ಮುದ್ದಂಡ ಹಾಕಿ ಉತ್ಸವದ ವೆಬ್ ಸೈಟ್ ಅನಾವರಣ

KannadaprabhaNewsNetwork | Published : Nov 10, 2024 1:55 AM

ಖಾಸಗಿ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿ ಹಾಕಿ ಉತ್ಸವದ ವೆಬ್‌ಸೈಟ್‌ ಬಿಡುಗಡೆ ಮಾಡಲಾಯಿತು. ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ವೆಬ್‌ಸೈಟ್‌ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕುಟುಂಬಗಳ ನಡುವೆ ನಡೆಯಲಿರುವ 25ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವದ ಜವಾಬ್ದಾರಿಯನ್ನು ಮುದ್ದಂಡ ಕುಟುಂಬ ವಹಿಸಿಕೊಂಡಿದ್ದು, ಮಡಿಕೇರಿಯಲ್ಲಿ 2025ರ ಮಾರ್ಚ್-ಏಪ್ರಿಲ್ ನಲ್ಲಿ ಹಾಕಿ ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ ಶುಕ್ರವಾರ ರಾತ್ರಿ ಹಾಕಿ ಉತ್ಸವದ ವೆಬ್ ಸೈಟ್ ಬಿಡುಗಡೆ ಮಾಡಲಾಯಿತು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮುದ್ದಂಡ ಹಾಕಿ ಉತ್ಸವ ನಡೆಯಲಿದ್ದು, ಕಳೆದ ಬಾರಿ ನಡೆದ ಕುಂಡ್ಯೋಳಂಡ ಹಾಕಿ ಉತ್ಸವದಲ್ಲಿ ಪಾಲ್ಗೊಂಡ ತಂಡಕ್ಕಿಂತ ಹೆಚ್ಚಿನ ತಂಡ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಈ ಬಾರಿ ಗಿನ್ನಿಸ್ ದಾಖಲೆ ಮಾಡಲು ಮುದ್ದಂಡ ಕುಟುಂಬ ಪಣ ತೊಟ್ಟಿದೆ.

ವೈಬ್ ಸೈಟ್ ಬಿಡುಗಡೆ ಮಾಡಿದ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, 2033ರ ವರೆಗೆ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಸಲು ಸುಮಾರು 8 ಕುಟುಂಬಗಳು ಮುಂದೆ ಬಂದಿದೆ. 25ನೇ ವರ್ಷದ ಹಾಕಿ ಉತ್ಸವವನ್ನು ಮುದ್ದಂಡ ಕುಟುಂಬ ವಹಿಸಿಕೊಂಡಿದ್ದು, ಕಳೆದ ಬಾರಿಗಿಂತ ಹೆಚ್ಚು ತಂಡಗಳು ಪಾಲ್ಗೊಳ್ಳುವಂತೆ ಮಾಡಿ ಗಿನ್ನಿಸ್ ದಾಖಲೆ ಮತ್ತೊಮ್ಮೆ ಆಗಲಿ ಎಂದರು.

ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರುವ ನಿಟ್ಟಿನಲ್ಲಿ ಅಂದು ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರು ಕೊಡವ ಕೌಟುಂಬಿಕ ಹಾಕಿ ಉತ್ಸವ ಆರಂಭಿಸಿದರು. ಇಂದು ಹಾಕಿ ಉತ್ಸವ ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಈ ಬಾರಿ ನಡೆಯಲಿರುವ ಮುದ್ದಂಡ ಹಾಕಿ ಉತ್ಸವಕ್ಕೆ ಕೊಡವ ಹಾಕಿ ಅಕಾಡೆಮಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮುದ್ದಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಶಿನ್ ಸುಬ್ಬಯ್ಯ ಮಾತನಾಡಿ, 1997ರಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವ ಆರಂಭವಾಗಿದೆ. 60 ತಂಡದಿಂದ ಆರಂಭವಾದ ಉತ್ಸವ ಇಂದು 360 ತಂಡಗಳು ಪಾಲ್ಗೊಂಡು ಗಿನ್ನಿಸ್ ದಾಖಲೆ ಮಾಡಿದೆ. ಈ ಬಾರಿಯೂ ಮುದ್ದಂಡ ಕುಟುಂಬದಿಂದ ವಿಶೇಷ ರೀತಿಯಲ್ಲಿ ಹಾಕಿ ಉತ್ಸವವನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಕಿ ಉತ್ಸವದಲ್ಲಿ ತಂಡಗಳ‌ ನೋಂದಣಿಗೆ ಆನ್ ಲೈನ್ ನಲ್ಲಿ ಅವಕಾಶ ಮಾಡಲಾಗಿದೆ. 25ನೇ ವರ್ಷದ ಬೆಳ್ಳಿ ಮಹೋತ್ಸವವನ್ನು ಯಶಸ್ವಿಯಾಗಿ ಮಾಡೋಣ ಎಂದರು.

