ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡ ಮಾತೃಭಾಷೆಯ ನೆಲದಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಅನ್ಯಭಾಷೆಗಳ ಪ್ರಭಾವದ ಹಿನ್ನೆಲೆಯಲ್ಲೂ ಕನ್ನಡ ಭಾಷೆ ತನ್ನ ಮೂಲ ಸತ್ವ ಉಳಿದುಕೊಂಡಿದ್ದರ ಪರಿಣಾಮ ಮನುಷ್ಯನ ಸಾಧನೆಗೆ ಮಾತೃಭಾಷೆ ಬಹುದೊಡ್ಡ ಶಕ್ತಿಯಾಗಿದೆ ಎಂದು ಉಪನ್ಯಾಸಕ ಡಾ. ಚಂದ್ರಶೇಖರ ಕಾಳನ್ನವರ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿಂದು ನಡೆದ ಅಂತಾರಾಷ್ಟ್ರೀಯ ಮಾತೃಭಾಷೆ ದಿನದ ಅಂಗವಾಗಿ ಸಪ್ತಭಾಷೆಗಳ ಸಾಪ್ತಾಹಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಭಾಷೆಗಳ ಕುರಿತು ಸಪ್ತಾಹ ನಡೆಯುತ್ತಿರುವುದು ಇತರರಿಗೂ ಮಾದರಿಯಾಗಿದೆ. ಕನ್ನಡ ಸಹೋದರ ಭಾಷೆಗಳಾದ ತಮಿಳು, ತೆಲಗು, ಕೊಂಕಣಿ, ಮಲಿಯಾಳಿಯಂ, ಉರ್ದು, ಮರಾಠಿ, ತುಳು ಸೇರಿದಂತೆ ಇನ್ನೀತರ ಭಾಷೆಗಳ ಪದಗಳು ಜನಸಾಮಾನ್ಯರ ಬದುಕಿನಲ್ಲಿ ದಿನನಿತ್ಯ ಬಳಕೆಯಲ್ಲಿ ಸಹಜವಾಗಿ ಬೆಳೆದು ಬಂದಿರುವುದು ಕಾಣುತ್ತೇವೆ. ಮನುಷ್ಯನ ಸಾಧನೆಗೆ ಮತ್ತು ಸಾಮಾಜಿಕ ಜೀವನದ ಸಂವಹನಕ್ಕೆ ಮಾತೃಭಾಷೆ ಸಹಾಯಕಾರಿಯಾಗಿದೆ, ಮೀಮಾಂಸಕ ದಂಡಿ ಹೇಳಿದ ಹಾಗೆ ಭಾಷೆಯೆಂಬ ಬೆಳಕು ಇಲ್ಲದೆ ಹೋಗಿದ್ದರೆ ಜಗತ್ತು ಕತ್ತಲಾಗಿರುತ್ತಿತ್ತು ಎಂಬ ಮಾತು ಇಂದಿಗೂ ಪ್ರಸ್ತುತ, ಮಾತೃಭಾಷೆಯ ಬಳಕೆಯಿಂದ ಮನಸ್ಸು ಅರಳಿ ಮಾತೃತ್ವ ಮನೋಭಾವ ಬೆಳೆಯುತ್ತದೆ ಎಂದರು.ಲಂಬಾಣಿ ಭಾಷೆ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಶಿಲ್ಪಾ ನಾಯಕ ಮೊದಲ ದಿನ ಸಪ್ತಭಾಷೆಗಳ ಸಪ್ತಾಹದಲ್ಲಿ ನೀಡುತ್ತಾ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ವೈವಿದ್ಯತೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ವಿಶೇಷವಾಗಿ ಲಂಬಾಣಿ ಸಮುದಾಯ ಒಂದಾಗಿದ್ದು, ಹಬ್ಬಹರಿದಿನ ಆಚರಣೆ ಉಡುಗೆ ತೊಡುಗೆ ಉಟೋಪಚಾರ ಮುಂತಾದ ಭಾಷಿಕ ಸಾಂಸ್ಕೃತಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಲಂಬಾಣಿ ಸಮುದಾಯದ ವೈವಿದ್ಯತೆಗಳು ಬೆಳೆದು ಬಂದಿವೆ. ಸಾಂಸ್ಕೃತಿಕವಾಗಿ ಬಹುದೊಡ್ಡ ಶ್ರೀಮಂತಿಕೆಯನ್ನು ಸಮುದಾಯ ಪಡೆದುಕೊಂಡಿದೆ ಎಂದರು.
ಡಾ.ಕವಿತಾ ಮುತ್ತಪ್ಪ, ಪ್ರೊ.ಶಶಿಧರ ಪೂಜಾರ ಅವರು ಲಂಬಾಣಿ ಸಮುದಾಯದ ಸಂಸ್ಕೃತಿ ಕುರಿತು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚಾರ್ಯ ಪ್ರೊ.ಎಸ್.ಎನ್. ಪಟ್ಟಣಶೆಟ್ಟಿ ಬುಡಕಟ್ಟು ಜನಾಂಗದಲ್ಲಿ ಲಂಬಾಣಿ ಸಮುದಾಯ ವಿವಿಧತೆಯಲ್ಲಿ ಏಕತೆ ಹೊಂದಿದ್ದು, ಶ್ರಮಸಂಸ್ಕೃತಿಯಿಂದ ತಮ್ಮ ಸಾಧನೆಯ ಬದುಕನ್ನು ಗಟ್ಟಿಗೊಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಕನ್ನಡ ವಿಭಾಗದ ಉಪನ್ಯಾಸಕ ಪ್ರೊ.ಸಂಗಮೇಶ ಬ್ಯಾಳಿ ಪ್ರಾಸ್ತಾವಿಕ ನುಡಿ ಹೇಳಿ ಕನ್ನಡ ಮಾತೃಭಾಷಿಕ ಸಂಸ್ಕೃತಿ ಅನ್ಯಭಾಷೆಗಳ ಪರಿವಾರದವರಿಗೂ ಪರಿಚಯವಾಗು ದೃಷ್ಟಿಯಿಂದ ಮಹಾವಿದ್ಯಾಲಯದಲ್ಲಿ ಈ ಸಪ್ತಾಹ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾವ್ಯ ಅಕ್ಕಿ ಪ್ರಾರ್ಥಿಸಿದರು, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಸುನೀಲ ನಡಕಟ್ಟಿ ಸ್ವಾಗತಿಸಿದರು. ಪ್ರೊ.ಬಸವರಾಜ ನಾಯಕ ವಂದಿಸಿದರು, ಪ್ರೊ.ಮುತ್ತು ಬಡಿಗೇರ ನಿರೂಪಿಸಿದರು.ಅನಕ್ಷರಸ್ಥ ಕುಟುಂಬಳ ದತ್ತು:
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ಸ್ವಾತಿ ರಾಠೋಡ, ಅಶ್ವಿನಿ ನಾಯಕ, ಲಂಬಾಣಿ ಭಾಷಿಕ ಅನಕ್ಷರಸ್ಥ ಕುಟುಂಬಗಳನ್ನು ದತ್ತು ತೆಗೆದುಕೊಂಡು ಅವರಿಗೆ ಒಂದು ತಿಂಗಳ ಅವಧಿಯಲ್ಲಿ ಕನ್ನಡ ಅಕ್ಷರ ಅಭ್ಯಾಸ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.