ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವಂತೆ ಮುಂದಿನ ಲೋಕಸಭಾ ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.ಸೋಮವಾರ ತಾಲೂಕಿನ ವಳಲಹಳ್ಳಿ ಗ್ರಾ.ಪಂ. ಕಚೇರಿಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಕಾಫಿ ಬೆಳೆಗಾರರು ಐಪಿ ಸೆಟ್‌ಗಾಗಿ ವಿದ್ಯುತ್ ಉಪಯೋಗಿಸಲಿ ಬಿಡಲಿ ಪ್ರತಿತಿಂಗಳು ೧೩ ಸಾವಿರ ಬಿಲ್ ಕಟ್ಟಬೇಕು. ವರ್ಷಕ್ಕೆ ೧.೫೬ ಲಕ್ಷ ಕಟ್ಟಬೇಕಿದೆ. ಇದು ಅನ್ಯಾಯವಲ್ಲವ. ಅಡಿಕೆ ಬೆಳೆಗಾರರಿಗೆ ಪುಕ್ಕಟೆ ವಿದ್ಯುತ್ ನೀಡುವ ಸರ್ಕಾರ, ಕಾಫಿ ಬೆಳೆಗಾರಿಗೆ ಏಕೆ ನೀಡುವುದಿಲ್ಲ. ಇದು ಅನ್ಯಾಯ. ಜನವರಿ-ಫೆಬ್ರವರಿ ತಿಂಗಳಿನಲ್ಲಿ ಮಾತ್ರ ಐಪಿ ಸೆಟ್ ಉಪಯೋಗಿಸಲಾಗುತ್ತಿದೆ. ಆದರೆ, ವರ್ಷಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕಿದೆ. ರಾಜ್ಯಸರ್ಕಾರದ ಈ ಮಲತಾಯಿ ಧೋರಣೆ ತಪ್ಪಬೇಕಿದೆ.
ಲೋಕಸಭೆಯಲ್ಲಿ ದನಿ ಎತ್ತುವೆ: ಕಾಫಿ ಬೆಳೆಗಾರರ ಸಮಸ್ಯೆಗಳ ನಿವಾರಣೆಗಾಗಿ ನನ್ನಷ್ಟು ಹೋರಾಟ ನಡೆಸಿರುವುದು. ಇತಿಹಾಸದಲ್ಲಿ ಮತ್ಯಾರು ನಡೆಸಿಲ್ಲ. ಇತರೆ ಯಾವುದೆ ಬೆಳೆಗಳಿಗೂ ತೊಂದರೆಯಾದರೂ ತಕ್ಷಣವೆ ಸ್ಪಂದಿಸುವ ಸರ್ಕಾರ ಕಾಫಿ ಬೆಳೆಗಾರರ ಬಗ್ಗೆ ಅಸಡ್ಡೆ ಭಾವನೆ ಹೊಂದಿದೆ. ಕಾಫಿ ಬೆಳೆಗಾರರು ಸರ್ಕಾರಕ್ಕೆ ೧೩ ಸಾವಿರ ಕೋಟಿ ಆದಾಯ ತಂದುಕೊಡುತ್ತಿದ್ದಾರೆ. ಆದರೂ, ಸರ್ಕಾರಕ್ಕೆ ಕಾಫಿ ಬೆಳೆಗಾರರ ಬಗ್ಗೆ ಕರುಣೆ ಇಲ್ಲದಾಗಿದೆ. ಕಾಫಿ ಬೆಳೆಗಾರರಿಗೆ ಯಾವುದೆ ಉಪಯೋಗವಿಲ್ಲದ ಕಾಫಿ ಮಂಡಳಿಯನ್ನು ವಿಸರ್ಜಿಸುವ ಅಗತ್ಯತೆ ಇದೆ. ಕಾಫಿ ಬೆಳೆಗಾರರ ಈ ಸಮಸ್ಯೆಯನ್ನು ಲೋಕಸಭೆಯಲ್ಲಿ ಅನಾವರಣಗೊಳಿಸಲಾಗುವುದು ಎಂದರು.ರಸ್ತೆಗೆ ಹಣವಿಲ್ಲ: ಸಂಸದರ ಅನುದಾನದಲ್ಲಿ ರಸ್ತೆಗೆ ಹಣ ನೀಡುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಮಾತನಾಡಿದ ಸಂಸದರು, ಲೋಕಸಭಾ ವ್ಯಾಪ್ತಿಗೆ ೧೦ ತಾಲೂಕುಗಳು ಬರುತ್ತಿದ್ದು ಪ್ರತಿ ತಾಲೂಕಿಗೆ ಸಂಸದರ ಅನುದಾನವಾಗಿ ೫೦ ಲಕ್ಷ ಹಂಚಲು ಮಾತ್ರ ಸಾಧ್ಯ. ಆದರೆ, ಒಂದು ಕಿ.ಮಿ ರಸ್ತೆ ಮಾಡಲು ೧.೫ ಕೋಟಿ ಅಗತ್ಯವಿದೆ. ಆದ್ದರಿಂದ, ಸಂಸದರ ಅನುದಾನದಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ ಬದಲಿ ಅನುದಾನದಲ್ಲಿ ರಸ್ತೆ ಮಾಡೋಣ ಎಂದರು.
