ಕನ್ನಡಪ್ರಭ ವಾರ್ತೆ ಹನೂರು
ಪವಾಡ ಪುರುಷ ಘನನಿಲಿ ಸಿದ್ದಪ್ಪಾಜಿ ಚಿಕ್ಕಲೂರು ಜಾತ್ರಾ ಮಹೋತ್ಸವ ಪ್ರಯುಕ್ತ ಮುಡಿಸೇವೆ ಹಾಗೂ ವಿವಿಧ ಉತ್ಸವಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.ಧಾರ್ಮಿಕ ಪುಣ್ಯ ಸಿದ್ದಪ್ಪಾಜಿ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಲಕ್ಷಾಂತರ ಭಕ್ತರು ಜಾತ್ರೆ ಆಗಮಿಸಿ ಇಷ್ಟಾರ್ಥ ಸಿದ್ಧಿಸುವಂತೆ ಪೂಜೆ ಸಲ್ಲಿಸಿ ವಿವಿಧ ಉತ್ಸವಗಳಲ್ಲಿ ಸಿದ್ದಪ್ಪಾಜಿ ಭಕ್ತರು ಭಾಗವಹಿಸಿದ್ದರು.
ವ್ಯಾಪಾರ ವಹಿವಾಟು ಜೋರು:ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಅಂಗವಾಗಿ ಜಾತ್ರೆಗೆ ಲಕ್ಷಾಂತರ ಭಕ್ತರು ಪಾಲ್ಗೊಂಡ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ತಾತ್ಕಾಲಿಕ ಆಸ್ಪತ್ರೆ ನಿಯೋಜನೆ:ಚಿಕ್ಕಲೂರು ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಬರುವ ಲಕ್ಷಾಂತರ ಭಕ್ತರು ಹಾಗೂ ವಯೋವೃದ್ಧರು ಬರುವ ಕಾರಣ ದೇವಾಲಯದ ಸುತ್ತಲೂ ಇರುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ ಕೊರೋನಾದಂತಹ ಮಹಾಮಾರಿ ಇರುವುದರಿಂದ ಪ್ರತಿಯೊಬ್ಬರು ಮಾಸ್ಕ್ ಬಳಸಿ ಜಾಗೃತರಾಗಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆರೋಗ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ವತಿಯಿಂದ ಚಿಕ್ಕಲೂರು ಜಾತ್ರೆ ಮಹೋತ್ಸವದಲ್ಲಿ ಆಸ್ಪತ್ರೆ ತೆರೆದು ಸಿಬ್ಬಂದಿಯನ್ನು ನಿಯೋಜನೆ ಮಾಡಿ ಅರಿವು ಕಾರ್ಯಕ್ರಮಗಳನ್ನು ಮಾಡಲಾಗಿದೆ.
ಸಿದ್ದಪ್ಪಾಜಿ ಕಥ ಪ್ರಸಂಗ: ಚಿಕ್ಕಲ್ಲೂರು ಜಾತ್ರೆ ನಡೆಯುತ್ತಿರುವ ಪ್ರಯುಕ್ತ ಘನನಿಲಿ ಸಿದ್ದಪ್ಪಾಜಿ ಮಂಟೇಸ್ವಾಮಿ ಕಥ ಪ್ರಸಂಗವನ್ನು ಏರ್ಪಡಿಸಲಾಗಿತ್ತು. ಜಾತ್ರೆಗೆ ಬಂದಿದ್ದ ಭಕ್ತರಿಗೆ ಕಥ ಕೇಳುವ ಸ್ಥಳದಲ್ಲಿ ವ್ಯವಸ್ಥಿತವಾಗಿ ಭಕ್ತರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು.ಪ್ರಾಣಿಬಲಿ ನಿಷೇಧ:
ಚಿಕ್ಕಲ್ಲೂರು ಜಾತ್ರೆ ಐದು ದಿನಗಳು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಚಂದ್ರಮಂಡಲ ಉತ್ಸವ ಹಾಗೂ ವಿವಿಧ ಉತ್ಸವಗಳು ಸೇರಿದಂತೆ ಮುಡಿಸೇವೆ ಹಾಗೂ ಪಂಕ್ತಿ ಸೇವೆ ಭಾನುವಾರ ನಡೆಯುವುದರಿಂದ ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧ ಮಾಡಿರುವುದರಿಂದ ಚಿಕ್ಕಲೂರು ಜಾತ್ರೆಯಲ್ಲಿ ಸಾತ್ವಿಕ ಪೂಜೆ ಸಲ್ಲಿಸಿ ಭಕ್ತರು ಪ್ರಾಣಿ ಬಲಿ ಕೈ ಬಿಡುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ನಾಳೆ ನಡೆಯುವ ಪಂಕ್ತಿ ಸೇವೆ ಬದಲು ಸಿಹಿ ಊಟ ಮಾಡಿ ತಮ್ಮ ನೆಂಟರಿಷ್ಟರಿಗೆ ನೀಡುವಂತೆ ಜಿಲ್ಲಾಡಳಿತ ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.ಕಟ್ಟುನಿಟ್ಟಿನ ಕ್ರಮ:
ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ನೆರೆಯ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಇಲಾಖೆ ಆಯಾ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ನಿಯೋಜನೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.