ಕನ್ನಡಪ್ರಭ ವಾರ್ತೆ ಕಲಬುರಗಿ
ನಿಯಮ ಮೀರಿ ಬಡ್ತಿ ನೀಡಲಾಗಿದೆ ಎಂಬ ಕಾರಣಕ್ಕೆ ಕಲಬುರಗಿ ಜಿಲ್ಲಾಡಳಿತದಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಹೆಚ್ಚು ನೌಕರರಿಗೆ ಹಳೆ ಹುದ್ದೆಗೇ ಹಿಂಬಡ್ತಿ ನೀಡಲಾಗಿದೆ.ಜಿಲ್ಲೆಯ ಕಂದಾಯ ಇಲಾಖೆಯಲ್ಲಿ (ಜಿಲ್ಲಾಡಳಿತ) 3 ವರ್ಷಗಳ ಹಿಂದೆಯೇ ಇರಿಗೆಲ್ಲರಿಗೂ ಮುಂಬಡ್ತಿ ನೀಡಲಾಗಿತ್ತು. ಆದರೆ ಮುಂಬಡ್ತಿ ಪ್ರಕ್ರಿಯೆಯಲ್ಲಿ ಸೇವಾ ನಿಯಮಗಳನ್ನು ಗಾಳಿಗೆ ತೂರಿರುವ, ಸೇವಾ ಹಿರಿತನ ಪಾಲನೆಯಾಗಿಲ್ಲವೆಂಬ ಕಾರಣಕ್ಕಾಗಿ ಇಂದು ಇವರೆಲ್ಲರು ಹಳೆ ಹುದ್ದೆಗಳಿಗೇ ಮರಳುವಂತಾಗಿದೆ.
ಸಿಪಾಯಿ ಹುದ್ದೆಯಿಂದ ದ್ವಿದಸ, ದ್ವಿದಸ ಹುದ್ದೆಯಿಂದ ಪ್ರದಸ, ಪ್ರದಸ ಹುದ್ದೆಯಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೂರಕ್ಕೂ ಹೆಚ್ಚು ಸಿಬ್ಬಂದಿ ಮುಂಬಡ್ತಿ ಹೊಂದಿದ್ದರು. ಆದರೆ ಇವರೆಲ್ಲರಿಗೂ ನೀಡಲಾಗಿದ್ದ ಮುಂಬಡ್ತಿ ವಾಪಸ್ ಪಡೆಯಲಾಗಿದೆಯಲ್ಲದೆ ಎಲ್ಲರಿಗೂ ಹಲೆ ಹುದ್ದೆಗಳ್ಲಿಯೇ ಕೆಲಸಕ್ಕೆ ಸೂಚಿಸಲಾಗಿದೆ.ಕಂದಾಯ ಇಲಾಖೆಯ ಲೆಕ್ಕ ಪರಿಶೋಧನ ತಂಡದವರು ನಡೆಸಿರುವ ಪರಿಶೀಲನೆಯಲ್ಲಿ ನಿಯಮ ಬಾಹೀರವಾಗಿ ಮುಂಬಡ್ತಿ ನೀಡಿರುವ ಸಂಗತಿ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಲಬುರಗಿಯ ಪ್ರಸಕ್ತ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಎಲ್ಲರ ಮುಂಬಡ್ತಿಯಿಂದ ಹಿಂಬಡ್ತಿ ನೀಡುವ ಮೂಲಕ ಅವರನ್ನೆಲ್ಲ ಹಳೆ ಹುದ್ದೆಗೆ ಮರಳುವಂತೆ ಆದೇಶ ಮಾಡಿದ್ದಾರೆ.
ಮುಂಬಡ್ತಿ ಪ್ರಕ್ರಿಯೆಯಲ್ಲಿ ಹಿಂದಿನ ಡಿಸಿಯವರು 2023ರ ಮೇ ತಿಂಗಳಲ್ಲಿ 68 ಕಂದಾಯ ಇಲಾಖೆ ದ್ವತೀಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರೆಂದು ಮುಂಬಡ್ತಿ ನೀಡಲಾಗಿತ್ತು, ಇರೆಲ್ಲರಿಗೂ ಜುಲೈ ತಿಂಗಳ 2021 ರಿಂದಲೇ ಅನ್ವಯವಾಗುವಂತೆ ಲಾಭಗಳನ್ನು ಸಹ ನೀಡಲಾಗಿತ್ತು.ಅದೇ ರೀತಿಯಲ್ಲಿ ಆಗಸ್ಟ್ 2023ರಲ್ಲಿ ಹಿಂದಿನ ಡಿಸಿಯವರು 33 ಜನ ಸಿಪಾಯಿ (ಡಿ ಗುಂಪಿನ ನೌಕರರು) ಗಳಿಗೆ ದ್ವಿತೀಯ ದರ್ಜೆ ಸಹಾಯಕರೆಂದು ಬಡ್ತಿ ನೀಡಿದ್ದರು. ಇಲ್ಲಿ ಜೇಷ್ಠತಾ ಪಟ್ಟಿಯಲ್ಲಿನ ಲೋಪಗಳೂ ಗಮನ ಸೆಳೆದಿದ್ದವು.