ಎತ್ತಿನಹೊಳೆ ಯೋಜನೆಯಿಂದ ಹೆಚ್ಚು ಲಾಭ: ತಾಲೂಕಿನಿಂದ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಸಾಗಿಸುವ ಎತ್ತಿನಹೊಳೆಯಿಂದ ಹೆಚ್ಚು ಲಾಭವಾಗಿರುವುದು ಸಕಲೇಶಪುರ ತಾಲೂಕಿಗೆ. ಹೆತ್ತೂರು ಹೋಬಳಿಯ ಹಲವು ಕುಗ್ಗಾಡು ಗ್ರಾಮಗಳು ಸಿಮೆಂಟ್ ರಸ್ತೆಕಾಣಲು ಎತ್ತಿನಹೊಳೆ ಯೋಜನೆ ಸಹಾಯಕವಾಗಿದೆ. ಆದರೂ, ಕೆಲವು ರಸ್ತೆಗಳು ಇನ್ನೂ ಬಾಕಿ ಉಳಿದಿವೆ. ಮುಂದಿನ ದಿನಗಳಲ್ಲಿ ಈ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಎತ್ತಿನಹೊಳೆ ಮೂಲದಲ್ಲೆ ಅಭಿವೃದ್ಧಿ ಕಾಮಗಾರಿಗಳಾಗದೆ ಜನರುತೊಂದರೆ ಅನುಭವಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿತು.ಮೊಬೈಲ್ ಟವರ್: ಚಿನ್ನಹಳ್ಳಿ ಗ್ರಾಮದಲ್ಲಿ ೧೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಟವರ್ ತನ್ನಕಾರ್ಯವನ್ನೇ ಸ್ಥಗಿತಗೊಳಿಸಿದೆ. ಇದರಿಂದಾಗಿ ಬಿಎಸ್‌ಎನ್‌ಎಲ್ ಗ್ರಾಹಕರು ಇಲ್ಲದಾಗಿದ್ದಾರೆ. ಆದ್ದರಿಂದ, ಮೊದಲಿಗೆ ಸ್ಥಗಿತಗೊಂಡಿರುವ ಮೊಬೈಲ್ ಟವರ್ ದುರಸ್ತಿಪಡಿಸುವಂತೆ ಆಗ್ರಹಿಸಿದರು. ಇದೇ ವೇಳೆ ಪಶ್ಚಿಮಘಟ್ಟವನ್ನು ಬಹುಭಾಗ ಹೊಂದಿರುವ ಸಕಲೇಶಪುರ ತಾಲೂಕನ್ನುಗುಡ್ಡಗಾಡು ಪ್ರದೇಶಎಂದು ಪರಿಗಣಿಸಿ ಹೊಸದಾಗಿ ೧೧, ೫ಜಿ ಟವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಲಾಯಿತು.ಶಾಸಕರ ಸಹಕಾರವಿಲ್ಲ: ಕಾಡಾನೆ, ಸೆಕ್ಷನ್ ೪, ರೈಲ್ವೆ ಸಮಸ್ಯೆ ಪರಿಹಾರಕ್ಕಾಗಿ ನಡೆಸುವ ಯಾವುದೆ ಸಭೆಗೂ ಶಾಸಕರು ಬರುವುದೆ ಇಲ್ಲ. ಹಾಗಾಗಿ ತಾಲೂಕಿನ ಸಮಸ್ಯೆಗಳು ಬಗೆಹರಿಯದಾಗಿದೆ ಎಂದರು. ಶಾಸಕ ಮಂಜಣ್ಣನ ಬಗ್ಗೆ ನನಗೆ ಯಾವುದೇ ವ್ಯಯಕ್ತಿಕ ದ್ವೇಷವಿಲ್ಲ ಎಂದರು.
