ಬಸವರಾಜ ಹಿರೇಮಠ
ಧಾರವಾಡಬಿಆರ್ಟಿಎಸ್ ಯೋಜನೆಗೆ ಪರ್ಯಾಯವಾಗಿ ಹೊಸ ಹೊಸ ಯೋಜನೆ, ಯೋಚನೆಗಳು ಬರಲು ಹಲವು ಕಾರಣಗಳಿವೆ. ಈ ಯೋಜನೆ ಆರಂಭ ಶೂರತ್ವ ತೋರಿಸಿ ನಂತರದಲ್ಲಿ ತನ್ನ ವಿಫಲತೆ ತೋರಲು, ಈ ಯೋಜನೆ ಬಗ್ಗೆ ಸಾಮಾನ್ಯ ಜನರಿಗೆ ಕೋಪ ಬರಲು ತನ್ನದೇ ಆದ ಕಾರಣಗಳನ್ನು ಹೊಂದಿದೆ.
ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್, ಬಸ್ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಆಗಾಗ ಬಾಗಿಲು ತೆರೆಯದೇ ಇರುವುದು, ಅತಿಯಾದ ವೇಗವಾಗಿ ಚಲಿಸುವ ಕಾರಣ ಆಗಿರುವ ಅಪಘಾತ, ಸಾವು-ನೋವು ಸೇರಿದಂತೆ ಹೀಗೆ ಯೋಜನೆ ವಿರೋಧಿಸಲು ಹಲವು ಕಾರಣಗಳ ಜತೆಗೆ ಬಿಆರ್‌ಟಿಎಸ್ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿರುವುದು ಅವಳಿ ನಗರದ ಜನತೆಗೆ ಬೇಸರ ಮೂಡಿಸಿದೆ.ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಚಿಗರಿ ಬಸ್‌ಗಳಿಗೆ ಮಾತ್ರ ಸಂಚಾರ ಎಂದು ನಿಯಮ ರೂಪಿಸಿ, ಆಕಸ್ಮಿಕವಾಗಿ ಕಾರು, ಜೀಪು, ಬೈಕ್‌ಗಳು ಹೋದರೂ ದಂಡ ಹಾಕಿದ ಬಿಆರ್‌ಟಿಎಸ್ ಸಂಸ್ಥೆ ನೀತಿ ಸರಿಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬಿಆರ್‌ಟಿಎಸ್‌ನ ಚಿಗರಿ ಬಸ್‌ಗಳಿಗೆ ಮಾತ್ರ ಸೀಮಿತವಾಗಿದ್ದರೂ ತನ್ನ ಕಾರಿಡಾರ್‌ನಲ್ಲಿ ಪ್ರಭಾವಿಗಳ ವಾಹನ ಸಂಚರಿಸಲು ಅವಕಾಶ ಕೊಟ್ಟಿದ್ದು ಏತಕ್ಕೆ? ಎಂಬ ಪ್ರಶ್ನೆ ಜನರದ್ದು.
ಕಾರಿಡಾರ್‌ನಲ್ಲಿ ಮೊದ ಮೊದಲು ಚಿಗರಿ ಬಸ್‌ಗಳು ರಾಜನಂತೆ ಓಡಾಡಿದವು. ರೋಗಿಗಳನ್ನು ಹೊತ್ತೊಯ್ಯುವ ಆ್ಯಂಬುಲೆನ್ಸ್ ಈ ಕಾರಿಡಾರ್‌ನಲ್ಲಿ ಸಂಚರಿಸಿದಾಗ ಯೋಜನೆ ಮಾಡಿದ್ದು ಸಾರ್ಥಕ ಎನ್ನುವ ಭಾವ ಮೂಡಿತು. ಹುಬ್ಬಳ್ಳಿಯಿಂದ ಧಾರವಾಡ, ಧಾರವಾಡದಿಂದ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ಹೋಗಿ ಬರಲು ತೀವ್ರ ಸಮಯ ಹಿಡಿಯುತ್ತಿತ್ತು. ಇದೀಗ ಕಾರಿಡಾರ್‌ನಲ್ಲಿ ಅರ್ಧ ಗಂಟೆಯೊಳಗೆ ಆಸ್ಪತ್ರೆ ತಲುಪುವ ಕಾರಣ ರೋಗಿಗಳ ಜೀವ ಉಳಿಯಬಹುದು ಎಂದು ಆ್ಯಂಬುಲೆನ್ಸ್ ಸಂಚಾರ ಯಾರಿಗೂ ಪ್ರಶ್ನೆಗೆ ಬರಲಿಲ್ಲ.ಕಾರಿಡಾರ್‌ನಲ್ಲಿ ಪ್ರಭಾವಿಗಳ ಸಂಚಾರ:
