ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆಮೂಡುಬಿದಿರೆಯ ಸೀಯಾಳಾಭಿಷೇಕ ಪ್ರಿಯ ಆಂಜನೇಯನ ಸನ್ನಿಧಿ ಸರ್ವ ಧರ್ಮೀಯರಿಗೂ ಆರಾಧ್ಯ. ನಿತ್ಯವೂ ಬೆಳಗ್ಗೆ ಆಂಜನೇಯನ ಸನ್ನಿಧಿಗೆ ಬಂದು ಹೋಗುವುದು ಭಜಕರಿಗೆ ರೂಢಿ. ಶನಿವಾರವಂತೂ ಇಲ್ಲಿ ಭಕ್ತರದ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಕಾರ್ತಿಕ ಬಹುಳ ಪಾಡ್ಯದ ಈ ಶನಿವಾರ ಬೆಳಗ್ಗೆ ಆಂಜನೇಯನ ದರ್ಶನಕ್ಕೆ ಬಂದವರಿಗೆ ದೇವರ ದರ್ಶನ ಸಿಗಲಿಲ್ಲ. ಮಧ್ಯಾಹ್ನದವರೆಗೂ ಗರ್ಭಗುಡಿ ಬಾಗಿಲು ತೆರೆಯದೇ ಯಾವ ಸೇವೆ, ತೀಥ ಪ್ರಸಾದವಿಲ್ಲದ್ದನ್ನು ಕಂಡ ಹಲವರಿಗೆ ಅಚ್ಚರಿ!
ದೇವಸ್ಥಾನದ ಸಂಪ್ರದಾಯದ ಬಗ್ಗೆ ತಿಳಿದಿದ್ದ ಕೆಲವು ಮಂದಿ, ಹೋ.. ನಿನ್ನೆ ಕಾರ್ತಿಕ ದೀಪೋತ್ಸವ, ಇಂದು ಆಂಜನೇಯನ ದರ್ಶನವಿಲ್ಲ ಎಂಬುದನ್ನು ನೆನಪಿಸಿಕೊಂಡರು.ಹೌದು.. ವರ್ಷಕ್ಕೆ ಒಮ್ಮೆ ಹೀಗೊಂದು ಅರ್ಧ ದಿನ ದೇವರ ಗರ್ಭಗೃಹ ಹಗಲಲ್ಲೇ ಮುಚ್ಚಿರುವ ಸಂದರ್ಭ ದೇವರ ಜಾತ್ರೆಯ ಕಾರಣಕ್ಕೆ ಎದುರಾಗುವುದೇ ವಿಶೇಷ. ಕಳೆದ ಶುಕ್ರವಾರ ಆಂಜನೇಯನ ಒಡೆಯ ಎನ್ನಲಾಗುವ ಮೂಡುವೇಣುಪುರದೊಡೆಯ ಶ್ರೀ ವೆಂಕಟರಮಣ ದೇವರ ವರ್ಷಾವಧಿ ಕಾರ್ತಿಕ ದೀಪೋತ್ಸವ ನಡೆದಿತ್ತು. ಬೆಳಗ್ಗೆ ವನಕ್ಕೆ ಹೊರಟು ಅಲ್ಲಿ ಪೂಜೆಯ ಬಳಿಕ ರಾತ್ರಿ ಪೇಟೆ ಸವಾರಿ ಹೊರಡುವ ಒಡೆಯ ಮೊದಲು ಶ್ರೀ ಹನುಮಂತ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ದೇವರ ಬಿಂಬ ಸಹಿತ ವೈಭವದ ರಂಗಪೂಜೆ ನಡೆಯುತ್ತದೆ. ಈ ಸಂದರ್ಭ ಆಂಜನೇಯ ದೇವರು ಅತ್ಯಂತ ಪ್ರಸನ್ನನಾಗಿರುವ ಕಾಲ ಎಂದೇ ಪ್ರತೀತಿ.
