ಸಿದ್ಧಾರೂಢರ ಜಾತ್ರೆಗೆ 500ಕ್ಕೂ ಅಧಿಕ ಭಕ್ತರ ಪಾದಯಾತ್ರೆ

KannadaprabhaNewsNetwork | Published : Mar 8, 2024 1:46 AM

ಸಾರಾಂಶ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ 2500 ಜನಸಂಖ್ಯೆ ಹೊಂದಿದ ಪುಟ್ಟಗ್ರಾಮ ಸಂಗಾನಹಟ್ಟ. ಇದೇ ಗ್ರಾಮದ 100ಕ್ಕೂ ಅಧಿಕ ಜನ ಪಾದಯಾತ್ರೆ ಕೈಗೊಂಡರೆ, ಟ್ರ್ಯಾಕ್ಟರ್‌, ಟಾಟಾ ಏಸ್‌ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಸಾವಿರಕ್ಕೂ ಅಧಿಕ ಜನರು ಸಿದ್ಧಾರೂಢರ ಮಠಕ್ಕೆ ಆಗಮಿಸಿ ಆರೂಢರ ದರ್ಶನ ಪಡೆದುಕೊಳ್ಳುತ್ತಾರೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಿದ್ಧಾರೂಢರಿಗೆ ಅಸಂಖ್ಯಾತ ಭಕ್ತಸಮೂಹವಿದೆ. ಮಾ. 9ರಂದು ನಡೆಯುವ ಅಜ್ಜನ ಜಾತ್ರೆಗೆ ಬಾಗಲಕೋಟೆ ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನ ಸಂಗಾನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ 500ಕ್ಕೂ ಅಧಿಕ ಜನರು ಕಳೆದ 15 ವರ್ಷಗಳಿಂದ ಪಾದಯಾತ್ರೆಯ ಮೂಲಕ ಅಜ್ಜನ ಮಠಕ್ಕೆ ಬಂದು ಸೇವೆ ಮಾಡುವುದು ವಿಶೇಷ.

ಅಜ್ಜನ ವೈಶಿಷ್ಟ್ಯವೇ ಹಾಗೆ. ಜಾತ್ರೆಗೆ ಜಿಲ್ಲೆಯಲ್ಲದೇ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಬರುವುದು ಸಾಮಾನ್ಯ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ 2500 ಜನಸಂಖ್ಯೆ ಹೊಂದಿದ ಪುಟ್ಟಗ್ರಾಮ ಸಂಗಾನಹಟ್ಟಿ. ಗ್ರಾಮಸ್ಥರ ಸಿದ್ಧಾರೂಢರ ಮೇಲಿನ ಭಕ್ತಿಗೆ ಮನಃಸೋಲದವರಿಲ್ಲ. ಇದೇ ಗ್ರಾಮದ 100ಕ್ಕೂ ಅಧಿಕ ಜನ ಪಾದಯಾತ್ರೆ ಕೈಗೊಂಡರೆ, ಟ್ರ್ಯಾಕ್ಟರ್‌, ಟಾಟಾ ಏಸ್‌ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಸಾವಿರಕ್ಕೂ ಅಧಿಕ ಜನರು ಸಿದ್ಧಾರೂಢರ ಮಠಕ್ಕೆ ಆಗಮಿಸಿ ಆರೂಢರ ದರ್ಶನ ಪಡೆದುಕೊಳ್ಳುತ್ತಾರೆ. ಅಲ್ಲದೇ ಸೇವಾಕಾರ್ಯ ಕೈಗೊಳ್ಳುವುದು ವಿಶೇಷ. ಸಂಗಾನಹಟ್ಟಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಂದ 500ಕ್ಕೂ ಅಧಿಕ ಭಕ್ತರು ಮಹಾಲಿಂಗಪುರದಲ್ಲಿರುವ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಸೇರಿ ಸಹಜಾನಂದ ಶ್ರೀಗಳ ನೇತೃತ್ವದಲ್ಲಿ ಈ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ.

2 ಸಾವಿರಕ್ಕೂ ಅಧಿಕ ರೊಟ್ಟಿ:

ಇವರು ಬರೀ ಪಾದಯಾತ್ರೆ ಕೈಗೊಳ್ಳದೇ ಸಿದ್ಧಾರೂಢರ ಮಠಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಗ್ರಾಮದಿಂದಲೇ 2 ಸಾವಿರಕ್ಕೂ ಅಧಿಕ ರೊಟ್ಟಿ ತಯಾರಿಸಿಕೊಂಡು ತಂದು ಮಠದ ಪಾಠಶಾಲೆಯಲ್ಲಿ ಭಕ್ತರಿಗೆ ರೊಟ್ಟಿ, ಅನ್ನ, ಸಾಂಬಾರಿನ ಊಟ ಬಡಿಸುವರು. ರೊಟ್ಟಿಗಳನ್ನು ಗ್ರಾಮದಲ್ಲಿಯೇ ತಯಾರಿಸಿಕೊಂಡು ಬರುವುದು ವಿಶೇಷ. ಇದರೊಂದಿಗೆ ಜಾತ್ರೆಯ ಪೂರ್ವದಿನದ ಏಕಾದಶಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾವಿರಕ್ಕೂ ಅಧಿಕ ಭಕ್ತರಿಗೆ ಶೇಂಗಾ ಹಾಗೂ ಬೆಲ್ಲದ ಪ್ಯಾಕೆಟ್‌ ವಿತರಿಸುವುದು ಮತ್ತೊಂದು ವಿಶೇಷ.