ಬೇಸರದ ಸಂಗತಿ ಏನೆಂದರೆ, ಮಿಶ್ರ ಪಥದಲ್ಲಿಯೇ ಸಂಚರಿಸುತ್ತಿದ್ದ ಶಾಸಕರು, ಸಚಿವರು ಸೇರಿದಂತೆ ರಾಜಕಾರಣಿಗಳ ಕಾರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಹೀಗೆ ಸರ್ಕಾರಿ ಅಧಿಕಾರಿಗಳ ಕಾರುಗಳು ನಿಧಾನವಾಗಿ ಬಿಆರ್‌ಟಿಎಸ್ ಕಾರಿಡಾರನತ್ತ ಹೊರಳಿ ಈಗ ರಾಜಾರೋಷವಾಗಿ ಸಂಚರಿಸುತ್ತಿವೆ. ಬರ ಬರುತ್ತಾ ಶಾಸಕ, ಸಚಿವರ ಹಿಂಬಾಲಕರು ಸಹ ತಮ್ಮ ಕಾರುಗಳನ್ನು ಇದೇ ಕಾರಿಡಾರ್‌ನಲ್ಲಿ ಒಯ್ಯುತ್ತಿದ್ದು, ಯಾರೂ ಕೇಳದ ಸ್ಥಿತಿ ಉಂಟಾಗಿದೆ. ಸಾಮಾನ್ಯ ಜನರು ಕೆಲವೊಮ್ಮೆ ಜರೂರ ಕೆಲಸದ ಸಂದರ್ಭದಲ್ಲಿ ತಮ್ಮ ವಾಹನಗಳನ್ನು ಈ ಕಾರಿಡಾರ್‌ನಲ್ಲಿ ಓಡಿಸಿದರೆ ದಂಡ ಹಾಕುವ ಬಿಆರ್‌ಟಿಎಸ್ ಸಂಸ್ಥೆ ರಾಜಕಾರಣಿಗಳು, ಅಧಿಕಾರಿಗಳಿಗೆ ಏತಕ್ಕೆ ಅವಕಾಶ ನೀಡಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನದಲ್ಲಿದೆ. ಆದರೆ, ಇಲ್ಲಿ ಪ್ರಜೆಗಳೇ ರಾಜ ಎನ್ನುವುದು ಬರೀ ಬಾಯಿ ಮಾತಿಗೆ ಮಾತ್ರ ಸೀಮಿತವಾಗಿದೆ. ಪ್ರಜೆಗಳನ್ನು ಹತ್ತಿಕ್ಕಿ ರಾಜಕಾರಣಿಗಳು ಹಾಗೂ ಆಡಳಿತ ವರ್ಗವು ಮೆರೆಯುತ್ತಿದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದರಲ್ಲೂ ಅವಳಿ ನಗರದಲ್ಲಿ ಜನರ ಹಲವು ಪ್ರಶ್ನೆಗಳಿಗೆ ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಉತ್ತರವಿಲ್ಲ. ₹ 1200 ಕೋಟಿ ವೆಚ್ಚ ಮಾಡಿ ಅವೈಜ್ಞಾನಿಕ ಯೋಜನೆ ಮಾಡಿ ಇದೀಗ ಅದನ್ನು ಕೈ ಬಿಟ್ಟು ಮತ್ತೆ ಕೋಟಿ ಕೋಟಿ ವೆಚ್ಚದಲ್ಲಿ ಮತ್ತೊಂದು ಯೋಜನೆ ತರಲು ಹೊರಟಿದ್ದಾರೆ. ಬಿಆರ್‌ಟಿಎಸ್ ಕಾರಿಡಾರಿನಲ್ಲಿ ಹೊರಟಿಸುವ ರಾಜಕಾರಣಿಗಳು, ಅಧಿಕಾರಿಗಳು ಮಿಶ್ರ ಪಥದಲ್ಲಿ ಒಂದೇ ಒಂದು ದಿನ ಸಂಚರಿಸಲಿ. ಸಾಮಾನ್ಯ ಜನರ ಕಷ್ಟಗಳು ಅವರಿಗೆ ತಿಳಿಯುತ್ತದೆ ಎಂದು ನಿತ್ಯ ಧಾರವಾಡದಿಂದ ಹುಬ್ಬಳ್ಳಿಗೆ ಬೈಕ್ ಮೇಲೆ ನೌಕರಿ ಹೋಗುವ ಸಂತೋಷ ಕರೋಲೆ ಎಂಬುವರು ಬೇಸರದ ಮಾತು ಹೇಳಿದರು.
ಬಿಆರ್‌ಟಿಎಸ್ ಸಂಸ್ಥೆಗೆ ಈಗಲೂ ಕಾಲ ಮಿಂಚಿಲ್ಲ. ಮೊದಲಿನಂತೆ ಬರೀ ಚಿಗರಿ ಬಸ್‌ಗಳಿಗೆ ಮಾತ್ರ ಕಾರಿಡಾರ್ ಸೀಮಿತ ಮಾಡಿ, ಉಳಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮೂಲಕ ಮೊದಲಿದ್ದ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂಬುದು ಜನರ ಆಶಯವಾಗಿದೆ.-----