ಕಂದಾಯ ಇಲಾಖೆ ಲೆಕ್ಕ ಪರಿಶೋಧಕರ ತಂಡದವರು ಇವರೆಲ್ಲರ ಪ್ರಕರಣಗಳನ್ನು ಅಧ್ಯಯನ ಮಾಡಿದಾಗ ಖಾಲಿ ಹುದ್ದೆಗಳು, ನೀಡಲಾಗುತ್ತಿರುವ ಮುಂಬಡ್ತಿ, ಇತರೆ ಯಾವುದೇ ಅಂಶಗಳನ್ನು ಈ ಹಂತದಲ್ಲಿ ಪರಿಗಣಸದೆ ಅಲಕ್ಷಿಸಿರೋದನ್ನೂ ಪರಿಶೋಧನಾ ತಂಡದವರು ಗಮನಿಸಿದ್ದರು.ಹೀಗೆ ಮುಂಬಡ್ತಿ ನೀಡಲು ಅವಕಾಶವಿಲ್ಲ, ಕೆಸಿಎಸ್ಆರ್ ನಿಯಮಾವಳಿಗಳನ್ನೆಲ್ಲ ಉಲ್ಲಘಿಸಿ ಮುಂಬಡ್ತಿ ನೀಡಲಾಗಿದೆ ಎಂದು ತನಿಖಾ ತಂಡ ವಿಷಯ ಪತ್ತೆ ಮಾಡಿತ್ತು. ಇದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರೆಗೂ ತಲುಪಿತ್ತು. ಈಚೆಗೆ ಇವರಿಂದ ಬಂದಿರುವ ಸೂಚನೆಯಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಎಲ್ಲಾ ಮುಂಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಿ ಆದೇಶಿಸಿದ್ದಾರೆ.
ಇದರಿಂದಾಗಿ ಸಹಾಯಕ ಆಯುಕ್ತರು, ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವೆಡೆ ಕೆಲಸದಲ್ಲಿದ್ದ ನೂರಕ್ಕೂ ಹೆಚ್ಚು ಮುಂಬಡ್ತಿ ಹೊಂದಿದಂತಹ ಸಿಬ್ಬಂದಿ ಮತ್ತೆ ಯಥಾಸ್ಥಿತಿಯಾಗಿ ತಮ್ಮ ಹಳೆಯ ಕೆಲಸಗಳಿಗೆ ಮರಳುವಂತಾಗಿದೆ.ಕೆಸಿಎಸ್‌ಆರ್ ಸೇವಾ ನಿಯಮಗಳ ಉಲ್ಲಂಘನೆ, ಜೇಷ್ಠತಾ ಪಟ್ಟಿ ಸರಿಯಗಲ್ಲವೆಂಬ ಲೆಕ್ಕ ಪರಿಶೋಧಕರ ವರದಿಯನನಾಧರಿಸಿ ಮುಂಬಡ್ತಿ ವಾಪಸ್ ಪಡೆಯಲಾಗಿದೆ. ಶೀಘ್ರದಲ್ಲೇ ಜೇಷ್ಠತೆ, ಸೇವಾ ನಿಯಮಗಳನ್ನೆಲ್ಲ ಪಾಲಿಸಿ ಹೊಸ ಮುಂಬಡ್ತಿ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮುಂಬಡ್ತಿ ಮರಳಿ ಪಡೆದು ಇದೀಗ ಜೇಷ್ಠತೆ ಸೇರಿದಂತೆ ಹಲವು ಮಾನದಂಡಗಳನ್ನೆಲ್ಲ ಪರಿಗಣಿಸಿ ಹೊಸ ಮುಂಬಡ್ತಿ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಿದ್ದು ಆಕ್ಷೇಪಣೆಗಳನ್ನು ಕರೆದಿದ್ದೇವೆ. ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅವುಗಳನ್ನೆಲ್ಲ ಕೂಲಂಕುಷವಾಗಿ ಪರಿಗಣಿಸಿಯೇ ಮುಂಬಡ್ತಿ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.