ಪಾದಯಾತ್ರೆಯುದ್ದಕ್ಕೂ ಭಕ್ತರ ಸೇವೆ:

ಪ್ರತಿವರ್ಷ ಪಾದಯಾತ್ರೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆಯುದ್ದಕ್ಕೂ ಬರುವ ಗ್ರಾಮಗಳಲ್ಲಿ ಭಕ್ತರಿಂದಲೇ ಪಾದಯಾತ್ರಿಗಳಿಗೆ ವಿಶೇಷ ಆತಿಥ್ಯ ನೀಡಲಾಗುತ್ತದೆ. ಊಟ, ಉಪಾಹಾರ, ತಂಗಲು ವ್ಯವಸ್ಥೆ ಮಾಡುವುದು ವಿಶೇಷ. ಪಾದಯಾತ್ರೆ ಸಂಚರಿಸುವ ಮಾರ್ಗದಲ್ಲಿ ಬರುವ ಅಕ್ಕಿಮರಡಿ, ಯಾದವಾಡ, ಹುಲಕುಂದ, ಚಿಕ್ಕೊಪ್ಪ, ಚಂದರಗಿ, ಕಡಕೋಳ, ಚಿಂಚನೂರು, ಮುನವಳ್ಳಿ, ಸವದತ್ತಿ, ಹಿರೇಹುಳ್ಳಿಕೇರಿ, ಅಮ್ಮಿನಬಾವಿ, ರಾಯರ ಹೆಬ್ಬಳ್ಳಿಯ ಬ್ರಹ್ಮಚೈತನ್ಯ ಆಶ್ರಮದಲ್ಲಿ ಪಾದಯಾತ್ರಿಗಳಿಗೆ ಆಯಾ ಗ್ರಾಮದವರೇ ಉಚಿತವಾಗಿ ಉಪಾಹಾರ, ಊಟ, ವಸತಿ ಕೈಗೊಳ್ಳುತ್ತಾ ಬಂದಿರುವುದು ವಿಶೇಷ.

150 ಕಿಮೀ ಪಾದಯಾತ್ರೆ:

ಹುಬ್ಬಳ್ಳಿಯಿಂದ 150 ಕಿ.ಮೀ. ದೂರವಿರುವ ಸಂಗಾನಹಟ್ಟಿ ಗ್ರಾಮದಿಂದ ಆಗಮಿಸುವ ಭಕ್ತರು ಪ್ರತಿದಿನ 30 ಕಿಮೀ ಸಂಚರಿಸುತ್ತಾರೆ. ಮಾರ್ಗ ಮಧ್ಯ ಬರುವ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಮತ್ತೆ ಮರುದಿನ ಪಾದಯಾತ್ರೆ ಮುಂದುವರಿಸುತ್ತಾರೆ. ಕಳೆದ ಮಾ. 3ರಿಂದ ಆರಂಭ‍ಾಗಿರುವ ಪಾದಯಾತ್ರೆಯು ಮಾ. 8ರಂದು ಹುಬ್ಬಳ್ಳಿಗೆ ಆಗಮಿಸಲಿದೆ. ಬಂದ ದಿನದಂದು ವಿಶ್ರಮಿಸದೇ ತಂಡವು ಸಿದ್ಧಾರೂಢರ ಸೇವೆಗೆ ಸನ್ನದ್ಧವಾಗುತ್ತದೆ. ಜಾತ್ರೆಯ ಮಾರನೇ ದಿನ ಮಧ್ಯಾಹ್ನ ಶ್ರೀಮಠದಿಂದ ಗ್ರಾಮಕ್ಕೆ ಮರಳುತ್ತಾರೆ.

ಪ್ರಸಾದ ವ್ಯವಸ್ಥೆಕಳೆದ 40 ವರ್ಷಗಳಿಂದ ನಾನು ಗ್ರಾಮದಿಂದ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ನಡೆಸುತ್ತಿದ್ದೇನೆ. ಮಠಕ್ಕೆ ತೆರಳಿ ಭಕ್ತರ ಪ್ರಸಾದವನ್ನಷ್ಟೇ ನಾವು ಸ್ವೀಕರಿಸದೇ ಕಳೆದ 3 ವರ್ಷಗಳಿಂದ ಪ್ರಸಾದದ ವ್ಯವಸ್ಥೆ ಮಾಡುತ್ತಿದ್ದೇವೆ.

- ಪರಪ್ಪ ಹುದ್ಧಾರ, ಸಂಗಾನಹಟ್ಟಿ ಗ್ರಾಮದ ವಯೋವೃದ್ಧ

Share this article