ತಹಸೀಲ್ದಾರ್‌ಗೆ ಚಳಿ ಬಿಡಿಸಿದ ಸಂಸದ ಶ್ರೇಯಸ್‌

KannadaprabhaNewsNetwork | Published : Jul 6, 2024 12:51 AM

ಸಾರಾಂಶ

ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಸಂಸದ ಶ್ರೇಯಸ್‌ ಎಂ.ಪಟೇಲ್ ಅವರು ಸಂಸದರಾದ ನಂತರ ಕರೆದಿದ್ದ ಪ್ರಥಮ ಸಭೆಯಲ್ಲೇ ಅಧಿಕಾರಿಗಳ ಕುರ್ಚಿ ಖಾಲಿ ಇದ್ದದ್ದನ್ನು ಕಂಡು ಏರು ಧ್ವನಿಯಲ್ಲಿ ಪ್ರಶ್ನಿಸಿ, ನಾನೇ ಒಂದು ಗಂಟೆ ತಡವಾಗಿ ಬಂದಿದ್ದೇನೆ ಅದು ತಪ್ಪು ಎಂದು ಹೇಳಿ, ಬೇರೆಯವರು ಇಲ್ಲಿ ಗೌರವದಿಂದ ಕಾಯುತ್ತಿಲ್ಲವಾ? ಎಂದು ತಹಸೀಲ್ದಾರ್‌ಗೆ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ "ನಾನೇ ಒಂದು ಗಂಟೆ ತಡವಾಗಿ ಬಂದಿದ್ದೇನೆ, ಈಗ ನಾನು ಅವರಿಗಾಗಿ ಕಾಯಬೇಕಾ? ಸಭೆಗೆ ಒಂದು ಗೌರವ ಬೇಡವಾ?, ತಾಲೂಕಿನ ಮೂರು ಹೋಬಳಿಗೂ ನೀವು ಒಬ್ಬರೇ ಕೆಲಸ ಮಾಡುತ್ತೀರ, ಉಳಿದ ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲಿ ಹೋದರು? ಬೇರೆ ಇಲಾಖೆ ಅಧಿಕಾರಿಗಳು ಬಂದಿರುವಾಗ ಕಂದಾಯ ಇಲಾಖೆಯವರು ಎಲ್ಲಿ? ಒಬ್ಬ ಡೆಂಘೀ, ಒಬ್ಬ ವಿಜಿಲೆನ್ಸ್, ಒಬ್ಬ ಅದು ಎಂದರೇ ಹೇಗೆ " ಎಂದು ಸಂಸದ ಶ್ರೇಯುಸ್ ಎಂ.ಪಟೇಲ್ ಅವರು ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ ಅವರನ್ನ ತರಾಟೆಗೆ ತೆಗೆದುಕೊಂಡರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಸಂಸದ ಶ್ರೇಯಸ್‌ ಎಂ.ಪಟೇಲ್ ಅವರು ಸಂಸದರಾದ ನಂತರ ಕರೆದಿದ್ದ ಪ್ರಥಮ ಸಭೆಯಲ್ಲೇ ಅಧಿಕಾರಿಗಳ ಕುರ್ಚಿ ಖಾಲಿ ಇದ್ದದ್ದನ್ನು ಕಂಡು ಏರು ಧ್ವನಿಯಲ್ಲಿ ಪ್ರಶ್ನಿಸಿ, ನಾನೇ ಒಂದು ಗಂಟೆ ತಡವಾಗಿ ಬಂದಿದ್ದೇನೆ ಅದು ತಪ್ಪು ಎಂದು ಹೇಳಿ, ಬೇರೆಯವರು ಇಲ್ಲಿ ಗೌರವದಿಂದ ಕಾಯುತ್ತಿಲ್ಲವಾ? ಬೇರೆಯವರು ಬಂದಾಗ ಸಭೆ ಹೀಗಿರುತ್ತಾ, ಇಷ್ಟು ದಿನ ಏನಾಗಿತ್ತೊ ನನಗೆ ಬೇಡ ಅಥವಾ ತಾಲೂಕು ಕಚೇರಿ ನಿಮ್ಮ ಹಿಡಿತದಲ್ಲಿ ಇಲ್ಲವೆಂದು ತಿಳಿಸಿ ಎಂದು ತಹಸೀಲ್ದಾರ್‌ಗೆ ಪ್ರಶ್ನಿಸಿದರು.

ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರು ನನಗೆ ಭೇದಭಾವ ಇಲ್ಲ, ನಿಮ್ಮ ಬಗ್ಗೆ ಗೌರವವಿಲ್ಲವೆಂದು ತಪ್ಪು ತಿಳಿಯಬೇಡಿ, ನಾನು ತಾಲೂಕು ಕಚೇರಿಯಲ್ಲಿ ೨ ವರ್ಷದಿಂದ ಕೆಲಸ ಮಾಡಿದ್ದೇನೆ ಎಂದು ತಿಳಿಸಿ, ತಪ್ಪು ತಿಳಿಯಬೇಡಿ, ತಪ್ಪಾಗಿದೆ ಕ್ಷಮಿಸಿ ಎಂದಾಗ ನೀವು ಹಿರಿಯರು, ನಾನು ನಿಮ್ಮಗಿಂದ ಚಿಕ್ಕವನು, ಪದೇ ಪದೆ ನೀವು ಕ್ಷಮೆ ಕೇಳುವುದು ಬೇಡವೆಂದು ತಿಳಿಸಿ, ಸಭೆ ಪ್ರಾರಂಭಿಸಿದರು.

ಜಿಲ್ಲಾ ಪಂಚಾಯತ್ ಎಂಜಿನಿಯರ್ ಪ್ರಸನ್ನ, ತಾ.ಪಂ. ಇಒ ಕುಸುಮಾಧರ್, ಕೃಷಿ ಇಲಾಖೆ ಸಕಾಯಕ ನಿರ್ದೇಶಕಿ ಕೆ.ಎಚ್.ಸಪ್ನ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಘು, ಸಿಡಿಪಿಒ ಜ್ಯೋತಿ ಹಾಗೂ ಇತರರಿಂದ ಅವರ ಇಲಾಖೆಯ ಪ್ರಗತಿ ಹಾಗೂ ಅಗತ್ಯವಿರುವ ಸೌಲಭ್ಯ ಮತ್ತು ಸಮಸ್ಯೆ ಕುರಿತು ಚರ್ಚಿಸಿದರು. ಶಾಸಕರು ಹಾಗೂ ಸಂಸದರು ಬೇರೆ ಬೇರೆ ಪಕ್ಷವಾದ್ದರಿಂದ ತಾಲೂಕಿನಲ್ಲಿ ನಿಮಗೆ ಇರುಸು ಮುರುಸು ಇರಬಹುದು, ಆದರೆ ಹಿಂದೆ ಹಲವಾರು ವ್ಯತ್ಯಾಸಗಳ ಬಗ್ಗೆ ನಾನು ಕಂಡಿದ್ದೇನೆ. ಎರಡು ಕಡೆ ನೀವು ಬ್ಯಾಲೆನ್ಸ್ ಮಾಡಬೇಕು, ನಾನು ಅದೇ ಆಗಬೇಕು, ಇದೆ ಆಗಬೇಕು ಎಂದು ಹಠ ಮಾಡಲ್ಲ, ನನಗೂ ಅರ್ಥವಾಗುತ್ತೆ. ಆದ್ದರಿಂದ ಪ್ರಾಮಾಣಿಕಾಗಿ ಕೆಲಸ ಮಾಡಿ, ನಾನು ತೊಂದರೆ ಮಾಡಲ್ಲ, ನಮ್ಮವರ ಹಾಗೂ ಸಾರ್ವಜನಿಕರ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಅವರಿಗೆ ಕೆಲವು ನಿರ್ದಿಷ್ಟ ಸ್ಥಳಗಳನ್ನು ಹೆಸರಿಸಿ, ಆ ಸ್ಥಳಗಳಲ್ಲಿ ಗುಂಡಿ ಮುಚ್ಚಿಸಿ, ತುಂಬಾ ಫೋನ್ ಕರೆಗಳು ಬರುತ್ತಿದೆ ಮತ್ತು ಡೆಂಘೀ ಹೆಚ್ಚಿರುವ ಕಾರಣ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.*ಬಾಕ್ಸ್‌:

ತಾಲೂಕಲ್ಲಿ ಡೆಂಘೀ ಕಾಯಿಲೆಯಿಂದ ಮೃತಪಟ್ವವರ ಸಂಖ್ಯೆ ಹೆಚ್ಚಿರುವ ಕಾರಣದಿಂದ ಅಧಿಕಾರಿಗಳ ಸಭೆ ಕರೆದು, ಡೆಂಘೀ ನಿಯಂತ್ರಣ ಕುರಿತು ಮಾಹಿತಿ ಪಡೆಯುವ ಜತೆಗೆ ಜಿಲ್ಲಾ ಪಂಚಾಯತ್, ತಾ.ಪಂ., ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಿಡಿಪಿಒ ಅವರಿಂದ ಮಾಹಿತಿ ಪಡೆದು, ಕಂದಾಯ ಇಲಾಖೆಯಲ್ಲಿ ಕುಲಂಕಷವಾಗಿ ಕಾನೂನು ಪರಿಮಿತಿಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.

-ಶ್ರೇಯಸ್ ಎಂ.ಪಟೇಲ್ , ಸಂಸದ

Share this article