ಕನ್ನಡಪ್ರಭ ವಾರ್ತೆ ಬೆಳಗಾವಿ
ಚಿಕ್ಕೋಡಿ ಕ್ಷೇತ್ರದ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಬೆಳಗಾವಿಯಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ನಗರದ ಕಾಂಗ್ರೆಸ್ ಭವನದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕರ್ತರು, ಅಭಿಮಾನಿಗಳು ಅವರ ಪರ ಘೋಷಣೆ ಕೂಗಿದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಪ್ರಿಯಾಂಕಾ ಆಗಮಿಸುತ್ತಿದ್ದಂತೆಯೇ, ಹೂಮಳೆ ಗೈದರು. ಜಿಲ್ಲಾ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಕಿಸಾನ್ ಕಾಂಗ್ರೆಸ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಿಯಾಂಕಾ ಜಾರಕಿಹೊಳಿ, ಅಧಿವೇಶನದ ವೇಳೆ ದೊಡ್ಡ ದೊಡ್ಡ ಹಿರಿಯರ ನಡುವೆ ನಾನು ಅಧಿವೇಶನದಲ್ಲಿ ಭಾಗಿಯಾಗಿವುರುವುದು ಸಂತಸ ತಂದಿದೆ. ಅಲ್ಲದೇ ಸದ್ಯ ನನ್ನ ಮೇಲೆ ಜವಾಬ್ದಾರಿಗಳು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತೇನೆ ಎಂದರು.ದಿ. ಬಿ.ಶಂಕರಾನಂದಜೀ ಅವರು ಸಂಸದರಾಗಿದ್ದ ಕ್ಷೇತ್ರದಲ್ಲಿ ನನ್ನನ್ನು ಸಂಸದೆಯಾನ್ನಾಗಿ ಆಯ್ಕೆ ಮಾಡಿ ಕ್ಷೇತ್ರದ ಜನತೆ ನನಗೆ ಇನ್ನೂ ಹೆಚ್ಚು ಜವಾಬ್ದಾರಿಗಳನ್ನು ನೀಡಿದ್ದಾರೆ. ಜನಸಾಮಾನ್ಯರು ಹಾಗೂ ಬಡವರ ಸೇವೆ, ಉದ್ಧಾರಕ್ಕಾಗಿ ಸದಾ ಮುನ್ನುಗ್ಗಿ ನಿಲ್ಲುವ ಕಾರ್ಯ ಮಾಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ರಾಮಣ್ಣ ಗುಳ್ಳಿ, ಮುಖಂಡರಾದ ವಿವೇಕ್ ಜತ್ತಿ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್ , ರಾಜೇಂದ್ರ ಪಾಟೀಲ್, ಸಿದ್ದಿಕ ಅಂಕಲಗಿ, ಬಸವರಾಜ ಶೇಂಗಾವಿ, ಅರ್ಜುನ ನಾಯಕವಾಡಿ, ಬಾಳೇಶ ದಾಸನಹಟ್ಟಿ, ಜಂಗ್ಲಿಸಾಬ ನಾಯಿಕ, ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಸೇರಿದಂತೆ ಅಪಾರ ಸಂಖ್ಯೆ ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.