ತಡರಾತ್ರಿ ಇಲ್ಲಿಂದ ಪೇಟೆ ಸವಾರಿ ಹೊರಟು ಕಟ್ಟೆ ಪೂಜೆ ಸ್ವೀಕರಿಸಿ ಒಡೆಯ ಮರಳಿ ಗರ್ಭಗೃಹ ಸೇರುವಾಗ ಮರುದಿನ ಮಧ್ಯಾಹ್ನ (ಶನಿವಾರ) ಹನ್ನೊಂದೂವರೆ ದಾಟುತ್ತದೆ. ಸ್ವಸ್ಥಾನದಲ್ಲಿ ಪೂಜೆಯಾಗಿ ವಿಶ್ರಾಂತಿಗಾಗಿ ಹಗಲಲ್ಲೇ ಜೋಗುಳ ದಿನದ ವಿಶೇಷ. ಹೀಗೆ ಶ್ರೀ ವೆಂಕಟರಮಣನ ಸನ್ನಿಧಿ ಮತ್ತೆ ಸುಪ್ರಭಾತ ಸೇವೆಯೊಂದಿಗೆ ತೆರೆಯುವುದು ಮಧ್ಯಾಹ್ನ 1.30ರ ಬಳಿಕವೇ.ಮತ್ತೆ ಪ್ರಾತಃ ಕಾಲದ ನಿರ್ಮಾಲ್ಯ ವಿಧಿ, ಪೂಜೆಯಾದ ಬಳಿಕವೇ ಅರ್ಚಕರು ಶ್ರೀ ಹನುಮಂತನ ಗರ್ಭಗೃಹ ತೆರೆಯುತ್ತಾರೆ. ಅಷ್ಟಾಗುವ ಹೊತ್ತಿಗೆ ಶನಿವಾರ ಮಧ್ಯಾಹ್ನ ದಾಟಿರುತ್ತದೆ. ಒಡೆಯನ ಪೂಜೆಯಾಗದೇ ತನಗೆ ಪೂಜೆ ಬೇಡ ಎನ್ನುವ ಆಂಜನೇಯನ ಸನ್ನಿಧಿ ಈ ಕಾರಣಕ್ಕೆ ದೀಪೋತ್ಸವದ ಮರುದಿನ ಮುಚ್ಚಿರುತ್ತದೆ. ಈ ಬಾರಿ ಶನಿವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಈ ವಿಶೇಷ ಅನುಭವವಾಯಿತು.
ವೆಂಕಮೂಡುಬಿದಿರೆಯ ಆಂಜನೇಯನಿಗೆ ಶ್ರೀ ವೆಂಕಟರಮಣ ದೇವಸ್ಥಾನದ ದೇವರೇ ಒಡೆಯ. ಅಲ್ಲಿನ ತೀರ್ಥ, ನೈವೇದ್ಯವೇ ಆಂಜನೇಯನಿಗೆ ಪ್ರಿಯ ಪ್ರಸಾದ. ಹಾಗಾಗಿ ಅಲ್ಲಿಗೆ ಭೇಟಿ ನೀಡಿ ತನ್ನಲ್ಲಿಗೆ ಬಂದವರ ಬಗ್ಗೆ ದೇವರಿಗೆ ವಿಶೇಷ ಮಮತೆ ಎನ್ನುವ ಪ್ರತೀತಿ ಇಲ್ಲಿದೆ. ಹಾಗಾಗಿ ಶನಿವಾರ ಆಂಜನೇಯನ ದರ್ಶನ ಸಿಗದವರು ವೆಂಕಟರಮಣ ದೇವಸ್ಥಾನಕ್ಕೆ ಬಂದಾಗ ಇಲ್ಲಿ ಉತ್ಸವದ ಒಡೆಯ ಮರಳಿ ದೇಗುಲ ಪ್ರವೇಶಿಸಿ ಶಯನಕ್ಕೆ ತೆರಳುವ ಜೋಗುಳದೊಂದಿಗೆ ಏರು ಹಗಲೇ ಶ್ರೀ ವೆಂಕಟರಮಣ ದೇವರ ಸನ್ನಿಧಿಯ ದ್ವಾರ ಮುಚ್ಚುವ ಪ್ರಕ್ರಿಯೆ ಕಣ್ತುಂಬಿಕೊಳ್ಳುವಂತಾಯಿತು.