ತಾಯಿ, ಮಗುವಿನ ಆರೈಕೆ ಕಾಳಜಿ ವಹಿಸಿ

KannadaprabhaNewsNetwork |  
Published : Mar 23, 2024, 01:06 AM IST
ಬಳ್ಳಾರಿಯ ಡಿಎನ್‍ಬಿ ಸಭಾಂಗಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕತೆಯ ಪ್ರಾಮುಖ್ಯತೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ ಬಾಬು ಮಾತನಾಡಿದರು.  | Kannada Prabha

ಸಾರಾಂಶ

ತಾಯಿ ಮತ್ತು ಮಗುವಿನ ಆರೋಗ್ಯ ತಪಾಸಣೆ, ಸಕಾಲದಲ್ಲಿ ಪೌಷ್ಟಿಕ ಆಹಾರ ಒದಗಿಸುವಿಕೆ, ವಾಸಮಾಡುವ ಮನೆ ಹಾಗೂ ಸುತ್ತಲಿನ ಪರಿಸರ ಶುಚಿಯಾಗಿಡುವ ಮೂಲಕ ಸ್ವಾಸ್ಥ್ಯ ಸಮಾಜ ಕಾಪಾಡುವ ಹೊಣೆಗಾರಿಕೆ ಎಲ್ಲರ ಜವಾಬ್ದಾರಿಯಾಗಿದೆ.

ಬಳ್ಳಾರಿ:

ತಾಯಿ ಮತ್ತು ಮಗುವಿನ ಆರೋಗ್ಯ ತಪಾಸಣೆ, ಸಕಾಲದಲ್ಲಿ ಪೌಷ್ಟಿಕ ಆಹಾರ ಒದಗಿಸುವಿಕೆ, ವಾಸಮಾಡುವ ಮನೆ ಹಾಗೂ ಸುತ್ತಲಿನ ಪರಿಸರ ಶುಚಿಯಾಗಿಡುವ ಮೂಲಕ ಸ್ವಾಸ್ಥ್ಯ ಸಮಾಜ ಕಾಪಾಡುವ ಹೊಣೆಗಾರಿಕೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಯು.ಟಿ. ವಿಜಯ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಆಶ್ರಯದಲ್ಲಿ ನಗರದ ಡಿಎನ್‍ಬಿ ಹಾಲ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕತೆಯ ಪ್ರಾಮುಖ್ಯತೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಲಾಗುತ್ತದೆ. ಜತೆಗೆ ಗರ್ಭಿಣಿ ತಾಯಂದಿರು ಹಾಗೂ ನವಜಾತ ಶಿಶುಗಳಿಗೆ, ಯಾವುದೇ ತೊಂದರೆ ಕಂಡು ಬಂದರೆ ಕುಟುಂಬದ ಸದಸ್ಯರು ತಮ್ಮ ಜವಾಬ್ದಾರಿ ನಿಭಾಯಿಸಲು ಮುಂದೆ ಬರಬೇಕು ಎಂದು ತಿಳಿಸಿದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶಬಾಬು ಮಾತನಾಡಿ, ಕ್ಷೇತ್ರಮಟ್ಟದಲ್ಲಿ ಮನೆ ಭೇಟಿ ಮೂಲಕ ತಾಯಿ ಮಗುವಿನ ಕಾಳಜಿ ಹಾಗೂ ಗರ್ಭಿಣಿಯೆಂದು ತಿಳಿದ ದಿನದಿಂದ ಸಕಾಲದಲ್ಲಿ ತಾಯಿ ಕಾರ್ಡ್ ಪಡೆಯಬೇಕು. ಟಿಡಿ ಚುಚ್ಚುಮದ್ದು, ಕನಿಷ್ಠ 180 ಕಬ್ಬಿಣಾಂಶ ಮಾತ್ರೆ ಸೇವನೆ, ಒಂದು ಬಾರಿ ತಪ್ಪದೆ ಸ್ಕ್ಯಾನಿಂಗ್, ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಲು ನಿರ್ಧಾರ, ಗಂಡಾಂತರ ಗರ್ಭಿಣಿಯಾಗಿದ್ದಲ್ಲಿ ವೈದ್ಯರು ನೀಡುವ ನಿರ್ದೇಶನ ತಪ್ಪದೆ ಪಾಲಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಮಗುವಿನ ಜನನದ ನಂತರ ಎಲ್ಲ ಚುಚ್ಚುಮದ್ದು ಹಾಕಿಸಬೇಕು. ಪ್ರಸ್ತುತ ಜಿಲ್ಲೆಯಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ತಾಯಿ ಮಗುವಿನ ಆರೈಕೆ ಮಾಡಲು ಕ್ರಮ ವಹಿಸಲಾಗಿದೆ. ಸ್ಥಳೀಯವಾಗಿ ದೊರಕುವ ತರಕಾರಿ, ಋತುಮಾನ ಅನುಗುಣವಾಗಿ ದೊರಕುವ ಹಣ್ಣು ನೀಡಲು ಪಾಲಕರು ಮುತುವರ್ಜಿವಹಿಸಬೇಕು ಎಂದು ವಿನಂತಿಸಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡಲಾಗುತ್ತಿದ್ದು, ತೀವ್ರ ರೀತಿಯ ತೊಂದರೆಗಳ ಪೂರ್ವದಲ್ಲಿ ಗರ್ಭಿಣಿ ಅಥವಾ ಮಗುವನ್ನು ಆಸ್ಪತ್ರೆಗೆ ಕರೆತನ್ನಿ ಎಂದು ಸಲಹೆ ನೀಡಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಹನುಮಂತಪ್ಪ, ಕೆಎಸ್‍ಸಿಎಸ್‍ಟಿಯ ಯೋಜನಾ ನಿರ್ದೇಶಕ ಡಾ. ಸೈಯದ್ ಸಮೀರ್, ಜಿಪಂ ಯೋಜನಾ ಅಧಿಕಾರಿ ಜಿ.ಎಲ್. ಬದಿ, ರಾಮಚಂದ್ರ ರೆಡ್ಡಿ, ಡಾ. ವೆಂಕಟೇಶ, ಡಾ. ಸುರೇಖಾ, ಡಾ. ವಿಶಾಲಾಕ್ಷಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ಆಶಾ ಮೇಲ್ವಿಚಾರಣಾಧಿಕಾರಿ ರಾಘವೇಂದ್ರ, ಬಿಎಚ್‍ಇಒ ಶಾಂತಮ್ಮ ಉಪ್ಪಾರ, ನೇತ್ರಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಪ್ರದೋಷ ಸಪ್ತರ್ಷಿ ಪೂಜೆ
ಪರಮೇಶ್ವರ್ ಸಿಎಂ ಆಗಲಿ: ಮಠಾಧೀಶರ ಒತ್ತಾಯ