ಹಾಕಿ ಪಂದ್ಯಾವಳಿಯ ಗೌರವ ಅಧ್ಯಕ್ಷರಾದ ಎಂ.ಬಿ. ದೇವಯ್ಯ ಮಾತನಾಡಿ ಕುಟುಂಬದ ಹಿರಿಯರು ಹಾಕಿ ಅಕಾಡೆಮಿ ಸಹಕಾರದಲ್ಲಿ ಈ ಬಾರಿ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ. 25ನೇ ವರ್ಷದ ಕಾರ್ಯಕ್ರಮ ಆಯೋಜನೆಗೆ ನಮಗೆ ಸಿಕ್ಕಿರೋದು ಬಹಳ ಸಂತೋಷವಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ಗುರಿ ಹೊಂದಿದೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದೇವೆ. ಕೆಲಸಗಳನ್ನು ಆರಂಭಿಸಿದ್ದು, ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು.

ಶಕ್ತಿ ಪತ್ರಿಕೆಯ ರಾಜೇಂದ್ರ ಮಾತನಾಡಿ, ಹಾಕಿ ಕೊಡಗಿನಲ್ಲಿ ರಕ್ತಗತವಾಗಿ ಬಂದಿದೆ. ಹಾಕಿ ಉತ್ಸವದಿಂದ ಅನೇಕ ಪ್ರತಿಭೆಗಳು ಹೊರ ಬಂದಿದೆ. ಹಾಕಿ ಇಂಡಿಯಾದಲ್ಲಿ ನಮಗೆ ಪರಿಗಣನೆ ಮಾಡುತ್ತಿಲ್ಲ. ಆದ್ದರಿಂದ ಕೊಡಗಿನವರಿಗೆ ಸದಸ್ಯತ್ವ ನೀಡುವಂತೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಆದ್ಯ ಪೊನ್ನಣ್ಣ, ರಂಜಿತ್ ಪೊನ್ನಪ್ಪ, ಚಂಗಪ್ಪ, ದಿವ್ಯ, ಉಳ್ಳಿಯಡ ಪೂವಯ್ಯ ಮತ್ತಿತರರು ಇದ್ದರು.

25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ನಮ್ಮ ಕುಟುಂಬ ವಹಿಸಿಕೊಂಡಿದ್ದು, ಈ ಬಾರಿ ಹಲವು ವಿಶೇಷತೆಗಳೊಂದಿಗೆ ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಕಿ ಉತ್ಸವ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಕಿ ಕ್ರೀಡೆಯೊಂದಿಗೆ ಇತರೆ ಕ್ರೀಡೆಗಳನ್ನು ಕೂಡ ಆಯೋಜಿಸಲು ನಿರ್ಧರಿಸಲಾಗಿದೆ. ಈ ಹಾಕಿ ಉತ್ಸವಕ್ಕೆ ಎಲ್ಲರ ಸಹಕಾರ ಇರಲಿ ಎಂದು ಮುದ್ದಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಶಿನ್ ಸುಬ್ಬಯ್ಯ ಹೇಳಿದರು.