ಕನ್ನಡಪ್ರಭ ವಾರ್ತೆ ಸೊರಬ
ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ಅನ್ಯಕೋಮಿನ ಗುಂಪೊಂದು ಮಹಿಳೆಯನ್ನು ದೂಡಿ, ಎಳೆದಾಡಿದ್ದಲ್ಲದೇ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಬಳಿಯಿದ್ದ ಮಗನ ಮೇಲೆ ಹಲ್ಲೆ ನಡೆಸಿದೆ. ಅಲ್ಲದೇ, ಬಿಡಿಸಲು ಬಂದ ಹಲವರ ಮೇಲೆ ದಾಳಿ ಮಾಡಿದ ಘಟನೆ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸೊರಬ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಶುಕ್ರವಾರ ರಾತ್ರಿ ತಲವಾರ್, ದೊಣ್ಣೆಗಳನ್ನು ಇಟ್ಟುಕೊಂಡು ತಾಲೂಕಿನ ಉಳವಿ ಹೋಬಳಿಯ ಕಣ್ಣೂರು ಗ್ರಾಮದ ನೇತ್ರಾವತಿ ಕೋಂ ಈಶ್ವರಪ್ಪ ಅವರ ಮನೆಗೆ ಉಳವಿ ಗ್ರಾಮದ ಹಜರತ್ ಆಲಿ (ಚಿಕನ್ ಅಂಗಡಿ) ವಾಜಿರ್ ಸಾಬ್ ಎಂಬವರ ಮಗ ಸದ್ದಾಂ ಮತ್ತು ಇತರರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲದೇ, ನೇತ್ರಾವತಿ ಅವರನ್ನು ಹಿಡಿದೆಳೆದು, ಕೆಡವಿ ಮಾನಕ್ಕೆ ಕುಂದುಂಟು ಮಾಡಿದ್ದಾರೆ ಎಂದು ಸೊರಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಘಟನೆಗೆ ಕಾರಣ:ಕಣ್ಣೂರು ನಿವಾಸಿ ನೇತ್ರಾವತಿ ಪುತ್ರ ಶಶಾಂಕ್ ಮತ್ತು ಅನ್ಯಕೋಮಿನ ಮೂವರು ಯುವಕರ ನಡುವೆ ವೈಯಕ್ತಿಕ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಇದೇ ಕಾರಣಕ್ಕೆ ಸದ್ದಾಂ ಎಂಬಾತ 2 ಬೈಕ್, 1 ಸ್ಯಾಂಟ್ರೋ ಮತ್ತು 3 ಓಮಿನಿ ವಾಹನಗಳಲ್ಲಿ ಸುಮಾರು 30 ಜನರೊಂದಿಗೆ ಗುಂಪು ಕಟ್ಟಿಕೊಂಡು ಮನೆಗೆ ನುಗ್ಗಿದ್ದಾನೆ. ಈ ಸಂದರ್ಭ ಶಶಾಂಕ್ ಮನೆಯಲ್ಲಿ ಇರದ ಕಾರಣ ಕುರ್ಚಿ, ಟೇಬಲ್‌ಗಳನ್ನು ಒಡೆದು ಹಾಕಿ, ಮಗನನ್ನು ಕೊಂದೇ ತೀರುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಗ್ರಾಮದ ಬಸವಣ್ಣ ದೇವಸ್ಥಾನ ಹತ್ತಿರ ಕುಳಿತಿದ್ದ ಶಶಾಂಕ್‌ಗೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಈ ಸಮಯದಲ್ಲಿ ನಡೆದ ಗಲಾಟೆ ಬಿಡಿಸಲು ಬಂದ ಗ್ರಾಮದ ನಿವಾಸಿಗಳಿಗೂ ದೊಣ್ಣೆಯಿಂದ ಹಲ್ಲೆ ನಡೆಸಿ, ನೆಲಕ್ಕೆ ಬೀಳಿಸಿ, ಕಾಲಿನಿಂದ ತುಳಿದಿದ್ದಾರೆ. ಇದರಿಂದ ಕರಿಬಸಪ್ಪ ಬಿನ್ ರಂಗಪ್ಪ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಒಂಟಿಯಾಗಿ ಸಿಕ್ಕಲ್ಲಿ ಕೊಲ್ಲದೇ ಬಿಡುವುದಿಲ್ಲ ಎಂದೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ಶನಿವಾರ ಮಧ್ಯಾಹ್ನ ನೇತ್ರಾವತಿ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆ ನಡೆಸಿರುವ ಹಜರತ್ ಆಲಿ, ಸದ್ದಾಂ ಹಾಗೂ ಸಹಚರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.ದೂರು ನೀಡುವ ಸಂದರ್ಭದಲ್ಲಿ ಸೊರಬ ಪೋಲಿಸ್ ಠಾಣೆಗೆ ಕಣ್ಣೂರು, ಹುನವಳ್ಳಿ, ತಳೇಬೈಲು, ಎನ್. ಹೊಳೆಕಟ್ಟೆ, ಕಾನಳ್ಳಿ ಮತ್ತಿತರ ಸುತ್ತಮುತ್ತಲಿನ ಗ್ರಾಮಸ್ಥರು ಠಾಣೆಯಲ್ಲಿ ಜಮಾಯಿಸಿದ್ದರು.
- - - -೧೬ಕೆಪಿಸೊರಬ೦೩: ಗಾಯಗೊಂಡಿರುವ ಶಶಾಂಕ್.-೧೬ಕೆಪಿಸೊರಬ೦೪: ಘಟನೆಯಲ್ಲಿ ಗಾಯಗೊಂಡಿರುವ ಗ್ರಾಮಸ್ಥ.