ವರ್ಷ ಮಳೆ ಸರಿಯಾಗಿ ಬಾರದ ಕಾರಣ ಫಸಲು ಕೈಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದು, ಈ ಬಾರಿ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಈಗ ಉತ್ತಮ ಮಳೆಯಾದ ಕಾರಣ ಶೇಂಗಾ ಮತ್ತು ರಾಗಿ ಬಿತ್ತನೆ ಮಾಡಲಾಗಿದೆ. ಕಳೆದ ತಿಂಗಳಿನಿಂದ ಮೋಡ ಕವಿದ ವಾತಾವರಣ ಸೃಷ್ಠಿಯಾಗಿದೆ. ಈ ಬಾರಿ ಉತ್ತಮ ಫಸಲು ಕಾಣುವ ನಿರೀಕ್ಷೆಯಲ್ಲಿ ಇದ್ದೇವೆ.’ರಂಗಮ್ಮ, ರೈತ ಮಹಿಳೆ ತುಂಬುಗಾನಹಳ್ಳಿ

Share this article