ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಜಯಪುರ ಮೀಸಲು ಸಂಸದ, ಕೇಂದ್ರದ ಮಾಜಿ ಸಚಿವ ರಮೇಶ ಜಿಗಜಿಣಗಿ ಅವರು ತೀವ್ರ ಉಸಿರಾಟದ ತೊಂದರೆಯಿಂದ ಏಕಾಏಕಿ ಅಸ್ವಸ್ಥಗೊಂಡ ಘಟನೆ ಬಾಗಲಕೋಟೆ ಸಮೀಪ ಭಾನುವಾರ ನಡೆದಿದೆ. ತಕ್ಷಣವೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದಾರೆ.ವಿಜಯಪುರದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತಿದ್ದ ಸಂಸದ ಜಿಗಜಿಣಗಿ ಅವರಿಗೆ ದಾರಿಮಧ್ಯೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಂಸದ ಜಿಗಜಿಣಗಿ ಅವರಿಗೆ ಒಂದು ವಾರದಿಂದ ಉಸಿರಾಟದ ತೊಂದರೆ(ನ್ಯೂಮೋನಿಯಾ) ಸಮಸ್ಯೆ ಇತ್ತೆಂದು ಹೇಳಲಾಗುತ್ತಿದ್ದು, ಕುಟುಂಬದ ಸದಸ್ಯರು ದೆಹಲಿಗೆ ತೆರಳಬೇಡಿ ಎಂದು ಸಲಹೆ ನೀಡಿದ್ದರಂತೆ.
ಸಂಪೂರ್ಣ ಚೇತರಿಕೆ:ಬಿವಿವಿ ಸಂಘದ ಅಧ್ಯಕ್ಷ, ಕುಮಾರೇಶ್ವರ ಆಸ್ಪತ್ರೆಯ ಅಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂಸದ ಜಿಗಜಿಣಗಿ ಅವರ ಆರೋಗ್ಯ ವಿಚಾರಿಸಿ ಸೂಕ್ತ ವೈದ್ಯಕೀಯ ನೆರವು ಕಲ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಆಕ್ಸಿಜನ್ ನೀಡಲಾಗಿದೆ. ಸಿಟಿ ಸ್ಕ್ಯಾನ್ ಸೇರಿದಂತೆ ಹೃದಯ ಸಂಬಂಧಿಸಿದ ಎಲ್ಲ ಪರೀಕ್ಷೆ ಮಾಡಲಾಗಿದೆ. ಆಸ್ಪತ್ರೆಯ ನುರಿತ ವೈದ್ಯಕೀಯ ತಂಡದಿಂದ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ನಾನು ಸಹ ಅವರ ಜೊತೆ ಮಾತನಾಡಿದ್ದೇನೆ. ಆತಂಕಪಡುವ ಅಗತ್ಯವಿಲ್ಲ, ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದರು.ಹೃದಯಾಘಾತವಲ್ಲ ವೈದ್ಯರ ಸ್ಪಷ್ಟನೆ:
ಸಂಸದ ಜಿಗಜಿಣಗಿ ಅವರಿಗೆ ಹೃದಯಾಘಾತವಾಗಿಲ್ಲ. ಉಸಿರಾಟದಲ್ಲಿನ ಏರುಪೇರಿನಿಂದ ಅಸ್ಪಸ್ಥರಾಗಿದ್ದಾರೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯ ಡಾ.ಸುಭಾಸ ಪಾಟೀಲ ಹೇಳಿದ್ದಾರೆ. ಹೃದಯಬಡಿತದಲ್ಲಿ ಏರುಪೇರಾಗಿದ್ದು, ಪುಪ್ಪುಸದಲ್ಲಿ ನೀರಿನ ಅಂಶ ಇದ್ದಿದ್ದರಿಂದ ಉಸಿರಾಟದ ತೊಂದರೆಯಾಗಿದೆ. ಅವರಿಗೆ ಮೊದಲಿನಿಂದಲೂ ಉಸಿರಾಟದ ಸಮಸ್ಯೆ ಇದೆ. ಸದ್ಯ ಅವರಿಗೆ ತೊಂದರೆ ಇಲ್ಲ ಎಂದು ಹೇಳಿದ್ದಾರೆ.ಗಣ್ಯರಿಂದ ಆರೋಗ್ಯ ವಿಚಾರಣೆ:
ಜಿಗಜಿಣಗಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಗಣ್ಯರ ದಂಡು ಆಸ್ಪತ್ರೆಗೆ ಬರುತ್ತಿದೆ. ಸಂಸದ ಪಿ.ಸಿ.ಗದ್ದಿಗೌಡರ, ಯಲ್ಲಪ್ಪ ಬೆಂಡಿಗೇರಿ ಸೇರಿದಂತೆ ಅನೇಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.