ಕ್ರಮಕ್ಕೆಆಗ್ರಹ: ಸರ್ಕಾರದ ಆದೇಶ ಮುಂದಿಟ್ಟು ಸಾರ್ವಜನಿಕರಿಗೆ ತೀವ್ರ ರೀತಿಯಲ್ಲಿ ತೊಂದರೆ ನೀಡುತ್ತಿರುವ ಯಸಳೂರು ವಲಯ ಅರಣ್ಯಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಅಧಿಕಾರಿ ಹಣ ಸ್ವೀಕರಿಸಿರುವ ಆಡಿಯೋ ವೈರಲ್ ಆಗಿದ್ದರೂ ಇದುವರೆಗೆ ಕ್ರಮಕೈಗೊಂಡಿಲ್ಲ ಎಂಬ ಆರೋಪ ದಟ್ಟವಾಗಿ ಕೇಳಿ ಬಂದಿತು.ಇದೇ ಮೊದಲು: ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ ೩೫೭ ಪಂಚಾಯತಿಗಳಿದ್ದು ೪೯೮೦ ಹಳ್ಳಿಗಳನ್ನು ಒಳಪಟ್ಟಿದೆ. ಈಗಾಗಲೇ ಲೋಕಸಭಾಕ್ಷೇತ್ರದ ೨೫೦ಕ್ಕೂ ಅಧಿಕ ಗ್ರಾಪಂಗಳ ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಲಾಗಿದೆ. ಇನ್ನುಳಿದ ಗ್ರಾಪಂ ಮಟ್ಟದ ಸಭೆಯನ್ನುಇನ್ನೂಆರು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು ಸಂಸದರೊಬ್ಬರುಎಲ್ಲಾ ಗ್ರಾಪಂಗಳ ಮಟ್ಟದಲ್ಲಿ ಸಭೆ ನಡೆಸಿರುವುದು ಇದೆ ಮೊದಲು.
ಕ್ಷಮೆ ಕೇಳಿದ ಸಂಸದ: ವಳಲಹಳ್ಳಿ ಗ್ರಾಪಂ ಮಟ್ಟದ ಕುಂದುಕೊರತೆ ಸಭೆಯನ್ನು ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿತ್ತು. ಆದರೆ, ಮಧ್ಯಾಹ್ನ ೨ ಗಂಟೆಗೆ ಆಗಮಿಸಿದ ಸಂಸದ ಪ್ರಜ್ವಲ್ ರೇವಣ್ಣ ಸಭೆ ಆರಂಭದಲ್ಲಿ ವಿಳಂಬವಾಗಿ ಆಗಮಿಸಿದ್ದಕ್ಕಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಕ್ಷಮೆ ಕೋರಿದರು.ಸಭೆಯಲ್ಲಿ ವಳಲಹಳ್ಳಿ ಗ್ರಾಪಂ ಅಧ್ಯಕ್ಷೆ ಶೀಲಾ ಮಹೇಶ್, ತಾಪಂ ಇಒ ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಸಹಾಯಕ ನಿರ್ದೇಶಕ ಹರೀಶ್, ಇತರರು ಉಪಸ್ಥಿತರಿದ್ದರು.